ಬಿಹಾರಕ್ಕೆ ವಾಪಸಾಗುವ ವಲಸಿಗ ಕಾರ್ಮಿಕರಿಗೆ ಇನ್ನು ಮುಂದೆ ಕ್ವಾರಂಟೈನ್ ಇಲ್ಲ!

Update: 2020-06-02 05:52 GMT

 ಪಾಟ್ನಾ, ಜೂ.2: ಮಂಗಳವಾರದಿಂದ ಅನ್ವಯವಾಗುವಂತೆ ಬಿಹಾರಕ್ಕೆ ವಾಪಸಾಗುವ ವಲಸೆ ಕಾರ್ಮಿಕರನ್ನು ನೋಂದಾಯಿಸುವುದು ಅಥವಾ ಕ್ವಾರಂಟೈನ್‌ನಲ್ಲಿ ಇಡದೇ ಇರಲು ಸರಕಾರ ನಿರ್ಧರಿಸಿದೆ.

ಸೋಮವಾರದ ತನಕ ರಾಜ್ಯಕ್ಕೆ ವಾಪಸಾಗಿರುವವರನ್ನು ಮಾತ್ರ ನೋಂದಾಯಿಸಿ 5,000 ಅಧಿಕ ಕೇಂದ್ರಗಳಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಈ ತನಕ 13 ಲಕ್ಷ ವಲಸೆ ಕಾರ್ಮಿಕರನ್ನು ಈ ಕೇಂದ್ರಗಳಲ್ಲಿ ಇಡಲಾಗಿದೆ. ಈ ಕ್ವಾರಂಟೈನ್ ಕೇಂದ್ರಗಳನ್ನು ಜೂ.15ರಿಂದ ಮುಚ್ಚಲಾಗುತ್ತದೆ. ನೋಂದಾಯಿತ ವಲಸೆ ಕಾರ್ಮಿಕರ ಕೊನೆಯ ಬ್ಯಾಚ್‌ನ 14 ದಿನಗಳ ಕ್ವಾರಂಟೈನ್ ಅವಧಿ ಜೂ.15ಕ್ಕೆ ಮುಗಿಯುತ್ತದೆ.

ರೈಲ್ವೇ ನಿಲ್ದಾಣಗಳಲ್ಲಿ ಥರ್ಮಲ್ ಸ್ಟ್ರೀನಿಂಗ್‌ನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ. ಆದರೆ, ಅನಾರೋಗ್ಯದಲ್ಲಿರುವವರ ಚಿಕಿತ್ಸೆಗಾಗಿ ಪ್ರತಿ ನಿಲ್ದಾಣದಲ್ಲಿ ವೈದ್ಯಕೀಯ ಡೆಸ್ಕ್ ಇರಲಿದೆ.

ಬಿಹಾರಕ್ಕೆ ವಾಪಸಾಗುತ್ತಿರುವ ಹಲವು ವಲಸೆ ಕಾರ್ಮಿಕರಿಗೆ ಕೋವಿಡ್-19 ಇರುವುದು ದೃಢಪಡುತ್ತಿರುವ ಸಮಯದಲ್ಲೇ ರಾಜ್ಯ ಸರಕಾರ ಕ್ವಾರಂಟೈನ್ ಮಾಡದೇ ಇರಲು ನಿರ್ಧರಿಸಿದೆ. ಬಿಹಾರದಲ್ಲಿ 3,872 ದೃಢಪಟ್ಟ ಕೊರೋನ ಪ್ರಕರಣಗಳಿವೆ. ಇದರಲ್ಲಿ 2,743 ವಲಸೆ ಕಾರ್ಮಿಕರಿದ್ದಾರೆ. ಇವರೆಲ್ಲರೂ ಮೇ 3ರ ನಂತರ ರಾಜ್ಯಕ್ಕೆ ಮರಳಿದ್ದಾರೆ. ಮಹಾರಾಷ್ಟ್ರದಿಂದ ವಾಪಸಾಗಿರುವ ವಲಸಿಗರಲ್ಲಿ 677 ಕೇಸ್‌ಗಳು ಪತ್ತೆಯಾಗಿವೆ. ದಿಲ್ಲಿಯಿಂದ ವಾಪಸಾಗಿರುವ 628 ಮಂದಿ, ಗುಜರಾತ್‌ನಿಂದ ಬಂದಿರುವ 405 ಮಂದಿ ಹಾಗೂ ಹರ್ಯಾಣದಿಂದ ಬಂದಿರುವ 237 ಜನರಿಗೆ ಕೊರೋನ ಸೋಂಕು ತಗಲಿದೆ. ಉತ್ತರಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಳ ಹಾಗೂ ತೆಲಂಗಾಣ ರಾಜ್ಯಗಳಿಂದ ವಾಪಸಾಗಿರುವ ಕಾರ್ಮಿಕರಲ್ಲೂ ಕೊರೋನ ಸೋಂಕು ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News