×
Ad

ವಿನೋದ್ ದುವಾ ವಿರುದ್ಧದ ಎಫ್‌ಐಆರ್, ವಾಕ್‌ಸ್ವಾತಂತ್ರ್ಯದ ಮೇಲಿನ ನಿರ್ಲಜ್ಜ ದಾಳಿ: ಎಡಿಟರ್ಸ್ ಗಿಲ್ಡ್ ಖಂಡನೆ

Update: 2020-06-08 20:56 IST

ಹೊಸದಿಲ್ಲಿ, ಜೂ.8: ಹಿರಿಯ ಪತ್ರಕರ್ತ ವಿನೋದ್ ದುವಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿರುವ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’, ಇದು ವಾಕ್‌ಸ್ವಾತಂತ್ರ್ಯದ ಮೇಲಿನ ನಿರ್ಲಜ್ಜ ದಾಳಿಯಾಗಿದೆ ಎಂದಿದೆ.

ವಿವಿಧ ರಾಜ್ಯಗಳಲ್ಲಿ ಪೊಲೀಸರು ಪತ್ರಕರ್ತರ ವಿರುದ್ಧದ ಕ್ಷುಲ್ಲಕ ಆರೋಪಗಳನ್ನು ಗಮನಿಸಿ ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಹಿರಿಯ ಪತ್ರಕರ್ತ ವಿನೋದ್ ದುವಾ ವಿರುದ್ಧ ಬಿಜೆಪಿ ವಕ್ತಾರನೆಂದು ಗುರುತಿಸಿಕೊಂಡಿರುವ ನವೀನ್ ಕುಮಾರ್ ಆರೋಪದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ ಎಂದು ಎಡಿಟರ್ಸ್ ಗಿಲ್ಡ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನವೀನ್ ಕುಮಾರ್ ಮಾಡಿರುವ ಆರೋಪವು ದುವಾರ ವಾಕ್‌ ಸ್ವಾತಂತ್ರ್ಯದ ಮೇಲಿನ ನಿರ್ಲಜ್ಜ ದಾಳಿಯಾಗಿದೆ. ಈ ಕಿರುಕುಳದ ಸಾಧನದ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿರುವುದರಿಂದ ಆರಂಭವಾಗುವ ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಉಪಕ್ರಮಗಳು ನಿಸ್ಸಂದಿಗ್ಧವಾಗಿ ಖಂಡನೀಯವಾಗಿದೆ ಪೊಲೀಸರು ಸಂವಿಧಾನದಡಿ ಖಾತರಿಪಡಿಸಿರುವ ಸ್ವಾತಂತ್ರದ ಬಗ್ಗೆ ಪ್ರಶ್ನೆ ಮೂಡಿಸುವಂತಹ ಕೆಲಸ ಮಾಡದೆ ಅದನ್ನು ಗೌರವಿಸಬೇಕು ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಬಗ್ಗೆ ದುವಾ ತಪ್ಪಾಗಿ ವರದಿ ಮಾಡಿದ್ದಾರೆ ಮತ್ತು ಕೇಂದ್ರ ಸರಕಾರ ಹಿಂಸಾಚಾರ ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಪ್ಪು ಮಾಹಿತಿ ಪ್ರಸಾರ ಮಾಡಿದ್ದಾರೆ ಎಂದು ನವೀನ್ ಕುಮಾರ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ದುವಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News