ಸಿಎಎ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಿ: ಮೋದಿ, ಅಮಿತ್ ಶಾಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟದ ಪತ್ರ

Update: 2020-06-01 15:06 GMT

ಹೊಸದಿಲ್ಲಿ, ಜೂ.1: ಭಾರತದಲ್ಲಿ ಹಲವಾರು ಮಾನವಹಕ್ಕುಗಳ ಹೋರಾಟ ಗಾರರನ್ನು ಏಕಪಕ್ಷೀಯವಾಗಿ ಬಂಧಿಸಲಾಗಿದೆಯೆಂದು ಆರೋಪಿಸಿ ಫ್ರಾನ್ಸ್ ಮೂಲದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟ (ಐಎಫ್‌ಎಚ್‌ಆರ್) ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರೆಂಬ ಕಾರಣಕ್ಕಾಗಿ ಸಾಮಾಜಿಕ ಹೋರಾಟಗಾರರ ಬಂಧಿಸಿರುವ ಬಗ್ಗೆ ಅದು ಆತಂಕ ವ್ಯಕ್ತಪಡಿಸಿದೆ.

ದಿಲ್ಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿದ್ದ ವಿದ್ಯಾರ್ಥಿ ನಾಯಕಿಯರಾದ ದೇವಾಂಗನ ಕಾಲಿಟಾ ಹಾಗೂ ನಟಾಶಾ ನರ್ವಾಲ್ ಅವರ ಬಂಧನವನ್ನು ಕೂಡಾ ಅದು ಖಂಡಿಸಿದೆ. ನ್ಯಾಯಯುತವಾದ ಮಾನವಹಕ್ಕು ಹೋರಾಟ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ್ದಕ್ಕಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ ಎಂದ ಐಎಫ್‌ಎಚ್‌ಆರ್ ಅಸಮಾಧಾನ ವ್ಯಕ್ತಪಡಿಸಿದೆ.

ಮಾನವಹಕ್ಕು ಹೋರಾಟಗಾರರಾದ ಮೀರಾನ್ ಹೈದರ್, ಗುಲಿಫ್ಶಾ ಫಾತಿಮಾ, ಸಫೂರಾ ಝರ್ಗಾರ್, ಶಿಫಾವುರ್ರಹ್ಮಾನ್, ಆಸೀಫ್‌ಇಕ್ಬಾಲ್, ಅಖಿಲ್ ಗೊಗೊಯ್, ಖಫೀಲ್ ಖಾನ್ ಹಾಗೂ ಉಮರ್ ಖಾಲಿದ್ ಅವರ ಬಂಧನದ ಬಗ್ಗೆಯೂ ಐಎಫ್‌ಎಚ್‌ಆರ್ ಆತಂಕ ವ್ಯಕ್ತಪಡಿಸಿದೆ. ಇವರೆಲ್ಲರನ್ನು 2020ರಲ್ಲಿ ದೇಶಾದ್ಯಂತ ಭುಗಿಲೆದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾತ್ರ ವಹಿಸಿದ ಆರೋಪದಲ್ಲಿ ಬಂಧಿಸಲಾಗಿದೆ.

ಮಹಿಳೆಯರು ಸೇರಿದಂತೆ ಮಾನವಹಕ್ಕು ಹೋರಾಟಗಾರರನ್ನು ಬಂಧಿಸುವಾಗ ಸೂಕ್ತ ವಿಧಿವಿಧಾನಗಳನ್ನು ಅನುಸರಿಲ್ಲವೆಂದು ಪತ್ರವು ಆರೋಪಿಸಿದೆ. ಮಾನವಹಕ್ಕು ಹೋರಾಟಗಾರ್ತಿ ಝರ್ಗಾರ್ ಅವರು ಗರ್ಭಿಣಿಯಾಗಿದ್ದರೂ, ಅವರನ್ನು ಏಕಾಂತ ಬಂಧನದಲ್ಲಿರಿಸಲಾಗಿದೆ .ಸಿಎಎ ಅನ್ನು ವಿರೋಧಿಸಿದ್ದಕ್ಕೆ ಪ್ರತೀಕಾರವಾಗಿ ಶರ್ಜಿಲ್ ಇಮಾಮ್, ಖಾಲಿದ್ ಸೈಫಿ ಸೇರಿದಂತೆ ಹಲವಾರು ಮಾನವಹಕ್ಕು ಹೋರಾಟಗಾರರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ಬಂಧಿಸಿ, ಕಿರುಕುಳ ನೀಡಲಾಗುತ್ತಿದೆ ಎಂದು ಪತ್ರವು ಆಪಾದಿಸಿದೆ.

ಭಾರತ ಸರಕಾರವು ತಕ್ಷಣವೇ ಹಾಗೂ ನಿಶರ್ತವಾಗಿ ಎಲ್ಲಾ ಮಾನವಹಕ್ಕು ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಹಾಗೂ ಈ ಪ್ರಕರಣಗಳಲ್ಲಿ ಮಾನವಹಕ್ಕು ಆಯೋಗವು ಮಧ್ಯಪ್ರವೇಶಿಸಬೇಕೆಂದು ಐಎಫ್‌ಎಚ್‌ಆರ್ ಪತ್ರದಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News