ಫ್ಯಾಕ್ಟ್ ಚೆಕ್: ಭಾರತವನ್ನು ಬೆಂಬಲಿಸಿ ವಿಶ್ವ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಹರಡಿದ ‘ಪೋಸ್ಟ್ ಕಾರ್ಡ್’

Update: 2020-06-03 12:42 GMT

ಹೊಸದಿಲ್ಲಿ: ಕಳೆದ ಮೂರು ವಾರಗಳಿಂದ ಲಡಾಖ್ ಪ್ರಾಂತ್ಯದಲ್ಲಿ ಭಾರತ-ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿರುವಂತೆಯೇ ಸದಾ ಸುಳ್ಳುಗಳನ್ನು ಹಂಚುವ ಕುಖ್ಯಾತಿ ಗಳಿಸಿರುವ ‘ಪೋಸ್ಟ್ ಕಾರ್ಡ್ ನ್ಯೂಸ್’ ಇತ್ತೀಚೆಗೆ  ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಶೇರ್ ಮಾಡಿತ್ತು. ಆ ಪೋಸ್ಟ್ ನಲ್ಲಿ ಭಾರತ-ಚೀನಾ  ವಿವಾದ ವಿಚಾರದಲ್ಲಿ ಭಾರತವನ್ನು ಬೆಂಬಲಿಸಿ ಇಸ್ರೇಲ್, ರಷ್ಯಾ, ಅಮೆರಿಕಾ ಮತ್ತು ಜಪಾನ್ ದೇಶಗಳ ಮುಖ್ಯಸ್ಥರು ನೀಡಿದ್ದಾರೆನ್ನಲಾದ ಹೇಳಿಕೆಗಳನ್ನು ನೀಡಲಾಗಿತ್ತು.

‘ಭಾರತದ ಮೇಲೆ ದಾಳಿ ನಡೆಸಲು ಯೋಜಿಸುವವರು ಮೊದಲು ನಮ್ಮನ್ನು ಎದುರಿಸಬೇಕು’ (ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು), ‘ನಾವು ಯಾವತ್ತೂ ಭಾರತದ ಜತೆಗಿದ್ದೇವೆ’ (ರಷ್ಯಾದ ವ್ಲಾದಿಮಿರ್ ಪುಟಿನ್), ‘ಭಾರತ ನಮ್ಮ ಸ್ನೇಹಿತ ಹಾಗೂ ನಾವು ಯಾವತ್ತೂ ಭಾರತದ ಜತೆಗಿದ್ದೇವೆ’ (ಡೊನಾಲ್ಡ್ ಟ್ರಂಪ್), ‘ಒಂದು ವೇಳೆ ಭಾರತದ ಮೇಲೆ ಚೀನಾ ದಾಳಿ ನಡೆಸಿದರೆ ಅದು ಚೀನಾದ ಅಂತ್ಯದ ಆರಂಭ’ (ಜಪಾನ್ ಪ್ರಧಾನಿ ಶಿನ್ಝೋ ಅಬೆ) ಅವರದ್ದೆಂದು ಹೇಳಲಾದ ಹೇಳಿಕೆಗಳನ್ನು ನೀಡಲಾಗಿತ್ತು.

ಈ ರೀತಿಯ ಹೇಳಿಕೆ ಹಾಗೂ ಆ ದೇಶಗಳ ನಾಯಕರ ಚಿತ್ರಗಳಿರುವ ಒಂದು ಇಮೇಜ್ ಅನ್ನು ಪೋಸ್ಟ್ ಕಾರ್ಡ್ ನ್ಯೂಸ್ ಮೇ 30ರಂದು ಪೋಸ್ಟ್ ಮಾಡಿತ್ತು. ಇದನ್ನು 850ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು.

ಈ ಪೋಸ್ಟ್ ಹಾಗೂ ಅದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಎಲ್ಲಾ ಹೇಳಿಕೆಗಳನ್ನು altnews.in ರಿವರ್ಸ್ ಸರ್ಚ್ ಮಾಡಿದರೂ ಯಾವುದೇ ಫಲಿತಾಂಶ ದೊರಕಿರಲಿಲ್ಲ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ರಾಯಭಾರಿ ಈ ಗಡಿ ವಿವಾದ ಕುರಿತಂತೆ ಅಧಿಕೃತ ಹೇಳಿಕೆ ನೀಡಿದ್ದರೂ ಅವುಗಳಿಗೂ ಈ ಪೋಸ್ಟ್‍ನಲ್ಲಿ ನೀಡಿರುವ ಹೇಳಿಕೆಗೂ ಸಂಬಂಧವೇ ಇಲ್ಲ.

ಜಪಾನ್ ಮತ್ತು ಇಸ್ರೇಲ್ ಈ ಕುರಿತಂತೆ ಇನ್ನೂ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಆದುದರಿಂದ ಪೋಸ್ಟ್ ಕಾರ್ಡ್ ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್ ಸುಳ್ಳೆಂದು ಸಾಬೀತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News