ಯುಎಪಿಎ ಹೇರಿದ್ದಕ್ಕೆ ಸಮರ್ಥನೆ: ಹೋರಾಟಗಾರರು ಲೆನಿನ್ ಫೋಟೊ, 'ಲಾಲ್ ಸಲಾಂ' ಬಳಸುತ್ತಿದ್ದರು ಎಂದ ಎನ್‌ಐಎ

Update: 2020-06-05 17:14 GMT

ಹೊಸದಿಲ್ಲಿ, ಜೂ.5: ಅಸ್ಸಾಮಿನ ರೈತನಾಯಕ ಅಖಿಲ ಗೊಗೊಯಿ ಅವರ ನಿಕಟ ಸಹಾಯಕ ಬಿಟ್ಟು ಸೋನೊವಾಲ್ ಮಾವೋವಾದಿ ಎಂದು ಸಾಬೀತುಪಡಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ‘ಲಾಲ್ ಸಲಾಂ’, ‘ಕಾಮ್ರೇಡ್‌’ನಂತಹ ಪದಗಳನ್ನು ಸಾಕ್ಷ್ಯವಾಗಿ ಬಳಸಿದೆ.

2019, ಡಿಸೆಂಬರ್‌ನಲ್ಲಿ ಅಸ್ಸಾಮಿನಾದ್ಯಂತ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಕೃಷಕ್ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್)ಯ ಸಲಹೆಗಾರ ಗೊಗೊಯಿ, ಸೊನೊವಾಲ್ ಮತ್ತು ಇತರ ಇಬ್ಬರು ಸಹಾಯಕರನ್ನು ಬಂಧಿಸಿದ್ದ ಎನ್‌ಐಎ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಗಳನ್ನು ಹೊರಿಸಿತ್ತು.

ಮೇ 29ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪಣ ಪಟ್ಟಿಯಲ್ಲಿ ಸೋನೊವಾಲ್ ‘ಬಂಡವಾಳಶಾಹಿಗಳು ನಮಗೆ ಹಗ್ಗವನ್ನು ಮಾರುತ್ತಾರೆ ಮತ್ತು ಅದರಿಂದ ನಾವು ಅವರಿಗೆ ನೇಣು ಹಾಕುತ್ತೇವೆ’ ಎಂಬ ಬರಹದೊಂದಿಗೆ ವ್ಲಾದಿಮಿರ್ ಲೆನಿನ್ ಅವರ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಹೇಳಲಾಗಿದೆ. ಸೋನೊವಾಲ್ ತನ್ನ ಕೆಲವು ಸ್ನೇಹಿತರನ್ನು ‘ಲಾಲ್ ಸಲಾಂ’ ಎಂದು ಹೇಳಿ ಬರಮಾಡಿಕೊಳ್ಳುತ್ತಿದ್ದರು ಮತ್ತು ಅವರನ್ನು ‘ಕಾಮ್ರೇಡ್‌ಗಳು’ ಎಂದು ಸಂಬೋಧಿಸುತ್ತಿದ್ದರು ಎಂದೂ ಎನ್‌ಐಎ ಹೇಳಿದೆ.

ತನ್ನ ನಾಯಕರಿಗೆ ಮಾವೋವಾದಿಗಳು ಎಂಬ ಹಣೆಪಟ್ಟಿ ಹಚ್ಚಲು ಎನ್‌ಐಎ ಉತ್ಸುಕಗೊಂಡಿದೆ ಎಂದು ಕೆಎಂಎಸ್‌ಎಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News