ದೇಶದಲ್ಲಿ ಆದಾಯ ತೆರಿಗೆ ರದ್ದುಗೊಳಿಸಿ ಬಿಡಿ ಎಂದು ಸಲಹೆಯಿತ್ತ ಜಗ್ಗಿ ವಾಸುದೇವ್!

Update: 2020-06-09 09:21 GMT
Photo: facebook.com/sadhguru

ಹೊಸದಿಲ್ಲಿ: ತೆರಿಗೆದಾರ ಹಾಗೂ ಸರಕಾರದ ನಡುವೆ ಇರುವ ವಿಶ್ವಾಸದ ಕೊರತೆ ನೀಗಿಸಲು  ಏನು ಮಾಡಬೇಕು ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಗ್ಗಿ ವಾಸುದೇವ್ ದೇಶದಲ್ಲಿ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ಇದರಿಂದುಂಟಾಗುವ ಕೊರತೆಯನ್ನು ನೀಗಿಸಲು ಸರಕು ಸೇವಾ ತೆರಿಗೆಯಂತಹ ವಹಿವಾಟು ತೆರಿಗೆಗಳನ್ನು ಹೆಚ್ಚಾಗಿ ಅವಲಂಬಿಸಬೇಕು ಎಂಬ ಸಲಹೆಯನ್ನಿತ್ತಿದ್ದಾರೆ.

ಕೇಂದ್ರ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ಪ್ರಮೋದ್ ಚಂದ್ರ ಮೋಡಿ ಹಾಗೂ ಇಶಾ ಫೌಂಡೇಶನ್ ಮುಖ್ಯಸ್ಥ ಜಗ್ಗಿ ವಾಸುದೇವ್ ಅವರ ಭಾಗವಹಿಸುವಿಕೆಯೊಂದಿಗೆ ಟ್ಯಾಕ್ಸ್ ಟ್ರಿಬ್ಯುನಲ್ ವೆಬಿನಾರ್ ಕಾರ್ಯಕ್ರಮ ನಡೆದಿತ್ತು.  

ಈ ವೆಬಿನಾರ್ ಅನ್ನು ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ಆಯೋಜಿಸಿತ್ತು.

ಆದಾಯ ತೆರಿಗೆ ಸರಕಾರದ ಆದಾಯದ ಪೈಕಿ ಕೇವಲ ಶೇ. 16ರಷ್ಟಾಗಿದೆ. ಇದರ ಬದಲು ಬ್ಯಾಂಕ್ ವಹಿವಾಟು ತೆರಿಗೆ ವಿಧಿಸುವುದು, ಕಾರ್ಪೊರೇಟ್ ತೆರಿಗೆಯನ್ನು ಇನ್ನಷ್ಟು ಕಡಿತಗೊಳಿಸುವುದು ಹಾಗೂ ಆದಾಯ ತೆರಿಗೆ ರದ್ದತಿಯಂತಹ ಕ್ರಮ ಕೈಗೊಳ್ಳಬೇಕು, ಆದಾಯ ತೆರಿಗೆಯನ್ನು ದೇಶದ ಶೇ 2ಕ್ಕಿಂತಲೂ ಕಡಿಮೆ ಜನಸಂಖ್ಯೆ ಉಳಿದ ಶೇ 98ರಷ್ಟು ಮಂದಿಯ ಸೇವೆಗೆ ಪಾವತಿಸುತ್ತಿದೆ ಎಂದು ಅವರು ಹೇಳಿದರು.

ತೆರಿಗೆ ಪಾವತಿಸದೇ ಇರುವುದು ಅಪರಾಧವಾದರೂ ಈ ದೇಶದಲ್ಲಿ ತೆರಿಗೆ ಪಾವತಿಸದೇ ಇರುವವರು ಯಾವತ್ತೂ `ಹೀರೋ' ಎಂದು ಹೇಳಿದ ಜಗ್ಗಿ ವಾಸುದೇವ್ “ನಾನು ಹೇಳಿದ್ದು ಸರಿಯಲ್ಲದೇ ಇದ್ದರೆ ಅದನ್ನು ಆಚೆ ತಳ್ಳಿ ಇಡಿ. ಇದು ನನ್ನ ಯೋಚನೆ. ಆದಾಯ ತೆರಿಗೆ ಸರಕಾರದ ಆದಾಯದ ಪೈಕಿ ಶೇ 16ರಷ್ಟು ಮಾತ್ರ ಆಗಿರುವುದರಿಂದ ಅದರ ಬದಲು ವಹಿವಾಟು ತೆರಿಗೆ ಜಿಎಸ್‍ಟಿ ಮೂಲಕ ಆ ಆದಾಯ ಗಳಿಸಬಹುದಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News