ಶಂಕಿತ ಕೋವಿಡ್-19 ಯುವತಿಗೆ ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಲಭಿಸಿದ್ದು ಕೇವಲ ಮೂರೇ ನಿಮಿಷ!

Update: 2020-06-05 05:14 GMT

ಕಾಂಗ್‌ಪೋಪ್ಕಿ, ಜೂ.5: ಇಂಫಾಲ್‌ನ ಕ್ವಾರಂಟೈನ್ ಕೇಂದ್ರದಲ್ಲಿದ್ದ 22ರ ಹರೆಯದ ಅಂಜಲಿ ಮಾಂಗ್ಟೆ ಅವರನ್ನು ಮಂಗಳವಾರ ರಾತ್ರಿ ದೀರ್ಘಸಮಯದ ಅನಾರೋಗ್ಯದಿಂದ ಮೃತಪಟ್ಟಿರುವ ತಂದೆಯನ್ನು ಕೊನೆಯ ಬಾರಿ ನೋಡಲು ಮಣಿಪುರಕ್ಕೆ ಕರೆತರಲಾಗಿತ್ತು. ಆದರೆ ಅಂಜಲಿಗೆ ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಲಭಿಸಿದ್ದು ಕೇವಲ ಮೂರೇ ನಿಮಿಷ.

ಕೋವಿಡ್-19 ರೋಗದ ಶಂಕಿತೆಯಾಗಿದ್ದ ಅಂಜಲಿ ತಂದೆಯ ಶವಪೆಟ್ಟಿಗೆ ಬಳಿ ತೆರಳಿ ಬಿಕ್ಕಿಬಿಕ್ಕಿ ಅತ್ತರು. ಅಂಜಲಿಗೆ ತಾಯಿ,ಸಂಬಂಧಿಕರು ಹಾಗೂ ನೆರೆಮನೆಯವರು ಸಮಾಧಾನ ಮಾಡಲು ಹತ್ತಿರ ತೆರಳಲಿಲ್ಲ. ಅಂಜಲಿಗೆ ವೈದ್ಯರು ಕೇವಲ ಮೂರು ನಿಮಿಷ ಮಾತ್ರ ತಂದೆಯ ಮುಖವನ್ನು ನೋಡಲು ಅವಕಾಶ ನೀಡಿದರು.ಬಳಿಕ ಅವರನ್ನು ಆರೋಗ್ಯ ಕಾರ್ಯಕರ್ತರು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದರು.

ಯುವತಿ ಮೇ 25ರಂದು ಚೆನ್ನೈನಿಂದ ಶ್ರಮಿಕ್ ರೈಲಿನ ಮುಖಾಂತರ ಮಣಿಪುರಕ್ಕೆ ವಾಪಸಾಗಿದ್ದರು. ಅಂಜಲಿ ಅವರೊಂದಿಗೆ ಪ್ರಯಾಣಿಸಿದ್ದ ಇನ್ನೋರ್ವ ಪ್ರಯಾಣಿಕರಿಗೆ ಕೋವಿಡ್-19 ರೋಗ ದೃಢಪಟ್ಟ ಬಳಿಕ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು.

ಅಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ವೈಯಕ್ತಿಕ ಸುರಕ್ಷಾ ಕವಚ(ಪಿಪಿಇ)ಕಿಟ್ ಧರಿಸಿಕೊಂಡ ಯುವತಿ ತನ್ನ ತಂದೆಯ ಅಂತಿಮ ದರ್ಶನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News