ಮಧ್ಯದ ಸೀಟ್‌ಗಳನ್ನು ಖಾಲಿ ಬಿಡಿ, ಇಲ್ಲವೇ ಪ್ರಯಾಣಿಕರಿಗೆ ಮೈಮುಚ್ಚುವ ಗೌನ್ ನೀಡಿ

Update: 2020-06-01 14:42 GMT

ಹೊಸದಿಲ್ಲಿ,ಜೂ.1: ವಿಮಾನದಲ್ಲಿಯ ಮಧ್ಯದ ಸೀಟ್‌ಗಳನ್ನು ಖಾಲಿ ಬಿಡಲು ವಿಮಾನಯಾನ ಸಂಸ್ಥೆಗಳು ಪ್ರಯತ್ನಿಸಬೇಕು ಮತ್ತು ಪ್ರಯಾಣಿಕರ ಒತ್ತಡದಿಂದ ಈ ಸೀಟಗಳು ಭರ್ತಿಯಾದರೆ ಅವುಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಮೈಮುಚ್ಚುವ ಗೌನ್‌ಗಳನ್ನು ಒದಗಿಸಬೇಕು ಎಂದು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯವು ಸೋಮವಾರ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶ ನೀಡಿದೆ. ಪ್ರಯಾಣ ದರಗಳು ಹೆಚ್ಚುವುದರಿಂದ ಮಧ್ಯದ ಸೀಟ್‌ಗಳನ್ನು ಖಾಲಿ ಬಿಡುವುದು ಕಾರ್ಯಸಾಧ್ಯವಲ್ಲ ಎಂದು ಸರಕಾರವು ಈ ಹಿಂದೆ ಹೇಳಿತ್ತು.

 ಪ್ರಯಾಣಿಕರ ಸಂಖ್ಯೆ ಮತ್ತು ಆಸನ ಸಾಮರ್ಥ್ಯ ಅನುಮತಿಸಿದರೆ ಮಧ್ಯದ ಸೀಟ್‌ಗಳು ಖಾಲಿ ಉಳಿಯುವಂತೆ ಇತರ ಸೀಟ್‌ಗಳ ಹಂಚಿಕೆ ಮಾಡಬೇಕು. ಆದರೆ ಒಂದೇ ಕುಟುಂಬದ ಸದಸ್ಯರಾಗಿದ್ದರೆ ಒಟ್ಟಿಗೆ ಕುಳಿತುಕೊಳ್ಳಲು ಅವಕಾಶ ನೀಡಬಹುದು. ಪ್ರಯಾಣಿಕರ ಒತ್ತಡದಿಂದ ಮಧ್ಯದ ಸೀಟ್‌ಗಳು ಭರ್ತಿಯಾದರೆ ಅಂತಹ ಪ್ರಯಾಣಿಕರಿಗೆ ಮಾಸ್ಕ್ ಮತ್ತು ಫೇಸ್ ಶೀಲ್ಡ್‌ಗಳ ಜೊತೆಗೆ ಶರೀರವನ್ನು ಸಂಪೂರ್ಣವಾಗಿ ಆವರಿಸುವ ಗೌನ್‌ನ್ನು ಹೆಚ್ಚುವರಿಯಾಗಿ ಒದಗಿಸಬೇಕು ಎಂದಿರುವ ಡಿಜಿಸಿಎ,ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಈಗಾಗಲೇ ಅಸ್ತಿತ್ವದಲ್ಲಿರುವ ಇತರ ಸುರಕ್ಷತಾ ಕ್ರಮಗಳನ್ನು ಮುಂದುವರಿಸುವಂತೆಯೂ ಸೂಚಿಸಿದೆ.

ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳು ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನಗಳು ಮೇ 25ರಿಂದ ಪುನರಾರಂಭಗೊಂಡಿದ್ದು,ಅಂತರರಾಷ್ಟ್ರೀಯ ವಿಮಾನಯಾನಗಳು ಇನ್ನಷ್ಟೇ ಆರಂಭವಾಗಬೇಕಿವೆ.

 ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಸುರಕ್ಷಿತ ಅಂತರವನ್ನು ಕಾಯ್ದಕೊಳ್ಳಲು ವಿಮಾನಗಳಲ್ಲಿ ಮಧ್ಯದ ಸೀಟ್‌ಗಳನ್ನು ಖಾಲಿ ಬಿಡುವುದು ಅಗತ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News