ಖಾಸಗಿಯಾಗಿ ಜಾತಿ ಟೀಕೆ ಮಾಡಿದರೆ ಪರಿಶಿಷ್ಟ ಕಾಯ್ದೆಯಡಿ ಅಪರಾಧವಲ್ಲ: ಹರ್ಯಾಣ ಹೈಕೋರ್ಟ್

Update: 2020-06-01 14:58 GMT

ಹೊಸದಿಲ್ಲಿ, ಜೂ.1: ದೂರವಾಣಿ ಸಂಭಾಷಣೆಯ ಸಂದರ್ಭ ಜಾತಿ ಆಧಾರಿತ ಟೀಕೆಗಳನ್ನು ಮಾಡಿದಲ್ಲಿ ಅದನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ-1989ರಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ರವಿವಾರ ತೀರ್ಪು ನೀಡಿದೆ. ಈ ಟೀಕೆಗಳನ್ನು ‘ಸಾರ್ವಜನಿಕವಾಗಿ’ ಮಾಡದೆ ಇರುವ ಕಾರಣ, ಅವು ದೂರುದಾರನನ್ನು ಅಪಮಾನಗೊಳಿಸುವ ಉದ್ದೇಶ ಹೊಂದಿದೆ ಎಂದು ಭಾವಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.

ಜಾತಿ ನಿಂದನೆಯ ಆರೋಪಕ್ಕೆ ಸಂಬಂಧಿಸಿ ಹರ್ಯಾಣದ ಕುರುಕ್ಷೇತ್ರದ ಇಬ್ಬರು ನಿವಾಸಿಗಳ ವಿರುದ್ಧ ಸಲ್ಲಿಸಲಾಗಿದ್ದ ಎಫ್‌ಐಆರ್ ಅನ್ನು ರದ್ದುಪಡಿಸುತ್ತಾ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಆರೋಪಿಗಳು, 2017ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಗ್ರಾಮಪಂಚಾಯತ್ ಮುಖ್ಯಸ್ಥನಿಗೆ ದೂರವಾಣಿಯಲ್ಲಿ ಜಾತಿವಾದಿ ಟೀಕೆಗಳನ್ನು ಮಾಡಿದ್ದಾರೆಂದು ಆಪಾದಿಸಲಾಗಿತ್ತು. 2019ರ ಮೇನಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಇಬ್ಬರು ಆರೋಪಿಗಳ ವಿರುದ್ಧವೂ ದೋಷಾರೋಪ ದಾಖಲಿಸಲಾಗಿತ್ತು ಇದನ್ನು ಪ್ರಶ್ನಿಸಿ, ಆಪಾದಿತರು ಹೈಕೋರ್ಟ್ ಮೆಟ್ಟಲೇರಿದ್ದರು.

ಒಂದು ವೇಳೆ ಆರೋಪಿಯು ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿ ಸಮುದಾಯವೊಂದರ ಸದಸ್ಯನನ್ನು ಅಪಮಾನಿಸಿದಲ್ಲಿ ಅದನ್ನು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಬಹುದಾಗಿದೆ. ಎಂದು ನ್ಯಾಯಮೂರ್ತಿ ಗಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News