ಪುಣೆ: ಚೀನಾದ ಉತ್ಪನ್ನಗಳನ್ನು ನಾಶಗೊಳಿಸಿದ ಬ್ರಾಹ್ಮಣ ಮಹಾಜನ ಸಂಘದ ಸದಸ್ಯರು

Update: 2020-06-08 14:58 GMT

ಪುಣೆ, ಜೂ.8: ಭಾರತ -ಚೀನಾದ ಮಧ್ಯೆ ಗಡಿಭಾಗದಲ್ಲಿ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಪುಣೆಯಲ್ಲಿ ಸಂಘಟನೆಯೊಂದರ ಸದಸ್ಯರು ಚೀನಾದ ಉತ್ಪನ್ನಗಳ ಆಮದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಚೀನಾದಲ್ಲಿ ತಯಾರಿಸಿರುವ ಸ್ಮಾರ್ಟ್ ಫೋನ್ ಸಹಿತ ಹಲವು ವಸ್ತುಗಳನ್ನು ನಾಶಗೊಳಿಸಿದರು.

ಕರ್ವೆ ರಸ್ತೆಯಲ್ಲಿರುವ ಸಾವರ್ಕರ್ ಸ್ಮಾರಕದ ಬಳಿ ಒಟ್ಟುಸೇರಿದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಸದಸ್ಯರು ಚೀನಾ ನಿರ್ಮಿತ ವಸ್ತುಗಳನ್ನು ರಸ್ತೆಯಲ್ಲಿ ರಾಶಿಹಾಕಿ ಪುಡಿ ಮಾಡಿದರು. ಬಳಿಕ ನಡೆದ ಪ್ರತಿಭಟನೆಯಲ್ಲಿ ಚೀನಾದ ಧ್ವಜವನ್ನು ನೆಲಕ್ಕೆ ಎಸೆದು ಘೋಷಣೆ ಕೂಗಲಾಯಿತು.

ಈ ಸಂದರ್ಭ ಮಾತನಾಡಿದ ಸಂಘಟನೆಯ ಸದಸ್ಯ ಆನಂದ್ ದವೆ, ಚೀನಾವು ವಿಶ್ವದೆಲ್ಲೆಡೆ ಕೊರೋನ ಸೋಂಕನ್ನು ವ್ಯವಸ್ಥಿತವಾಗಿ ಹರಡಿರುವುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಜೊತೆಗೆ, ಚೀನಾವು ಭಾರತ ಹಾಗೂ ಇತರ ದೇಶಗಳೊಂದಿಗೆ ಅನವಶ್ಯಕವಾಗಿ ಜಗಳಕ್ಕೆ ಬರುತ್ತಿದೆ. ಆದ್ದರಿಂದ, ತನ್ನ ಉತ್ಪನ್ನಗಳಿಗೆ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಹೊಂದಿರುವ ಚೀನಾಕ್ಕೆ ಕಠಿಣ ಸಂದೇಶ ರವಾನಿಸಬೇಕಾಗಿದೆ. 2020ರ ಅಂತ್ಯದೊಳಗೆ ಭಾರತವು ಚೀನಾದ ಎಲ್ಲಾ ಸರಕುಗಳನ್ನೂ ನಿಷೇಧಿಸಿ ಸ್ಥಳೀಯವಾಗಿ ಉತ್ಪಾದಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News