ಮಹಾರಾಷ್ಟ್ರದಲ್ಲಿ 19,000 ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Update: 2020-06-03 05:28 GMT

  ಮುಂಬೈ, ಜೂ.3: ಮುಂಬೈನಿಂದ 100 ಕಿ.ಮೀ.ದೂರದಲ್ಲಿರುವ ಅಲಿಬಾಗ್‌ನಲ್ಲಿ ನಿಸರ್ಗ ಚಂಡಮಾರುತ 100 ಕಿ.ಮೀ.ವೇಗದಲ್ಲಿ ಅಪ್ಪಳಿಸಲಿರುವ ಕೆಲವೇ ಗಂಟೆಗಳ ಮೊದಲು ಕೋವಿಡ್-19 ರೋಗಿಗಳ ಸಹಿತ 19,000ಕ್ಕೂ ಅಧಿಕ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಜಿಲ್ಲಾಡಳಿತ ಸ್ಥಳಾಂತರ ಮಾಡಿದೆ.

ನಿಸರ್ಗ ಚಂಡಮಾರುತ ಎರಡು ವಾರಗಳಲ್ಲಿ ಭಾರತಕ್ಕೆ ಅಪ್ಪಳಿಸುತ್ತಿರುವ ಎರಡನೇ ಚಂಡಮಾರುತವಾಗಿದೆ. ವಾಣಿಜ್ಯ ನಗರಿ ಮುಂಬೈಗೆ 100 ವರ್ಷಗಳ ಬಳಿಕ ಮೊದಲ ಬಾರಿ ಚಂಡಮಾರುತ ಬೀಸುತ್ತಿದೆ. ಮುಂಬೈ ಮಹಾನಗರ ಕೋವಿಡ್-19ನಿಂದ ಹೆಚ್ಚು ಬಾಧಿತವಾಗಿರುವ ದೇಶದ ಪ್ರಮುಖ ನಗರಗಳ ಪೈಕಿ ಒಂದಾಗಿದ್ದು, ಈ ನಗರದಲ್ಲಿ 41,000ಕ್ಕೂ ಅಧಿಕ ಕೋವಿಡ್-19 ರೋಗಿಗಳಿದ್ದಾರೆ.

ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದ ತನಕ ಕರಾವಳಿಯ ಸಮೀಪ ಜನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ನಗರ ಹಾಗೂ ಉಪನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಕರಾವಳಿ ಪ್ರದೇಶಗಳಿಗೆ ಹತ್ತಿರವಾಗಿರುವ ಸ್ಥಳಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಮುಂಬೈನ ದಾದರ್‌ನಲ್ಲಿರುವ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯಚಟುವಟಿಕೆವನ್ನು ಸ್ಥಗಿತಗೊಳಿಸಲಾಗಿದೆ. ಬೀಚ್‌ಗೆ ಹತ್ತಿರವಿರುವವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆ ಏನು ಮಾಡಬೇಕು, ಮಾಡಬಾರದು ಎಂಬ ಪಟ್ಟಿಯನ್ನು ಸಿದ್ಧಪಡಿಸಿದ್ದು, ಜನರು ಮನೆಯಲ್ಲಿ ತುರ್ತು ಕಿಟ್‌ನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿದೆ. ಕಿಟಕಿಗಳಿಂದ ದೂರವಿರಿ ಎಂದು ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News