ಜಾವೇದ್ ಅಖ್ತರ್‌ಗೆ ಪ್ರತಿಷ್ಠಿತ ‘ರಿಚರ್ಡ್ ಡಾಕಿನ್ಸ್’ ಪ್ರಶಸ್ತಿ

Update: 2020-06-07 15:27 GMT
ಫೋಟೊ ಕೃಪೆ: deccanherald.com

ಮುಂಬೈ, ಜೂ.7: ರಾಷ್ಟ್ರೀಯ ಪ್ರಶಸ್ತಿ ವಿಜೇತ ಗೀತರಚನೆಕಾರ ಮತ್ತು ಚಲನಚಿತ್ರ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್‌ರನ್ನು ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಸಿನೆಮಾ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಜಾವೇದ್ ಅಖ್ತರ್, ಹಲವು ಸಾಮಾಜಿಕ ವಿಷಯಗಳ ಬಗ್ಗೆ ಧ್ವನಿಯೆತ್ತಿದವರು. ಪೌರತ್ವ ತಿದ್ದುಪಡಿ ಕಾಯ್ದೆ, ಇಸ್ಲಾಮೊಫೋಬಿಯಾ ಮುಂತಾದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಯಾವುದೇ ಹಿಂಜರಿಕೆ ಇಲ್ಲದೆ ವ್ಯಕ್ತಪಡಿಸಿದವರು. ವಿಮರ್ಶಾತ್ಮಕ ಚಿಂತನೆ, ವಿಮರ್ಶಕ ದೃಷ್ಟಿಯಿಂದ ಧಾರ್ಮಿಕ ಸಿದ್ಧಾಂತದ ಪರಿಶೀಲನೆ, ಮಾನವ ಪ್ರಗತಿ ಮತ್ತು ಮಾನವತಾವಾದಿ ಮೌಲ್ಯಗಳನ್ನು ಮುಂದುವರಿಸಿಕೊಂಡು ಬಂದಿರುವುದನ್ನು ಪರಿಗಣಿಸಿ ಅಖ್ತರ್‌ರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರ ಪತ್ನಿ, ಖ್ಯಾತ ಸಿನೆಮ ನಟಿ ಶಬನಾ ಅಝ್ಮಿ ಟ್ವೀಟ್ ಮಾಡಿದ್ದಾರೆ.

ಇಂಗ್ಲೆಂಡಿನ ಖ್ಯಾತ ಜೀವಶಾಸ್ತ್ರಜ್ಞ, ಲೇಖಕ ರಿಚರ್ಡ್ ಡಾಕಿನ್ಸ್ ಹೆಸರಿನ ಈ ಜಾಗತಿಕ ಪ್ರಶಸ್ತಿಯನ್ನು, ಜಾತ್ಯತೀತತೆ, ವೈಚಾರಿಕತೆ, ವೈಜ್ಞಾನಿಕ ಸತ್ಯಗಳನ್ನು ಎತ್ತಿಹಿಡಿಯುವ ಮೌಲ್ಯಗಳನ್ನು ಸಾರ್ವಜನಿಕವಾಗಿ ಶ್ರುತಪಡಿಸುವ ವ್ಯಕ್ತಿಗಳನ್ನು ಗುರುತಿಸಿ ನೀಡಲಾಗುತ್ತಿದೆ.

ರಿಕಿ ಗೆರ್ವಾಯ್ಸಿ, ಸ್ಟೀಫನ್ ಫ್ರಯ್ ಹಾಗೂ ಬಿಲ್ ಮಹೆರ್ ಮುಂತಾದವರಿಗೆ ಈ ಪುರಸ್ಕಾರ ಸಂದಿದೆ. ಸಿನೆಮ ನಟರಾದ ದಿಯಾ ಮಿರ್ಝ, ಅನಿಲ್ ಕಪೂರ್, ನಿಖಿಲ್ ಅಡ್ವಾಣಿ, ಉರ್ಮಿಳಾ ಮಾತೋಂಡ್ಕರ್ ಮುಂತಾದವರು ಜಾವೇದ್ ಅಖ್ತರ್‌ ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News