1,000 ರೋಗಿಗಳನ್ನು ಗುಣಪಡಿಸಿದೆ ಈ ಕೋವಿಡ್ ಆಸ್ಪತ್ರೆ

Update: 2020-06-01 14:10 GMT

ಭೋಪಾಲ,ಜೂ.1: ಮಧ್ಯಪ್ರದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಏರಿಕೆಯ ನಡುವೆಯೇ ರಾಜಧಾನಿ ಭೋಪಾಲ ಸೋಮವಾರ ವೈದ್ಯಕೀಯ ಸಂಭ್ರಮವೊಂದಕ್ಕೆ ಸಾಕ್ಷಿಯಾಯಿತು. ಕೋವಿಡ್-19 ರೋಗಿಗಳಿಗಾಗಿಯೇ ಇರುವ ಇಲ್ಲಿಯ ಚಿರಾಯು ಮೆಡಿಕಲ್ ಕಾಲೇಜು ಆಸ್ಪತ್ರೆಯು 1,000 ರೋಗಿಗಳನ್ನು ಗುಣಪಡಿಸಿ ಬಿಡುಗಡೆಗೊಳಿಸುವ ಮೂಲಕ ಇಂತಹ ಸಾಧನೆ ಮಾಡಿದ ದೇಶದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 ಸೋಮವಾರ ಈ ಆಸ್ಪತ್ರೆಯಿಂದ 108 ಕೊರೋನ ವೈರಸ್ ರೋಗಿಗಳು ಬಿಡುಗಡೆಗೊಂಡಿದ್ದು, ಭೋಪಾಲದಲ್ಲಿ ರೋಗಿಗಳ ಚೇತರಿಕೆ ಶೇ.60ನ್ನು ಮೀರಿದೆ. 1,000 ರೋಗಿಗಳನ್ನು ಗುಣಮುಖಗೊಳಿಸಿದ ಸಂಭ್ರಮವನ್ನು ಆಚರಿಸಲು ರಾಜ್ಯದ ಆರೋಗ್ಯ ಸಚಿವ ನರೋತ್ತಮ ಮಿಶ್ರಾ ಅವರ ಉಪಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಪುಟ್ಟ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.

ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡು ಹಿಡಿಯಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ‘ಸಾಲಿಡಾರಿಟಿ ಟ್ರಯಲ್’ನಡಿ ಯಾದ್ರಚ್ಛಿಕ ನಿಯಂತ್ರಿತ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಈವರೆಗೆ ಅನುಮತಿ ಪಡೆದಿರುವ ಒಂಭತ್ತು ಆಸ್ಪತ್ರೆಗಳಲ್ಲಿ ಚಿರಾಯು ಮೆಡಿಕಲ್ ಕಾಲೇಜು ಆಸ್ಪತ್ರೆಯು ಒಂದಾಗಿದೆ.

ಮಧ್ಯಪ್ರದೇಶದಲ್ಲಿ ಈಗಾಗಲೇ 8,000ಕ್ಕೂ ಅಧಿಕ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News