“ದೊಡ್ಡ ತಪ್ಪು ಮಾಡಿದೆ”: ಸುಳ್ಳು ಸುದ್ದಿ ನಂಬಿ 'ಗೋ ಏರ್' ಪೈಲಟ್ ಆಸಿಫ್ ಖಾನ್ ವಿರುದ್ಧ ವಿಡಿಯೋ ಮಾಡಿದ ಯುಟ್ಯೂಬರ್
ಮುಂಬೈ: ಗೋ ಏರ್ ವಿಮಾನಯಾನ ಸಂಸ್ಥೆಯಲ್ಲಿ ಟ್ರೈನೀ ಪೈಲಟ್ ಆಗಿದ್ದ ಆಸಿಫ್ ಇಕ್ಬಾಲ್ ಖಾನ್ ಅವರನ್ನು ಇತ್ತೀಚೆಗೆ ಸಂಸ್ಥೆ ಸೇವೆಯಿಂದ ವಜಾಗೊಳಿಸಿತ್ತು. ಕಾರಣ ಅವರು ಹಿಂದೂ ದೇವರುಗಳನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆಂಬ ಆರೋಪ. ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ #ArrestAsifKhan, #boycottGoAir ಎಂಬ ಹ್ಯಾಶ್ ಟ್ಯಾಗ್ ಗಳನ್ನು ಟ್ರೆಂಡಿಂಗ್ ಮಾಡಲಾಯಿತು. ಆದರೆ ಇದೀಗ ವಜಾಗೊಂಡಿರುವ ಆಸಿಫ್ ಖಾನ್ ಯಾವುದೇ ತಪ್ಪು ಮಾಡಿಲ್ಲ ಮತ್ತು ಆಕ್ಷೇಪಾರ್ಹ ಫೋಸ್ಟ್ ಗಳನ್ನು ಹಾಕಿದ ಖಾತೆ ಅವರದ್ದಲ್ಲ ಎನ್ನುವುದು ಖಚಿತಗೊಂಡಿದೆ.
ಆಸಿಫ್ ಖಾನ್ ಎಂಬ ಹೆಸರಿನಲ್ಲಿ ಟ್ವಿಟರ್ ಹ್ಯಾಂಡಲ್ ಹೊಂದಿದ್ದ ಮತ್ತೊಬ್ಬ ವ್ಯಕ್ತಿ ತನ್ನ ಪರಿಚಯದಲ್ಲಿ ತಾನು ಗೋಏರ್‍ನ ಕ್ಯಾಬಿನ್ ಸಿಬ್ಬಂದಿ ಎಂದೂ ಬರೆದುಕೊಂಡಿದ್ದು, ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿದ್ದ ಎನ್ನಲಾಗಿದೆ. ಆದರೆ ದುರದೃಷ್ಟವಶಾತ್ ನಿಂದನಾತ್ಮಕ ಪೋಸ್ಟ್ ಮಾಡಿದ್ದ ಟ್ವಿಟ್ಟರ್ ಹ್ಯಾಂಡಲ್‍ಗೂ ಗೋ ಏರ್‍ನ ಪೈಲಟ್ ಆಸಿಫ್ ಇಕ್ಬಾಲ್‍ಗೂ ಸಂಬಂಧವೇ ಇಲ್ಲ ಎಂಬುದನ್ನು ಪರಿಗಣಿಸುವ ಗೋಜಿಗೆ ಯಾರೂ ಹೋಗಿರಲಿಲ್ಲ.
ಇದು ಸಾಲದೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸುದ್ದಿಗಳ ವೀಡಿಯೋಗಳನ್ನು ಹಾಕುವ ಯುಟ್ಯೂಬ್ ಚಾನೆಲ್ ಬಝಿಂಗ್ ಟ್ರೆಂಡ್ಸ್ ಕೂಡ ಇದೇ ವಿಚಾರದ ಕುರಿತು ವೀಡಿಯೋ ಮಾಡಿ ಅದರಲ್ಲಿ ಪೈಲಟ್ ಆಸಿಫ್ ಅವರ ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂ ಖಾತೆಗಳ ಚಿತ್ರಗಳನ್ನು ಬಳಸಿ ಹಿಂದು ಧರ್ಮ, ರಾಮ ಮತ್ತು ಸೀತೆಯನ್ನು ಅವಹೇಳನಗೈದ ವ್ಯಕ್ತಿ ಹಾಗೂ ರಾವಣನ ಪರ ಪೋಸ್ಟ್ ಮಾಡಿದ್ದ ವ್ಯಕ್ತಿ ಈತ ಎಂದು ಬಿಂಬಿಸಿತ್ತು.
ಗೋ ಏರ್ ಪೈಲಟ್ ಆಸಿಫ್ ಇಕ್ಬಾಲ್ ಖಾನ್‍ಗೂ ಈ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಆಸಿಫ್ ಖಾನ್ ಬೇರೆ ಬೇರೆ ವ್ಯಕ್ತಿಗಳು ಎನ್ನುವುದನ್ನು ಆಲ್ಟ್ ನ್ಯೂಸ್ ಕಂಡುಕೊಂಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ಆಸಿಫ್ ಇಕ್ಬಾಲ್ ಖಾನ್ ಅವರು ಮುಂಬೈ ಪೊಲೀಸರನ್ನು ಸಂಪರ್ಕಿಸಿ ತಮ್ಮ ಹೆಸರು ಬಳಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ದೂರು ನೀಡಿದ ನಂತರ ಗೋ ಏರ್ ತನ್ನ ಆದೇಶವನ್ನು ವಾಪಸ್ ಪಡೆದು ತನಿಖೆ ಮುಗಿಯುವ ತನಕ ಅವರನ್ನು ಅಮಾನತು ಮಾಡುವುದಾಗಿ ತಿಳಿಸಿತು.
“ಬಝಿಂಗ್ ಟ್ರೆಂಡ್ಸ್ ವೀಡಿಯೋದಿಂದ ಟ್ರೋಲ್ ಗೊಳಗಾದೆ. ನನ್ನ ಕುಟುಂಬವನ್ನೂ ನಿಂದಿಸಲಾಯಿತು, ಅತ್ಯಾಚಾರ ಬೆದರಿಕೆ ಹಾಕಲಾಯಿತು. ವೀಡಿಯೋ ಡಿಲೀಟ್ ಮಾಡಲಾಗಿದೆಯಾದರೂ ಅದು ಮಾಡುವ ಹಾನಿ ಮಾಡಿದೆ'' ಎಂದು ಆಸಿಫ್ ಖಾನ್ ನೋವಿನಿಂದ ಹೇಳುತ್ತಾರೆ.
ಈ ಕುರಿತು newslaundry.com ಸತತ ಪ್ರಯತ್ನದ ಬಳಿಕ ಬಝಿಂಗ್ ಟ್ರೆಂಡ್ಸ್‍ನ ಸತೀಶ್ ಸುತ್ತಾರ್ ಅವರನ್ನು ಸಂಪರ್ಕಿಸಿದ ನಂತರ ಜೂನ್ 7ರಂದು ಅವರು ಆಸಿಫ್ ಖಾನ್ ಕುರಿತ ನಕಲಿ ಸುದ್ದಿಗಳನ್ನು ನಂಬಿ ವೀಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಆದರೆ ಅದಾಗಲೇ ಈ ಪ್ರಕರಣದಲ್ಲಿ ಆಸಿಫ್ ಖಾನ್ ಅವರ ಅಭಿಪ್ರಾಯ ಕೂಡ ಕೇಳದೆ ಹಲವು ಸುದ್ದಿ ಸಂಸ್ಥೆಗಳು ಸುದ್ದಿ ಪ್ರಕಟಿಸಿದ್ದವು. ಆಕ್ಷೇಪಾರ್ಹ ಟ್ವಿಟರ್ ಹ್ಯಾಂಡಲ್‍ನ ಪ್ರೊಫೈಲ್ ಚಿತ್ರಕ್ಕೂ ಆಸಿಫ್ ಖಾನ್ ಅವರಿಗೂ ಸಾಮ್ಯತೆಯಿಲ್ಲವೆಂದು ತಿಳಿದೂ ತಪ್ಪು ಮಾಡಿದ್ದಕ್ಕೆ ಸತೀಶ್ ಸುತ್ತಾರ್ ಕ್ಷಮೆಯಾಚಿಸಿದ್ದಾರೆ.
“ನಾನು ದೊಡ್ಡ ತಪ್ಪು ಮಾಡಿದೆ, ಕ್ಷಮೆ ಕೇಳಿದ್ದೇನೆ. ಮತ್ತೆ ಈ ತಪ್ಪು ಪುನರಾವರ್ತಿಸುವುದಿಲ್ಲ. ಅವರ ವಿರುದ್ಧ ವದಂತಿ ಹರಡುವ ಉದ್ದೇಶವಿರಲಿಲ್ಲ'' ಎಂದು ಅವರು ಸ್ಪಷ್ಟಪಡಿಸಿದ್ದಾರೆ.