ನಕಲಿ ಆಯುಷ್ಮಾನ್ ಭಾರತ ವೆಬ್‌ಸೈಟ್ ಮೂಲಕ ಸಾವಿರಾರು ಜನರಿಗೆ ವಂಚನೆ: ನಾಲ್ವರ ಬಂಧನ

Update: 2020-06-01 14:05 GMT

ಹೊಸದಿಲ್ಲಿ,ಜೂ.1: ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಯೋಜನೆಯಡಿ ಉದ್ಯೋಗಗಳ ಭರವಸೆ ನೀಡಿ 4,000ಕ್ಕೂ ಅಧಿಕ ಜನರನ್ನು ವಂಚಿಸಿರುವ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 ಉಮೇಶ್ ,ರಜತ ಸಿಂಗ್, ಗೌರವ್ ಮತ್ತು ಸೀಮಾರಾಣಿ ಶರ್ಮಾ ಬಂಧಿತ ಆರೋಪಿಗಳಾಗಿದ್ದು,ಸರಕಾರದ ಆಯುಷ್ಮಾನ್ ಭಾರತ ಜಾಲತಾಣವನ್ನು ಹೋಲುವ ನಕಲಿ ವೆಬ್‌ಸೈಟ್‌ನ್ನು ಸೃಷ್ಟಿಸಿ ಸಾವಿರಾರು ಉದ್ಯೋಗಗಳಿಗಾಗಿ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಪ್ರತಿ ಉದ್ಯೋಗಾಕಾಂಕ್ಷಿಗೆ ನೋಂದಣಿ ಶುಲ್ಕವೆಂದು 300ರಿಂದ 500 ರೂ.ಗಳನ್ನು ವಿಧಿಸುತ್ತಿದ್ದರು ಎಂದು ಪೊಲೀಸರು ಸೋಮವಾರ ಇಲ್ಲಿ ತಿಳಿಸಿದರು.

ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಅನುಷ್ಠಾನಿಸುತ್ತಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಈ ಬಗ್ಗೆ ಪೊಲೀಸ್ ದೂರನ್ನು ಸಲ್ಲಿಸಿತ್ತು.

ತಾಂತ್ರಿಕ ವಿಶ್ಲೇಷಣೆಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದು,ಅವರಿಂದ ಒಂದು ಲ್ಯಾಪ್‌ಟಾಪ್,ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ (ಸೈಬರ್ ಘಟಕ) ಅನ್ಯೇಶ ರಾಯ್ ಅವರು ತಿಳಿಸಿದರು.

ಜನರನ್ನು ವಂಚಿಸಲು ತಾವು ಸಂಚು ಹೂಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಅವರು ಮೊದಲು ಆಯುಷ್ಮಾನ್ ಯೋಜನಾ ಟ್ರಸ್ಟ್‌ನ್ನು ರಚಿಸಿದ್ದು,ಆರೋಪಿಗಳ ಪೈಕಿ ವೆಬ್ ಡಿಸೈನರ್ ಆಗಿರುವ ರಜತ ಸಿಂಗ್ ನಕಲಿ ವೆಬ್‌ಸೈಟ್‌ನ್ನು ರೂಪಿಸಿದ್ದ ಎಂದರು.

 ಪ್ರಕರಣದಲ್ಲಿಯ ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News