ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಮನೆಗೆ ಮರಳಲು ಸುಪ್ರೀಂ ಕೋರ್ಟ್ ಗೆ 25 ಲಕ್ಷ ರೂ. ಜಮೆ ಮಾಡಿದ ಸಗೀರ್ ಅಹ್ಮದ್

Update: 2020-06-04 14:47 GMT

ಮುಂಬೈ: ಮುಂಬೈಯಲ್ಲಿ ಸಂಕಷ್ಟದಲ್ಲಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ನೆರವಾಗಲು ವಕೀಲರೊಬ್ಬರು 25 ಲಕ್ಷ ರೂ.ಗಳನ್ನು ಪಾವತಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ವಲಸೆ ಕಾರ್ಮಿಕರು ಸುರಕ್ಷಿತವಾಗಿ ಹಿಂದಿರುಗಲು ಕೋರ್ಟ್ ಗೆ 25 ಲಕ್ಷ ರೂ.ಗಳನ್ನು ನೀಡುವುದಾಗಿ ಕಳೆದ ತಿಂಗಳು, ಮುಂಬೈ ಮೂಲದ ವಕೀಲರು ಸಗೀರ್ ಅಹ್ಮದ್ ಖಾನ್ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು. ಮುಂಬೈಯಲ್ಲಿ ಸಿಲುಕಿರುವ ಉತ್ತರ ಪ್ರದೇಶದ ಬಸ್ತಿ ಮತ್ತು ಸಂತ ಕಬೀರ್ ನಗರದ ವಲಸೆ ಕಾರ್ಮಿಕರನ್ನು ಕರೆ ತರುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶಿಸುವಂತೆ ಅವರು ಕೋರ್ಟನ್ನು ಕೋರಿದ್ದರು.

ಇಂದು ವಿಚಾರಣೆ ಸಂದರ್ಭ ಕೋರ್ಟ್ ಖಾನ್ ಬಳಿ, “ನೀವು ಹಣ ಪಾವತಿಸಲು ಸಿದ್ಧರಿದ್ದೀರಾ?” ಎಂದು ಪ್ರಶ್ನಿಸಿತು. ಇದಕ್ಕೆ ಖಾನ್ ಸಕಾರಾತ್ಮಕವಾಗಿ ಉತ್ತರಿಸಿದರು. ನಂತರ ಹಣವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಜಮೆ ಮಾಡಲು ಅದು ಆದೇಶಿಸಿತು.

ಈ ಬಗ್ಗೆ ಎನ್ ಡಿಟಿವಿ ಜೊತೆ ಮಾತನಾಡಿದ ಖಾನ್, “ಹಣವನ್ನು ನಾನು ಗೌರವಾನ್ವಿತ ಕೋರ್ಟ್ ನಲ್ಲಿ ಜಮೆ ಮಾಡಲು ಬಯಸಿದ್ದೆ. ಏಕೆಂದರೆ ನನಗೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆಯಿದೆ. ಆದರೆ ರಾಜ್ಯ ಸರಕಾರದ ಮೇಲೆ ಅಷ್ಟೊಂದು ನಂಬಿಕೆಯಿಲ್ಲ” ಎಂದರು.

“ನಾನು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಸಂಪರ್ಕಿಸಿದೆ. ವಲಸೆ ಕಾರ್ಮಿಕರಿಗೆ ನೆರವಾಗಲು ನಾನು ಏನು ಮಾಡಬೇಕು ಎಂದು ತಿಳಿಯಲು ಉತ್ತರ ಪ್ರದೇಶದ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿದೆ. ಆದರೆ ಯಾವುದೇ ಉತ್ತರ ಲಭಿಸಿಲ್ಲ. ಟಿಕೆಟ್ ಗಳ 15 ಶೇ. ಹಣವನ್ನು ಭರಿಸುವವರು ಯಾರು ಎನ್ನುವ ಬಗ್ಗೆ ರಾಜ್ಯ ಸರಕಾರಗಳ ನಡುವೆ ತಕರಾರು ನಡೆಯುತ್ತಿದ್ದವು. ಮೇ 9ರಂದು ಟಿಕೆಟ್ ದರವನ್ನು ಭರಿಸುವುದಕ್ಕಾಗಿ ನಾನು 25 ಲಕ್ಷ ರೂ.ಗಳನ್ನು ನೀಡಬಲ್ಲೆ ಎಂದು ಉತ್ತರ ಪ್ರದೇಶದ ನೋಡಲ್ ಅಧಿಕಾರಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದೆ. ಆದರೆ ಹಾಸ್ಯಾಸ್ಪದ ಉತ್ತರಗಳನ್ನು ನೀಡಲಾಯಿತು. ರಿಜಿಸ್ಟ್ರೇಶನ್ ಗಾಗಿ ಮುಂಬೈ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಪ್ರತಿ ವಲಸೆ ಕಾರ್ಮಿಕನ 2 ಫೋಟೊಗಳನ್ನು ನೀಡುವಂತೆ ತಿಳಿಸಿದರು. ಆದ್ದರಿಂದ ನಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮೇ 13ರಂದು ಅರ್ಜಿ ಸಲ್ಲಿಸಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News