“ಮುಸ್ಲಿಂ ರೋಗಿಗಳಿಗೆ ಚಿಕಿತ್ಸೆ ನೀಡಬೇಡಿ”: ರಾಜಸ್ಥಾನದ ಆಸ್ಪತ್ರೆಯ ಸಿಬ್ಬಂದಿಯ ವಾಟ್ಸ್ಯಾಪ್ ಸಂಭಾಷಣೆ ವೈರಲ್

Update: 2020-06-07 14:51 GMT

ಜೈಪುರ, ಜೂ.7: ರಾಜಸ್ತಾನದ ಚುರು ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿಗಳು ಮುಸ್ಲಿಂ ರೋಗಿಗಳಿಗೆ ಚಿಕಿತ್ಸೆ ನೀಡಬಾರದು ಎಂದು ವಾಟ್ಸ್ಯಾಪ್ ಸಂಭಾಷಣೆ ನಡೆಸಿದ್ದಾರೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನದ ಸರ್ದರ್‌ಶಹರ್‌ನಲ್ಲಿರುವ ಶ್ರೀಚಂದ್ ಬರಾಡಿಯಾ ರೋಗನಿಧಾನ ಕೇಂದ್ರದ ಸಿಬ್ಬಂದಿ ನಡೆಸಿದ್ದರೆನ್ನಲಾದ ವಾಟ್ಸ್ಯಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾರ್ಡಿಯಾ ರೈಸ್ ಎಂಬ ವಾಟ್ಸ್ಯಾಪ್ ಗ್ರೂಫ್‌ನ ಸದಸ್ಯರ ಮಧ್ಯೆ ಈ ಸಂಭಾಷಣೆ ನಡೆದಿದೆ ಎನ್ನಲಾಗಿದೆ. “ನಾಳೆಯಿಂದ ಮುಸ್ಲಿಂ ರೋಗಿಗಳ ಎಕ್ಸ್‌ರೇ ತೆಗೆಯುವುದಿಲ್ಲ. ಇದು ನನ್ನ ವಾಗ್ದಾನವಾಗಿದೆ” ಎಂದು ಓರ್ವ ವ್ಯಕ್ತಿ ಸಂದೇಶ ರವಾನಿಸಿದ್ದು, ಅದೇ ವ್ಯಕ್ತಿಯ ಮತ್ತೊಂದು ಸಂದೇಶದಲ್ಲಿ “ಮುಸ್ಲಿಂ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯನ್ನು ನಿಲ್ಲಿಸಿ” ಎಂದು ಕರೆ ನೀಡಲಾಗಿದೆ. ಈ ಸಂಭಾಷಣೆಯ ಮತ್ತೊಂದು ಸಂದೇಶದಲ್ಲಿ ‘ಹಿಂದುಗಳು ಕೊರೋನ ಸೋಂಕಿತರಾಗಿದ್ದರೆ ಮತ್ತು ಮುಸ್ಲಿಂ ವೈದ್ಯರಿದ್ದರೆ ಆಗ ಹಿಂದುಗಳಿಗೆ ಚಿಕಿತ್ಸೆ ನೀಡುವುದಿಲ್ಲ. ನಾನು ಹೊರರೋಗಿಗಳ ವಿಭಾಗದಲ್ಲಿರುವ ಮುಸ್ಲಿಂ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಮೇಡಂ ಇಲ್ಲಿ ಇಲ್ಲ ಎಂದವರಿಗೆ ಹೇಳಿ’ ಎಂದು ಹೇಳಲಾಗಿದೆ. ‘ಸರ್ದರ್‌ಶಹರ್‌ನಲ್ಲಿ ಮುಸ್ಲಿಮರು ಮಾತ್ರ ಕೊರೋನ ಸೋಂಕಿತರಾಗಿದ್ದಾರೆ. ಆದ್ದರಿಂದ ಮುಸ್ಲಿಮ್ ರೋಗಿಗಳಿಗೆ ಚಿಕಿತ್ಸೆ ನೀಡದೆ ಅವರನ್ನು ಮುಸ್ಲಿಂ ವೈದ್ಯರಿದ್ದಲ್ಲಿಗೇ ಕಳಿಸುವುದು ಉತ್ತಮ’ ಎಂದು ಮತ್ತೊಂದು ಸಂದೇಶದಲ್ಲಿ ಹೇಳಲಾಗಿದೆ.

ಎರಡು ದಿನದ ಹಿಂದೆ ಸ್ಕ್ರೀನ್‌ಶಾಟ್ ಸಹಿತ ಪೊಲೀಸರಿಗೆ ದೂರು ನೀಡಲಾಗಿದೆ. ಇದು ನಿರ್ಧಿಷ್ಟ ಸಮುದಾಯದ ವಿರುದ್ಧ ತಾರತಮ್ಯದ ಉದ್ದೇಶವನ್ನು ಹೊಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ. ಸ್ಕ್ರೀನ್‌ಶಾಟ್‌ನ ನಿಖರತೆ ಮತ್ತು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾರು ಪ್ರಸಾರ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಸ್ಥಳೀಯ ಮುಸ್ಲಿಂ ಮುಖಂಡರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ ಎಂದು ಸರ್ದರ್‌ಶಹರ ಪೊಲೀಸ್ ಠಾಣೆಯ ಅಧಿಕಾರಿ ರಮೇಶ್ ಪನ್ನು ಹೇಳಿದ್ದಾರೆ.

ಸ್ಕ್ರೀನ್‌ಶಾಟ್ ಅನ್ನು ತಾನು ಪೊಲೀಸರ ಗಮನಕ್ಕೆ ತಂದಿರುವುದಾಗಿ ಮುಸ್ಲಿಂ ಪರಿಷದ್ ಸಂಸ್ಥಾನದ ಜಿಲ್ಲಾಧ್ಯಕ್ಷ ಮಖ್ಬೂಲ್ ಖಾನ್ ಹೇಳಿದ್ದಾರೆ. ಘಟನೆಯ ಬಗ್ಗೆ ಕ್ಷಮೆ ಯಾಚಿಸುವುದಾಗಿ ಫೇಸ್‌ಬುಕ್‌ನಲ್ಲಿ ತಿಳಿಸಿರುವ ಆಸ್ಪತ್ರೆಯ ಮಾಲಕ ಡಾ. ಸುನಿಲ್ ಚೌಧರಿ, ಯಾವುದೇ ಧರ್ಮದವರಿಗೆ ನೋವುಂಟು ಮಾಡುವ ಉದ್ದೇಶ ಆಸ್ಪತ್ರೆಯ ಸಿಬ್ಬಂದಿಗಳಿಗಿಲ್ಲ ಎಂದಿದ್ದಾರೆ. ಕೊರೋನ ಸೋಂಕಿನ ಬಗ್ಗೆ ಹೆಚ್ಚಿನ ಭೀತಿ ಇದ್ದ ಸಂದರ್ಭವೂ ತಾನು ಆಸ್ಪತ್ರೆಯಲ್ಲಿ ಎಲ್ಲರಿಗೂ 24 ಗಂಟೆಯೂ ಆರೋಗ್ಯ ಸೇವೆ ಒದಗಿಸಿದ್ದೇನೆ. ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾರ ವಿರುದ್ಧವೂ ತಾರತಮ್ಯ ಎಸಗಿಲ್ಲ. ಈ ಬಗ್ಗೆ ದೂರು ನೀಡಿದ ಸಮುದಾಯದ ಸದಸ್ಯರಲ್ಲೂ ಮಾತನಾಡಿದ್ದೇನೆ. ಈ ವಿಷಯವನ್ನು ರಾಜಕೀಯಗೊಳಿಸಬಾರದು ಮತ್ತು ವಿನಾಕಾರಣ ವೈದ್ಯರಿಗೆ ಶಿಕ್ಷೆಯಾಗಬಾರದು ಎಂದವರು ಹೇಳಿದ್ದಾರೆ.

ಇದರ ಹೊರತಾಗಿಯೂ, ಜನತೆಯ ಮನದಲ್ಲಿ ಆಸ್ಪತ್ರೆಯ ಬಗ್ಗೆ ಕೆಟ್ಟ ಭಾವನೆ ಮೂಡಿರುವುದರಿಂದ ತಾನು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರೂ ಕ್ಷಮೆ ಯಾಚಿಸುತ್ತಿದ್ದು, ಭವಿಷ್ಯದಲ್ಲಿ ಆಸ್ಪತ್ರೆಯ ವಿರುದ್ಧ ದೂರು ನೀಡುವ ಯಾವುದೇ ಸಂದರ್ಭ ಒದಗುವುದಿಲ್ಲ ಎಂದು ಭರವಸೆ ನೀಡುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News