ಅಮೆರಿಕಾದ ಘಟನೆಗಳಿಗೆ ಧ್ವನಿಯೆತ್ತುವ ಸೆಲೆಬ್ರಿಟಿಗಳು ದೇಶದ ಘಟನೆಗಳ ಬಗ್ಗೆ ಏಕೆ ಮೌನ ?: ಅಭಯ್ ಡಿಯೋಲ್

Update: 2020-06-03 16:42 GMT
facebook.com/AbhayDeol

ಹೊಸದಿಲ್ಲಿ: ಅಮೆರಿಕಾದಲ್ಲಿ ನಡೆಯುತ್ತಿರುವ ವರ್ಣ ತಾರತಮ್ಯದ ಬಗ್ಗೆ ಧ್ವನಿಯೆತ್ತಿ, ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸುಮ್ಮನಿರುವ ಸೆಲೆಬ್ರಿಟಿಗಳಿಗೆ ‘ಎಚ್ಚೆತ್ತುಕೊಳ್ಳಿ’ ಎನ್ನುವ ಕರೆ ನೀಡಿದ ನಟ ಅಭಯ್ ಡಿಯೋಲ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ಘಟನೆಗೆ ಸಂಬಂಧಿಸಿ ಇಂದು ಸಾಮಾಜಿಕ ಜಾಲತಾಣದಲ್ಲಿ ಕಪ್ಪು ದಿನವನ್ನಾಗಿ ಆಚರಿಸಲಾಗಿತ್ತು. ಹಲವು ವರ್ಣ ತಾರತಮ್ಯದ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವವರಿಗೆ ಬೆಂಬಲ ಸೂಚಿಸಿ ಕಪ್ಪು ಸ್ಕ್ರೀನ್ ಗಳನ್ನು ಹಾಕಿದ್ದರು. ಭಾರತದಲ್ಲೂ ಹಲವು ಸೆಲೆಬ್ರಿಟಿಗಳು ಈ ರೀತಿಯ ಸ್ಕ್ರೀನ್ ಗಳನ್ನು ಹಾಕಿದ್ದರು.

ಇದೇ ಸಂದರ್ಭ ಅಭಯ್ ಡಿಯೋಲ್, ವಲಸೆ ಕಾರ್ಮಿಕರು, ಅಲ್ಪಸಂಖ್ಯಾತರು ಮತ್ತು ಬಡವರ ಪರ #migrantlivesmatter, #minoritylivesmatter, #poorlivesmatter ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ವಿಶೇಷ ಪೋಸ್ಟ್ ಒಂದನ್ನು ಮಾಡಿದರು. ಅಮೆರಿಕದ ವರ್ಣ ತಾರತಮ್ಯವನ್ನು ವಿರೋಧಿಸುತ್ತಿರುವ ಸೆಲೆಬ್ರಿಟಿಗಳು ಮತ್ತು ಮಧ್ಯಮ ವರ್ಗದ ಭಾರತೀಯರು ತಮ್ಮ ನೆಲದಲ್ಲಿ ನಡೆಯುತ್ತಿರುವುದೇನು ಎನ್ನುವುದನ್ನು ಗಮನಿಸಬೇಕು ಎಂದಿದ್ದಾರೆ.

ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಅವರು, “ಈಗ ‘ಎಚ್ಚರ’ಗೊಂಡಿರುವ ಭಾರತದ ಸೆಲೆಬ್ರಿಟಿಗಳು ಮತ್ತು ಮಧ್ಯಮ ವರ್ಗದ ಜನರು ಅಮೆರಿಕದ ವರ್ಣ ತಾರತಮ್ಯದ ಬಗ್ಗೆ ಧ್ವನಿಯೆತ್ತಿದ್ದಾರೆ. ಆದರೆ ತಮ್ಮ ನೆಲದಲ್ಲೇ ನಡೆಯುತ್ತಿರುವುದೇನು ಎಂಬುದನ್ನು ಅವರು ನೋಡಬೇಕು. ಅಮೆರಿಕಾ ಇಡೀ ಜಗತ್ತಿಗೆ ಹಿಂಸೆಯನ್ನು ರಫ್ತು ಮಾಡಿದೆ. ಅವರು ಜಗತ್ತನ್ನು ಹೆಚ್ಚು ಅಪಾಯಕಾರಿಯನ್ನಾಗಿಸಿದರು. ಈ ಒಟ್ಟು ಚಿತ್ರಣವನ್ನು ನಾವು ಗಮನಿಸಬೇಕು. ನಮ್ಮ ದೇಶದಲ್ಲಿರುವ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ನಾವು ಅವರನ್ನು ಬೆಂಬಲಿಸಬೇಕು. ಅವರನ್ನು ಅನುಸರಿಸಿ, ಆದರೆ ಕಾರ್ಯಗಳನ್ನಲ್ಲ. ನಿಮ್ಮದೇ ಕಾರ್ಯಗಳನ್ನು ಆರಂಭಿಸಿ. ನಿಮ್ಮ ಚಳವಳಿ ನಿಮ್ಮ ದೇಶಕ್ಕೆ ಸಂಬಂಧಿಸಿದ್ದು. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳವಳಿಯ ಒಟ್ಟು ಅರ್ಥವಿದು. #migrantlivesmatter, #minoritylivesmatter, #poorlivesmatter” ಎಂದಿದ್ದಾರೆ.

ಅಭಯ್ ಡಿಯೋಲ್ ರ ಈ ಪೋಸ್ಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News