×
Ad

ಪತ್ರಕರ್ತ ಶಹೀನ್ ಅಬ್ದುಲ್ಲಾಗೆ ‘ದಿಲ್ಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿ’

Update: 2020-06-09 12:23 IST

ಹೊಸದಿಲ್ಲಿ: ‘ಮಕ್ತೂಬ್’ ಪತ್ರಕರ್ತ ಶಹೀನ್ ಅಬ್ದುಲ್ಲಾ ಅವರು ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ದಿಲ್ಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಗಿದೆ.

"ಶಹೀನ್ ಅವರೊಬ್ಬ ಪ್ರತಿಭಾವಂತ ಯುವ ಪತ್ರಕರ್ತರಾಗಿದ್ದಾರೆ'' ಎಂದು ಪ್ರಶಸ್ತಿ ಸಮಿತಿ ಹೇಳಿದೆ.

ಶಹೀನ್ ಅವರು ಕಳೆದೆರಡು ವರ್ಷಗಳಿಂದ ‘ಮಕ್ತೂಬ್‍’ನಲ್ಲಿ ಕ್ರಿಯೇಟಿವ್ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಪ್ರದೇಶ ಹಾಗೂ ದಿಲ್ಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತಂತೆ ಅವರ ವರದಿಗಾರಿಕೆಗೆ ಈ ಮಾನ್ಯತೆ ದೊರಕಿದೆ.

ಶಹೀನ್ ಅವರು ಬಹುಚರ್ಚಿತ ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕುರಿತಾದ ಸಾಕ್ಷ್ಯಚಿತ್ರ ``ಇನ್ ಎ ಸ್ಟೇಟ್ ಆಫ್ ಡೌಟ್'' ನಿರ್ದೇಶಿಸಿದ್ದಾರೆ. ಅವರ ವರದಿಗಳು 'ವೈಸ್', 'ಕ್ಯಾರವಾನ್ ಮ್ಯಾಗಝಿನ್', 'ದಿ ಕ್ವಿಂಟ್' ಮತ್ತಿತರ ವೆಬ್ ತಾಣಗಳಲ್ಲಿ ಪ್ರಕಟಗೊಂಡಿವೆ. ಅವರು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಕನ್ವರ್ಜೆಂಟ್ ಜರ್ನಲಿಸಂ ವಿದ್ಯಾರ್ಥಿಯಾಗಿದ್ದಾರೆ.

ಮಾಜಿ ಬಿಬಿಸಿ ಪತ್ರಕರ್ತ ಖುರ್ಬಾನ್ ಆಲಿ, ಲೇಖಕಿ ಹುಮ್ರಾ ಖುರೈಶಿ, ದಿ ವೈರ್ ತಾಣದ ಮಹ್ತಾಬ್ ಆಲಂ ಹಾಗೂ ದಿ ಖ್ವಿಂಟ್ ವೆಬ್ ತಾಣದ ಆದಿತ್ಯ ಮೆನನ್ ಅವರು ಕೂಡ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ದಿಲ್ಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿ ಗಳಿಸಿದ್ದಾರೆ. ಆಯೋಗವು 2018ರಿಂದ ಈ ಪ್ರಶಶ್ತಿಯನ್ನು ನೀಡುತ್ತಿದೆ. ಆಯೋಗದ ಸಲಹಾ ಮತ್ತು ಶಾಂತಿ ಸಮಿತಿಗಳ ಶಿಫಾರಸಿನಂತೆ ಪ್ರಶಸ್ತಿ ವಿಜೇತರನ್ನು ಆರಿಸಲಾಗುತ್ತದೆ.

ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಆಯೋಗದ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಮಾನವ ಹಕ್ಕುಗಳಿಗಾಗಿ ಆಕೆ ನಡೆಸಿದ ಹೋರಾಟವನ್ನು ಪರಿಗಣಿಸಿ ಆಕೆಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾನವ ಹಕ್ಕು ವಿಭಾಗದಲ್ಲಿ ಫರ್ಹಾ ನಖ್ವಿ, ಎ ಸಿ ಮೈಖೇಲ್, ಅರ್ಮೀತ್ ಸಿಂಗ್, ಮೆಹಮೂದ್ ಪ್ರಚ ಪ್ರಶಸ್ತಿ ಗಳಿಸಿದ್ದಾರೆ. ಖ್ವಿಲ್ ಫೌಂಡೇಶನ್ ಕೂಡ ಈ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.

ಸಮುದಾಯ ಸೇವೆ ವಿಭಾಗದಲ್ಲಿ ಅಬು ಬಕ್ರ್ ಸಬ್ಬಖ್, ರೀನಾ ಚಾರ್ಲ್ಸ್, ಡಿ ಎಸ್ ಬಿಂದ್ರಾ, ಅಂಜು ಜೈನ್, ಓವೈಸ್ ಸುಲ್ತಾನ್ ಖಾನ್ ಪ್ರಶಸ್ತಿ ಗಳಿಸಿದ್ದಾರೆ. ಈ ವಿಭಾಗದಲ್ಲಿ ರೆಹಾಬ್ ಫೌಂಡೇಶನ್ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News