22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ರೇಟಿಂಗ್ ತಗ್ಗಿಸಿದ ‘ಮೂಡೀಸ್’

Update: 2020-06-02 16:25 GMT

ಹೊಸದಿಲ್ಲಿ, ಜೂ.2: ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವಿಸಿಸ್ ಸುಮಾರು 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ರೇಟಿಂಗ್‌ನ್ನು ಕನಿಷ್ಠ ಹೂಡಿಕೆ ದರ್ಜೆಗೆ ತಗ್ಗಿಸಿದೆ.

ಭಾರತದ ರೇಟಿಂಗ್‌ನ್ನು ಬಿಎಎ2ನಿಂದ ಬಿಎಎ3ಗೆ ತಗ್ಗಿಸಿರುವ ಮೂಡಿಸ್,ಕಡಿಮೆ ಬೆಳವಣಿಗೆಯ ಮುಂದುವರಿಕೆ,ಸರಕಾರದ ವಿತ್ತೀಯ ಸ್ಥಿತಿಯ ಇನ್ನಷ್ಟು ಹದಗೆಡುವಿಕೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಒತ್ತಡ ಇವುಗಳ ಅಪಾಯವನ್ನು ಶಮನಿಸಲು ನೀತಿಗಳನ್ನು ರೂಪಿಸುವುದು ಮತ್ತು ಅವುಗಳನ್ನು ಅನುಷ್ಠಾನಿಸುವುದು ದೇಶದ ನೀತಿರೂಪಕ ಸಂಸ್ಥೆಗಳಿಗೆ ಸವಾಲನ್ನೊಡ್ಡಲಿದೆ ಎಂದು ಹೇಳಿದೆ. ಬಿಎಎ3 ಅತ್ಯಂತ ಕಳಪೆ ದರ್ಜೆಗಿಂತ ಒಂದು ಮೆಟ್ಟಿಲು ಮೇಲಿನದಾಗಿದೆ.

ಈ ಹಿಂದೆ ಭಾರತವು ಪರಮಾಣು ಪರೀಕ್ಷೆಯನ್ನು ನಡೆಸಿದ ಬಳಿಕ 1998,ಜೂ.19ರಂದು ಮೂಡಿಸ್ ಭಾರತದ ರೇಟಿಂಗ್‌ನ್ನು ತಗ್ಗಿಸಿತ್ತು. ಇದೀಗ ಮೂಡಿಸ್‌ನ ಬಿಎಎ3 ರೇಟಿಂಗ್ ಎಸ್ ಆ್ಯಂಡ್ ಪಿ ಮತ್ತು ಫಿಚ್ ಭಾರತಕ್ಕೆ ನಿಗದಿಗೊಳಿಸಿರುವ ಕನಿಷ್ಠ ಹೂಡಿಕೆ ದರ್ಜೆಯಾದ ಬಿಬಿಬಿ (ಮೈನಸ್)ಗೆ ಸರಿಸಮವಾಗಿದೆ.

ಎಂಟು ಕಂಪನಿಗಳು, ಮೂರು ಬ್ಯಾಂಕ್‌ಗಳ ರೇಟಿಂಗ್‌ಗೂ ಕುತ್ತು

ಮೂಡಿಸ್ ಇನ್ಫೋಸಿಸ್,ಟಿಸಿಎಸ್,ಒಎನ್‌ಜಿಸಿ ಸೇರಿದಂತೆ ಎಂಟು ಹಣಕಾಸೇತರ ಕಂಪನಿಗಳು ಮತ್ತು ಎಸ್‌ಬಿಐ,ಎಚ್‌ಡಿಎಫ್‌ಸಿ ಹಾಗೂ ಎಕ್ಸಿಮ್ ಬ್ಯಾಂಕ್‌ಗಳ ರೇಟಿಂಗ್‌ಗಳನ್ನೂ ಕೆಳದರ್ಜೆಗಿಳಿಸಿದೆ. ಎನ್‌ಟಿಪಿಸಿ, ಎನ್‌ಎಚ್‌ಎಐ,ಗೇಲ್ ಮತ್ತು ಅದಾನಿ ಗ್ರೀನ್ ಎನರ್ಜಿ ಸೇರಿದಂತೆ ಮೂಲಸೌಕರ್ಯ ಕ್ಷೇತ್ರದ ಏಳು ಕಂಪನಿಗಳ ರೇಟಿಂಗ್‌ಗಳನ್ನು ಅದು ಕಡಿತಗೊಳಿಸಿದೆ. ಐಆರ್‌ಎಫ್‌ಸಿ ಮತ್ತು ಹುಡ್ಕೋ ಕೂಡ ಈ ಸಾಲಿನಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News