‘ನಿಸರ್ಗ’ ಚಂಡಮಾರುತದ ಭೀತಿ: ಮಹಾರಾಷ್ಟ್ರ, ಗುಜರಾತ್‌ನಲ್ಲಿ ಹೈ ಅಲರ್ಟ್ ಘೋಷಣೆ

Update: 2020-06-02 18:18 GMT

ಮುಂಬೈ, ಜೂ.2: ಕೊರೋನ ವೈರಸ್ ಸೋಂಕಿನಿಂದ ಕಂಗೆಟ್ಟಿರುವ ಮಹಾರಾಷ್ಟ್ರಕ್ಕೆ ಈಗ ನಿಸರ್ಗ ಚಂಡಮಾರುತದ ಭೀತಿ ಎದುರಾಗಿದೆ. ತೀವ್ರ ಚಂಡಮಾರುತದ ಸ್ವರೂಪ ಪಡೆಯುತ್ತಿರುವ ನಿಸರ್ಗ ಚಂಡಮಾರುತ ಗಂಟೆಗೆ 120 ಕಿ.ಮೀ ವೇಗದ ಗಾಳಿಯೊಂದಿಗೆ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮುಂಬೈ ಹಾಗೂ ನೆರೆಯ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಎದುರಾಗಿರುವ ಚಂಡಮಾರುತದ ಸವಾಲನ್ನು ಎದುರಿಸಲು ಕೈಗೊಂಡಿರುವ ಪೂರ್ವಸಿದ್ಧತೆಯನ್ನು ಪರಿಶೀಲಿಸಿದ್ದು ಜನತೆ ಗರಿಷ್ಟ ಮುಂಜಾಗರೂಕತೆ ವಹಿಸಬೇಕು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

 ಜೂನ್ 3ರ ವೇಳೆಗೆ ಉತ್ತರ ಮಹಾರಾಷ್ಟ್ರ ಮತ್ತು ಸಮೀಪದ ದಕ್ಷಿಣ ಗುಜರಾತ್ ಕರಾವಳಿಗೆ ಅಪ್ಪಳಿಸಲಿರುವ ಚಂಡಮಾರುತ ಬಳಿಕ ಹರಿಹರೇಶ್ವರ ಮತ್ತು ದಾಮನ್ ಕರಾವಳಿಯ ಮೂಲಕ ಮಹಾರಾಷ್ಟ್ರವನ್ನು ದಾಟಲಿದೆ ಎಂದು ಇಲಾಖೆ ತಿಳಿಸಿದೆ. ಸೋಮವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯೊಂದಿಗೆ ವೀಡಿಯೊ ಸಂವಾದ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸರಕಾರ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‌ಡಿಆರ್‌ಎಫ್)ದ 30ಕ್ಕೂ ಹೆಚ್ಚು ತಂಡಗಳನ್ನು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ನಿಯೋಜಿಸಲಾಗಿದ್ದು ಇನ್ನೂ 5 ಹೆಚ್ಚುವರಿ ತಂಡಗಳಿಗೆ ಗುಜರಾತ್ ಬೇಡಿಕೆ ಸಲ್ಲಿಸಿದೆ. 6 ಮೀಸಲು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಪಾಯದ ಭೀತಿಯಲ್ಲಿರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ . ಗುಜರಾತ್‌ನ ಕರಾವಳಿ ಪ್ರದೇಶಗಳ ಗ್ರಾಮಗಳಿಂದ ಸುಮಾರು 20000 ಜನರನ್ನು ಸ್ಥಳಾಂತರಿಸಲಾಗುವುದು ಎಂದು ಎನ್‌ಡಿಆರ್‌ಎಫ್ ಮುಖ್ಯಸ್ಥ ಎಸ್‌ಎನ್ ಪ್ರದಾನ್ ಹೇಳಿದ್ದಾರೆ.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದು ಈಗಾಗಲೇ ಮೀನುಗಾರಿಕೆಗೆ ತೆರಳಿದವರು ತಕ್ಷಣ ದಡಕ್ಕೆ ಮರಳಲು ಸೂಚಿಸಲಾಗಿದ್ದು ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟವಾಗದಂತೆ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕೊರೋನ ವೈರಸ್ ರೋಗಿಗಳು ಚಿಕಿತ್ಸೆಗೆ ದಾಖಲಾಗದ ಆಸ್ಪತ್ರೆಗಳಲ್ಲಿ ಅಗತ್ಯದ ವೈದ್ಯಕೀಯ ನೆರವು ಒದಗಿಸಲಾಗುವುದು. ಮಹಾರಾಷ್ಟ್ರದಲ್ಲಿ ಅಧಿಕ ಪ್ರಮಾಣದಲ್ಲಿ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ವಿದ್ಯುಚ್ಛಕ್ತಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಗರಿಷ್ಟ ಪ್ರಯತ್ನ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News