×
Ad

ಇಂದು ಮಧ್ಯಾಹ್ನ ಸರ್ವಪಕ್ಷಗಳ ಸಭೆ ಕರೆದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್

Update: 2020-06-09 11:14 IST

ಹೊಸದಿಲ್ಲಿ, ಜೂ.9: ಅರವಿಂದ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರದ ಎರಡು ಪ್ರಮುಖ ನಿರ್ಧಾರವನ್ನು ಬದಲಿಸಿದ ಮರುದಿನ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಷ್ಟ್ರ ರಾಜಧಾನಿಯಲ್ಲಿನ ಕೊರೋನ ವೈರಸ್ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಚರ್ಚಿಸಲು ಇಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

ಸರ್ವಪಕ್ಷಗಳ ಸಭೆಯು ಮಧ್ಯಾಹ್ನ 3 ಗಂಟೆಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿದ್ದು, ಇಂದು ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ. ಹೀಗಾಗಿ ಸಭೆಯಲ್ಲಿ ಕೇಜ್ರಿವಾಲ್ ಹಾಜರಾಗುವ ಸಾಧ್ಯತೆ ಇಲ್ಲ.

ಕೇಂದ್ರ ಸರಕಾರ ನಡೆಸುತ್ತಿರುವ ಆಸ್ಪತ್ರೆಗಳು ಹೊರತುಪಡಿಸಿ ಉಳಿದ ಆಸ್ಪತ್ರೆಗಳನ್ನು ದಿಲ್ಲಿ ನಿವಾಸಿಗಳಿಗೆ ಮೀಸಲಿಡಬೇಕು ಹಾಗೂ ಕೋವಿಡ್-19 ಗುಣ ಲಕ್ಷಣವಿರುವವರನ್ನು ಮಾತ್ರ ಕೋವಿಡ್-19 ಪರೀಕ್ಷೆ ನಡೆಸಬೇಕೆಂದು ದಿಲ್ಲಿ ಆಮ್ ‌ಆದ್ಮಿ ಪಕ್ಷದ ಸರಕಾರ ತೆಗೆದುಕೊಂಡಿದ್ದ ಎರಡು ನಿರ್ಧಾರವನ್ನು ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ರದ್ದುಪಡಿಸಿದ್ದರು.

ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿನ ಲಕ್ಷಣ ಇಲ್ಲದವರಿಗೂ ಚಿಕಿತ್ಸೆ ನೀಡಬೇಕು ಮತ್ತು ಕೊರೋನ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವ ಅಪಾಯದಲ್ಲಿರುವವರಿಗೂ ಚಿಕಿತ್ಸೆ ಒದಗಿಸಬೇಕು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸೂಚಿಸಿರುವ ಪರೀಕ್ಷೆಯ ನಿಯಮವನ್ನು ಉಲ್ಲಂಘಿಸಿದರೆ ರಾಜಧಾನಿಯಲ್ಲಿ ಕೊರೋನ ಸೋಂಕು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಹರಡಲಿದೆ ಎಂದು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News