ಕಳವಾದ ಬೈಕ್ ಎರಡು ವಾರಗಳಲ್ಲಿ ಕೊರಿಯರ್ ಮೂಲಕ ಮನೆಗೆ ಬಂತು !

Update: 2020-06-01 15:35 GMT

ಕೊಯಂಬತ್ತೂರು, ಜೂ. 1: ರವಿವಾರ ಇಲ್ಲಿನ ನಿವಾಸಿ ಸುರೇಶ್ ಕುಮಾರ್ ಗೆ ಸ್ಥಳೀಯ ಕೊರಿಯರ್ ಕಚೇರಿಯೊಂದರಿಂದ ಕರೆ ಮಾಡಿ ನಿಮ್ಮ ಮನೆಗೆ ಬೈಕ್ ಒಂದನ್ನು ಡೆಲಿವರಿ ನೀಡಬೇಕಾಗಿದೆ ಎಂದಾಗ ಅವರಿಗೆ ದೊಡ್ಡ ಅಚ್ಚರಿಯೇನೂ ಆಗಲಿಲ್ಲ. ಎರಡು ವಾರಗಳ ಹಿಂದೆ ಕಳವಾಗಿದ್ದ ಆತನ ಬೈಕ್ ಅನ್ನು ಆರ್ ಸಿ ಯಲ್ಲಿರುವ ವಿಳಾಸ ನೋಡಿ ಕಳವು ಮಾಡಿದಾತನೇ ಆತನಿಗೆ ಕೊರಿಯರ್ ಮಾಡಿದ್ದ !

ಕಳೆದ ಮೇ 18ರಂದು ಕೊಯಂಬತ್ತೂರ್ ನ ಸುಲೂರ್ ನ ತನ್ನ ಲೇತ್ ಅಂಗಡಿಯೆದುರು ನಿಲ್ಲಿಸಿದ್ದ ಸುರೇಶ್ ಬೈಕನ್ನು ತನ್ನ ಊರಿಗೆ ಹೋಗಲು ಕಳವು ಮಾಡಿದ್ದು ಮನ್ನಾರ್ಗುಡಿ ನಿವಾಸಿ ಪ್ರಶಾಂತ್. ಈ ಬಗ್ಗೆ ಪೊಲೀಸರಲ್ಲಿ ದೂರು ನೀಡಿದಾಗ ಲಾಕ್ ಡೌನ್ ಮುಗಿಯದೆ ಈ ಬಗ್ಗೆ ತನಿಖೆ ಅಸಾಧ್ಯ ಎಂದು ಅವರು ಕೈಚೆಲ್ಲಿದ್ದರು.

ಆದರೆ ಕೈಕಟ್ಟಿ ಕೂರದ ಸುರೇಶ್ ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅದರಲ್ಲಿ ತನ್ನ ಬೈಕ್ ತೆಗೆದುಕೊಂಡು ಹೋಗುತ್ತಿರುವವನ ದೃಶ್ಯಗಳನ್ನು ಕಂಡು ಹಿಡಿದರು. ಆ ವಿಡಿಯೋವನ್ನು ಸ್ಥಳೀಯರಿಗೆ ತೋರಿಸಿ, ವಾಟ್ಸಾಪ್ ನಲ್ಲೂ ಹರಿಬಿಟ್ಟರು. ಆಗ ಬೈಕ್ ಕದ್ದುಕೊಂಡು ಹೋದ ಪ್ರಶಾಂತ್ ವಿವರ ಸುರೇಶ್ ಗೆ ಸಿಕ್ಕಿತು. ಕೂಡಲೇ ಪ್ರಶಾಂತ್ ಮನೆಗೆ ಸುರೇಶ್ ಹೋದರೂ ಅಲ್ಲಿ ಪ್ರಶಾಂತ್ ಇರಲಿಲ್ಲ. 

ಇಷ್ಟಾಗುವಾಗ ತನ್ನ ಕೃತ್ಯ ಬೆಳಕಿಗೆ ಬಂದಿದೆ ಎಂದು ಪ್ರಶಾಂತ್ ಗೆ ಗೊತ್ತಾಗಿ ಎಚ್ಚೆತ್ತುಕೊಂಡು ಮನ್ನಾರ್ಗುಡಿ ತಲುಪಿದ ಕೂಡಲೇ ಬೈಕನ್ನು ಕೊರಿಯರ್ ಮೂಲಕ ಸುರೇಶ್ ಗೆ ಕಳಿಸಿ ಬಿಟ್ಟಿದ್ದಾರೆ. ಆದರೆ ಬೈಕಿನ ಕೊರಿಯರ್ ವೆಚ್ಚ  1,400 ರೂ. ಮಾತ್ರ ಸುರೇಶ್ ಕೊಡಬೇಕಾಯಿತು. ಆದರೂ ಬೈಕ್ ಸುರಕ್ಷಿತವಾಗಿ ವಾಪಸ್ ಸಿಕ್ಕಿದ ಖುಷಿಯಲ್ಲಿ ಕೇಸ್ ಅನ್ನು ಬಿಟ್ಟು ಬಿಡಲು ನಿರ್ಧರಿಸಿದ್ದಾರೆ ಸುರೇಶ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News