ತಮ್ಮದೇ ಸರಕಾರವಿದ್ದರೂ ವಲಸೆ ಕಾರ್ಮಿಕರನ್ನು ವಾಪಸ್ ಕರೆತರಲು ಸೋನು ಸೂದ್ ಸಹಾಯ ಕೇಳಿದ ಬಿಜೆಪಿ ನಾಯಕ

Update: 2020-06-04 14:48 GMT

ಭೋಪಾಲ್: ಮುಂಬೈಯಲ್ಲಿರುವ ವಲಸಿಗ ಕಾರ್ಮಿಕರನ್ನು ವಾಪಸ್ ಕರೆತರಲು ಬಾಲಿವುಡ್ ನಟ ಸೋನು ಸೂದ್ ಅವರ ಸಹಾಯ ಕೋರಿ ಹಿರಿಯ ಬಿಜೆಪಿ ನಾಯಕ ಹಾಗೂ ಮಧ್ಯ ಪ್ರದೇಶದ ಮಾಜಿ ಸಚಿವ ರಾಜೇಂದ್ರ ಶುಕ್ಲಾ ಅವರು ಮಾಡಿರುವ  ಟ್ವೀಟ್ ವಿಪಕ್ಷ ಕಾಂಗ್ರೆಸ್‍ಗೆ ರಾಜ್ಯದ ಶಿವರಾಜ್ ಸಿಂಗ್ ಚೌಹಾಣ್ ಸರಕಾರವನ್ನು ಟೀಕಿಸಲು ಒಂದು ಅಸ್ತ್ರವೊದಗಿಸಿದೆ.

ವಿವಿಧ ರಾಜ್ಯಗಳಲ್ಲಿದ್ದ ಮಧ್ಯ ಪ್ರದೇಶ ಮೂಲದ ಐದು ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರನ್ನು  ಮರಳಿ ಕರೆತರಲಾಗಿದೆ ಎಂಬ ರಾಜ್ಯ ಸರಕಾರದ ಹೇಳಿಕೆಯ ಹಿಂದಿನ ಟೊಳ್ಳುತನವನ್ನು ಶುಕ್ಲಾ ಅವರ ಟ್ವೀಟ್ ಬಹಿರಂಗಗೊಳಿಸಿದೆ ಎಂದು ಕಾಂಗ್ರೆಸ್ ನಾಯಕರುಗಳಾದ ಅರುಣ್ ಯಾದವ್ ಹಾಗೂ ಕುಣಾಲ್ ಚೌಧುರಿ ಟೀಕಿಸಿ ಟ್ವೀಟ್ ಮಾಡಿದ್ದಾರೆ.

ಶುಕ್ಲಾ ಅವರು ಸಹಾಯ ಕೋರಿ ಮಾಡಿದ್ದ ಟ್ವೀಟ್‍ಗೆ ಸ್ಪಂದಿಸಿದ್ದ  ಸೋನು ಸೂದ್, “ನಾಳೆ ನಿಮ್ಮ ವಲಸಿಗ ಸೋದರರನ್ನು ವಾಪಸ್ ಕಳುಹಿಸುತ್ತೇವೆ ಸರ್. ಯಾವತ್ತಾದರೂ ನಿಮ್ಮ ಮಧ್ಯಪ್ರದೇಶಕ್ಕೆ ಬಂದರೆ ಪೋಹಾ ತಿನ್ನಲು ಇಚ್ಛಿಸುತ್ತೇನೆ'' ಎಂದು ಬರೆದಿದ್ದರು.

ಆದರೆ ತಮ್ಮ ಟ್ವೀಟ್‍ಗೆ ಕಾಂಗ್ರೆಸ್ ಟೀಕೆಗಳ ಸುರಿಮಳೆ ಸುರಿಸಿರುವುದು ಬಿಜೆಪಿ ನಾಯಕ ಶುಕ್ಲಾಗೆ ಹಿಡಿಸಿಲ್ಲ. ಪ್ರತಿಯಾಗಿ ಟ್ವೀಟ್ ಮಾಡಿದ ಅವರು “ಕಳೆದ ಮೂರು ವಾರಗಳಲ್ಲಿ ರೇವಾಗೆ 42,000ಕ್ಕೂ ಅಧಿಕ ಮಂದಿಯನ್ನು 45 ಶ್ರಮಿಕ ರೈಲುಗಳು ವಾಪಸ್ ಕರೆತಂದಿದ್ದವು. ಅಷ್ಟೇ ಅಲ್ಲದೆ ವಿಂಧ್ಯಾ ಪ್ರಾಂತ್ಯದ 75,000 ಮಂದಿಯನ್ನು ದೇಶದ ವಿವಿಧೆಡೆಗಳಿಂದ 15,000 ಬಸ್ಸುಗಳಲ್ಲಿ ವಾಪಸ್ ಕರೆತರಲಾಗಿತ್ತು. ರಾಜ್ಯ ಹಾಗೂ ಕೇಂದ್ರ ಸರಕಾರದ ನಡುವೆ ಸಮನ್ವಯದಿಂದ ಇದು ಸಾಧ್ಯವಾಗಿದೆ'' ಎಂದಿದ್ದಾರೆ.

“ಕೊರೋನ ಹಿನ್ನೆಲೆಯಲ್ಲಿ ತಮ್ಮ ಮನೆಗಳಲ್ಲಿ ಅಡಗಿಕೊಂಡಿರುವ ಕಾಂಗ್ರೆಸ್ ಸ್ನೇಹಿತರಿಗೆ ವಿಂಧ್ಯಾ ಪ್ರಾಂತ್ಯದ ಲಕ್ಷಗಟ್ಟಲೆ ಮಂದಿ ವಾಪಸ್ ಬಂದಿದ್ದಾರೆಂದು ತಿಳಿದಿಲ್ಲ” ಎಂದೂ ಅವರು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News