5 ವರ್ಷದ ಮಗನ ಎದುರೇ ಮಹಿಳೆಯ ಸಾಮೂಹಿಕ ಅತ್ಯಾಚಾರ, ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ

Update: 2020-06-06 04:24 GMT

ತಿರುವನಂತಪುರ: ಐದು ವರ್ಷದ ಪುಟ್ಟ ಬಾಲಕನ ಎದುರೇ ತಾಯಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ, ಉರಿಯುವ ಸಿಗರೇಟ್‍ನಿಂದ ಮಹಿಳೆಗೆ ಚಿತ್ರಹಿಂಸೆ ನೀಡಿರುವ ಪೈಶಾಚಿಕ ಘಟನೆ ವರದಿಯಾಗಿದೆ. ಈ ಸಂಬಂಧ ಮಹಿಳೆಯ ಪತಿ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

“ಹತ್ತಿರದ ಬೀಚ್‍ಗೆ ಕರೆದೊಯ್ಯುವುದಾಗಿ ಹೇಳಿ ನನ್ನನ್ನು ಹಾಗೂ ಐದು ವರ್ಷದ ಮಗನನ್ನು ಸ್ನೇಹಿತರ ಮನೆಗೆ ಪತಿ ಕರೆದೊಯ್ದರು. ಅಲ್ಲಿಗೆ ತಲುಪಿದ ಬಳಿಕ ಬಲಾತ್ಕಾರದಿಂದ ಮದ್ಯ ಕುಡಿಸಿ ಪಕ್ಕದ ಖಾಲಿ ಜಾಗಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದರು” ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

ಅತ್ಯಾಚಾರಿಗಳು ಸಿಗರೇಟ್ ತುಂಡಿನಿಂದ ದೇಹದ ವಿವಿಧ ಭಾಗಗಳಿಗೆ ಸುಟ್ಟಗಾಯ ಮಾಡಿದ್ದಲ್ಲದೇ ಹಲವು ಬಾರಿ ಹೊಡೆದಿದ್ದಾರೆ ಎಂದು ಮಹಿಳೆ ವಿವರಿಸಿದ್ದಾರೆ. ಮಗ ಅಳುತ್ತಿದ್ದಾಗ ಮಗನನ್ನೂ ಹೊಡೆದಿದ್ದಾರೆ. ಮಗನನ್ನು ಮನೆಗೆ ಬಿಟ್ಟು ಬರುತ್ತೇನೆ ಎಂದು ಹೇಳಿದಾಗ ಅಲ್ಲಿಂದ ಹೊರಡಲು ಅವಕಾಶ ನೀಡಿದರು ಎಂದು ಹೇಳಿದ್ದಾರೆ.

ಮನೆಗೆ ಮರಳುತ್ತಿದ್ದಾಗ ವಾಹನವೊಂದಕ್ಕೆ ಕೈಸನ್ನೆ ಮಾಡಿ ನಿಲ್ಲಿಸಿದರು. ವಾಹನದೊಳಕ್ಕೆ ಬಂದಾಗ ಈ ಘಟನೆಯನ್ನು ಮಹಿಳೆ ವಿವರಿಸಿದ್ದು, ಕಾರಿನಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

“ಈ ಕೃತ್ಯದಲ್ಲಿ ಪತಿ ಕೂಡಾ ಷಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ದೂರು ನೀಡದಂತೆ ಆತ ಮಹಿಳೆಯನ್ನು ಒತ್ತಾಯಿಸಿದ್ದ. ಈ ಪೈಕಿ ಕೆಲವರನ್ನು ಬೇರೆ ಅಪರಾಧಗಳಿಗಾಗಿ ಈ ಹಿಂದೆ ಬಂಧಿಸಲಾಗಿತ್ತು” ಎಂದು ತಿರುವನಂತಪುರ ಗ್ರಾಮೀಣ ಎಸ್ಪಿ ಅಶೋಕ್ ವಿವರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News