ಮೋದಿ ಸರಕಾರದ ‘ಚೀನಾ ಓಲೈಕೆ ನೀತಿ’ ಬಹಿರಂಗ

Update: 2020-06-09 15:18 GMT

ಹೊಸದಿಲ್ಲಿ,ಜೂ.9: ಪೂರ್ವ ಲಡಾಖ್‌ನಲ್ಲಿ ಚೀನಾದ ಅತಿಕ್ರಮಣದ ಬೆನ್ನಲ್ಲೇ ಆ ರಾಷ್ಟ್ರದ ಕುರಿತು ಮೋದಿ ಸರಕಾರದ ತುಷ್ಟೀಕರಣ ನೀತಿ ಬಹಿರಂಗಗೊಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ಭಾರತ-ಚೀನಾ ನಡುವಿನ ಗಡಿ ವಿವಾದದಲ್ಲಿ ಮಧ್ಯಸ್ಥಿಕೆಯನ್ನು ವಹಿಸುವ ಕೊಡುಗೆಯನ್ನು ಮುಂದಿಟ್ಟಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಒಳ್ಳೆಯ ಮೂಡ್‌ನಲ್ಲಿಲ್ಲ’ ಎಂದು ಹೇಳಿದ್ದರು. ವರ್ಷಗಳ ಕಾಲ ಚೀನಾದ ತುಷ್ಟೀಕರಣಕ್ಕಾಗಿ ಅತಿ ವಿನಮ್ರತೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದ ಮೋದಿಯವರಿಗೆ ಭಾರತದ ಭೂಪ್ರದೇಶದಲ್ಲಿ ಚೀನಾದಿಂದ ಇನ್ನೊಂದು ಅತಿಕ್ರಮಣ ಎದುರಾಗಿದೆ. ಇದು ಮೋದಿಯವರು ತನ್ನ ನಿಲುವನ್ನು ಬದಲಿಸುವಂತೆ ಮಾಡಬಹುದೇ?

ಇತ್ತ ಭಾರತವು ಕೊರೋನ ವೈರಸ್ ಬಿಕ್ಕಟ್ಟನ್ನು ಎದುರಿಸುವುದರಲ್ಲಿ ವ್ಯಸ್ತವಾಗಿದ್ದರೆ, ಅತ್ತ ಚೀನಾ ಬಲಪ್ರಯೋಗದಿಂದ ಪ್ರಾದೇಶಿಕ ಸ್ಥಿತಿಗತಿಯನ್ನು ಬದಲಿಸಲು ತನ್ನ ಮುಂದಿನ ಪ್ರಯತ್ನದಲ್ಲಿ ತೊಡಗಿಕೊಂಡಿರುವಂತಿದೆ. ಕಳೆದ ತಿಂಗಳು ಪೂರ್ವ ಲಡಾಖ್‌ನಲ್ಲಿ ಚೀನಿ ಪಡೆಗಳ ಅತಿಕ್ರಮಣದ ಹಿಂದೆ ಹಲವಾರು ತಿಂಗಳುಗಳ ಪೂರ್ವ ಸಿದ್ದತೆ ಇದ್ದಿರುವ ಸಾಧ್ಯತೆಯಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯು ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ತನ್ನ ಭಾಗದಲ್ಲಿ ಶಸ್ತ್ರಾಸ್ತ್ರಗಳ ನಿಯೋಜನೆಯ ಜೊತೆಗೆ ಈಗ ತಾನು ಅತಿಕ್ರಮ ಪ್ರವೇಶ ಮಾಡಿರುವ ಪ್ರದೇಶಗಳಲ್ಲಿ ಸುಭದ್ರ ಶಿಬಿರಗಳನ್ನು ಸ್ಥಾಪಿಸಿದೆ. ಭಾರತದ ಸೇನಾ ನಿಯೋಜನೆಗಳು ಚೀನಿ ಶಸ್ತ್ರಾಸ್ತ್ರಗಳ ದಾಳಿ ವ್ಯಾಪ್ತಿಯಲ್ಲಿವೆ ಎನ್ನುವುದು ಗಮನಾರ್ಹವಾಗಿದೆ.

 ಚೀನಾದ ‘ಅನಿರೀಕ್ಷಿತ’ ಸೇನಾ ಚಲನವಲನಗಳು ಅನಿರೀಕ್ಷಿತವಾಗಿರಲು ಸಾಧ್ಯವಿಲ್ಲ. ಕಳೆದ ಆಗಸ್ಟ್‌ನಲ್ಲಿ ಭಾರತವು ಅಕ್ಸಾಯಿ ಚಿನ್ ಸೇರಿದಂತೆ ಲಡಾಖ್‌ನ್ನು ನೂತನ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದಾಗ ಚೀನಾ ಸರಕಾರವು ಅದನ್ನು ಅತ್ಯುಗ್ರವಾಗಿ ಖಂಡಿಸಿತ್ತು. ಈ ವರ್ಷ ಪಿಎಲ್‌ಎ ಭಾರತದ ಗಡಿಗೆ ಸಮೀಪ ನಿಯಮಿತವಾಗಿ ಯುದ್ಧಾಭ್ಯಾಸಗಳನ್ನು ನಡೆಸುತ್ತಿದೆ.

ವಂಚನೆ, ನಿಗೂಢತೆಯನ್ನು ಮೈಗೂಡಿಸಿಕೊಂಡಿರುವ ಚೀನಾ ಆಗಾಗ್ಗೆ ಭಾರತದ ಭೂಪ್ರದೇಶಗಳಲ್ಲಿ ನುಸುಳುವ ಮೂಲಕ ತನ್ನ ಬಲ, ದುರಹಂಕಾರವನ್ನು ಪ್ರದರ್ಶಿಸುತ್ತಲೇ ಇದೆ. ಇಷ್ಟಾದರೂ ಮೋದಿಯವರಿಗೆ ಚೀನಿ ಅತಿಕ್ರಮಣಗಳು ನಡೆಯುತ್ತಿರುವುದು ಕಾಣಲೇ ಇಲ್ಲ. ಚೀನಾವನ್ನು ತುಷ್ಟೀಕರಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಬಹುದು ಮತ್ತು ಪಾಕಿಸ್ತಾನದೊಂದಿಗಿನ ಚೀನಾದ ಸಂಬಂಧಗಳನ್ನು ದುರ್ಬಲಗೊಳಿಸಬಹುದು ಎಂಬ ನಿರೀಕ್ಷೆಯು ಮೋದಿಯವರ ದೃಷ್ಟಿಯನ್ನು ಮಸುಕಾಗಿಸಿದ್ದಂತಿದೆ.

ಚೀನಾ ಮತ್ತು ಪಾಕಿಸ್ತಾನ ನಡುವಿನ ಆತ್ಮೀಯತೆಯು ಭಾರತದ ರಕ್ಷಣಾ ವೆಚ್ಚ ಹೆಚ್ಚಲು ಕಾರಣವಾಗಿರುವ ಜೊತೆಗೆ ಏಕಕಾಲದಲ್ಲಿ ಎರಡು ರಂಗಗಳಲ್ಲಿ ಯುದ್ಧವನ್ನು ನಡೆಸುವ ಅನಿವಾರ್ಯತೆಯನ್ನು ಹೆಚ್ಚಿಸಿದೆ. 1999ರಲ್ಲಿ ಬಿಜೆಪಿಯ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್ ಬಸ್ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನದ ಮನಸ್ಸು ಗೆಲ್ಲಲು ಪ್ರಯತ್ನಿಸಿದ್ದರು. ಅವರ ಈ ‘ಬಸ್ ರಾಜತಾಂತ್ರಿಕತೆ’ಗೆ ಬಹುಮಾನವಾಗಿ ಪಾಕಿಸ್ತಾನದ ಸೇನೆಯು ಕಾರ್ಗಿಲ್‌ನ್ನು ಆಕ್ರಮಿಸಿಕೊಂಡಿತ್ತು. ಇದು ಉಭಯ ದೇಶಗಳ ನಡುವೆ ಯುದ್ಧಕ್ಕೆ ಕಾರಣವಾಗಿ ಎರಡೂ ಕಡೆಗಳಲ್ಲಿ ನೂರಾರು ಸೈನಿಕರು ಸಾವನ್ನಪ್ಪಿದ್ದರು.

ವಾಜಪೇಯಿಯವರು ಪಾಕಿಸ್ತಾನದ ಬಗ್ಗೆ ಆಸಕ್ತಿ ಹೊಂದಿದ್ದರೆ ಮೋದಿ ತನ್ನ ಗಮನವನ್ನು ಚೀನಾದ ಮೇಲೆ ಕೇಂದ್ರೀಕರಿಸಿದ್ದಾರೆ. ಉಭಯ ನಾಯಕರ ಪ್ರಯತ್ನಗಳಿಗೂ ನಿರಾಶಾದಾಯಕ ಪ್ರತಿಫಲ ದೊರಕಿದೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಿಗೇ ಮತ್ತು ಶೃಂಗಸಭೆಗಾಗಿ ಚೀನಿ ಅಧ್ಯಕ್ಷ ಕ್ಸಿ ಝಿನ್‌ಪಿಂಗ್ ಅವರಿಗೆ ಆತಿಥ್ಯ ನೀಡುವ ಕೆಲವೇ ಗಂಟೆಗಳ ಮುನ್ನ ಮೋದಿಯವರಿಗೆ ಪಿಎಲ್‌ಎ ಪಡೆಗಳು ಚುಮರ್ ಪ್ರದೇಶದಲ್ಲಿ ಒಳನುಗ್ಗಿವೆ ಮತ್ತು ಅಲ್ಲಿ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಿಸಿವೆ ಎನ್ನುವುದು ಗೊತ್ತಾಗಿತ್ತು. ಶೃಂಗಸಭೆ ಯಶಸ್ವಿಯಾಗಿದೆ ಎಂದು ಬಿಂಬಿಸಲಾಗಿತ್ತು. ಆದರೆ ಭಾರತವು ಪ್ರದೇಶದಲ್ಲಿ ನಿರ್ಮಿಸಿರುವ ರಕ್ಷಣಾತ್ಮಕ ರಚನೆಗಳನ್ನು ನೆಲಸಮಗೊಳಿಸಲು ಒಪ್ಪುವವರೆಗೆ ಹಲವಾರು ವಾರಗಳ ಕಾಲ ಚೀನಿ ಪಡೆಗಳು ಚುಮರ್‌ನಿಂದ ಕದಲಿರಲಿಲ್ಲ. ಇದು ತುಷ್ಟೀಕರಣ ನೀತಿಯ ಆರಂಭವಾಗಿತ್ತೇ ಹೊರತು ಹೊಂದಾಣಿಕೆ ನೀತಿಯಾಗಿರಲಿಲ್ಲ ಮತ್ತು ಅಲ್ಲಿಂದೀಚಿಗೆ ಈ ನೀತಿ ಭಾರತದ ಪಾಲಿಗೆ ಹೆಚ್ಚೆಚ್ಚು ದುಬಾರಿಯಾಗುತ್ತಲೇ ಇದೆ.

 ಮರುವರ್ಷ ಬೀಜಿಂಗ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚೀನಿ ಪ್ರಜೆಗಳಿಗೆ ಭಾರತಕ್ಕೆ ಆಗಮಿಸಿದ ನಂತರ ವಿದ್ಯುನ್ಮಾನ ಪ್ರವಾಸಿ ವೀಸಾಗಳನ್ನು ನೀಡುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ತನ್ನದೇ ಆಡಳಿತವನ್ನು ಅಚ್ಚರಿಯಲ್ಲಿ ಕೆಡವಿದ್ದರು. ಚೀನಿ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನವಾಗಿ ‘ಕಳವಳಕಾರಿ ದೇಶ’ಗಳ ಪಟ್ಟಿಯಿಂದ ಚೀನಾದ ಹೆಸರನ್ನು ಸಹ ತೊಡೆದುಹಾಕಿದ್ದರು. ಆದರೆ ಹೂಡಿಕೆಯ ಬದಲಾಗಿ ಚೀನಿ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ಸುರಿಯಲು ಈ ಕ್ರಮವು ಮಾರ್ಗವನ್ನು ತೆರೆದಿತ್ತು. ಮೋದಿಯವರ ಕಣ್ಗಾವಲಿನಲ್ಲಿಯೇ ಚೀನಾ ಭಾರತದೊಂದಿಗೆ ತನ್ನ ವ್ಯಾಪಾರವನ್ನು ವಾರ್ಷಿಕ 60 ಶತಕೋಟಿ ಡಾಲರ್‌ಗಳಿಗೆ ಇಮ್ಮಡಿಗೊಳಿಸಿಕೊಂಡಿದೆ ಮತ್ತು ಇದು ಸರಿಸುಮಾರು ಭಾರತದ ವಾರ್ಷಿಕ ರಕ್ಷಣಾ ವೆಚ್ಚದಷ್ಟೇ ಆಗಿದೆ.

 ತನ್ಮಧ್ಯೆ ಪಿಎಲ್‌ಎ ವಿವಾದಿತ ಪ್ರದೇಶಗಳಲ್ಲಿ ಅತಿಕ್ರಮಣವನ್ನು ಮುಂದುವರಿಸಿದೆ. 2017ರಲ್ಲಿ ಉಭಯ ಸೇನೆಗಳ ನಡುವೆ ಉಂಟಾಗಿದ್ದ ಡೋಕ್ಲಾಮ್ ಬಿಕ್ಕಟ್ಟು ಬರೋಬ್ಬರಿ 73 ದಿನಗಳ ಕಾಲ ಮುಂದುವರಿದಿತ್ತು. ಈ ಬಿಕ್ಕಟ್ಟನ್ನು ಅಂತ್ಯಗೊಳಿಸಿದ್ದನ್ನು ಭಾರತವು ವ್ಯೂಹಾತ್ಮಕ ವಿಜಯ ಎಂದು ಘೋಷಿಸಿಕೊಂಡಿತ್ತು. ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ಕಾಯಂ ಮಿಲಿಟರಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ತನ್ನ ಪಡೆಗಳ ನಿಯೋಜನೆಯನ್ನು ವಿಸ್ತರಿಸಿದೆ ಮತ್ತು ಡೋಕ್ಲಾಮ್ ಮೇಲೆ ಹೆಚ್ಚಿನ ಹಿಡಿತವನ್ನು ಸಾಧಿಸಿದೆ. ಇದರಿಂದಾಗಿ ಭೂತಾನದ ಸುರಕ್ಷತೆಯ ಖಾತ್ರಿದಾರನಾಗಿರುವ ಭಾರತವು ಈ ಪುಟ್ಟರಾಷ್ಟ್ರದ ಪ್ರಾದೇಶಿಕ ಸಾರ್ವಭೌಮತೆಯನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ.

 ಇಷ್ಟೆಲ್ಲ ನಡೆದರೂ ಮೋದಿಯವರು ಭಾರತದ ತುಷ್ಟೀಕರಣ ನೀತಿಯನ್ನು ಕಾಯ್ದುಕೊಂಡೇ ಬಂದಿದ್ದಾರೆ. 2018ರಲ್ಲಿ ಅವರ ಸರಕಾರವು ದಲಾಯಿ ಲಾಮಾ ಮತ್ತು ಭಾರತದಲ್ಲಿರುವ ಟಿಬೆಟ್‌ನ ದೇಶಭ್ರಷ್ಟ ಸರಕಾರದೊಂದಿಗೆ ಅಧಿಕೃತ ಸಂಪರ್ಕದಿಂದ ದೂರಸರಿದಿತ್ತು. ಕ್ಸಿ ಬಳಿಕ ಬಹಿರಂಗಗೊಳಿಸಿರುವಂತೆ ಇದೇ ವೇಳೆ ಮೋದಿಯವರು ವಾರ್ಷಿಕ ‘ಅನೌಪಚಾರಿಕ’ ದ್ವಿಪಕ್ಷೀಯ ಶೃಂಗಸಭೆಯ ಪ್ರಸ್ತಾವನ್ನು ಮುಂದಿಟ್ಟಿದ್ದರು ಮತ್ತು ಉನ್ನತ ಮಟ್ಟದ ಸಭೆಗಳು ಭಾರತ ಕುರಿತಂತೆ ಚೀನಾದ ಕಾರ್ಯತಂತ್ರಕ್ಕೆ ನೆರವಾಗುವುದರಿಂದ ಕ್ಸಿ ಈ ಪ್ರಸ್ತಾವನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಈವರೆಗೆ ಉಭಯ ನಾಯಕರ ನಡುವೆ ಇಂತಹ ಎರಡು ಶೃಂಗಸಭೆಗಳು ಮತ್ತು 14 ಇತರ ಸಭೆಗಳು ನಡೆದಿವೆ.

ಹೀಗೆ ಮೋದಿ ತಾನು ಪಟ್ಟ ಕಷ್ಟಗಳಿಗೆ ಪಡೆದಿರುವ ಪ್ರತಿಫಲಗಳೇನು? ಚೀನಾ ತನ್ನ ಪ್ರಾದೇಶಿಕತೆಯ ‘ಪರಿಷ್ಕರಣೆ’ಯನ್ನು ಹೆಚ್ಚಿಸುತ್ತಲೇ ಇದೆ ಮತ್ತು ಇದೇ ವೇಳೆ ದ್ವಿಪಕ್ಷೀಯ ಆರ್ಥಿಕ ಸಂಬಂಧದಿಂದ ಹೆಚ್ಚೆಚ್ಚು ಲಾಭಗಳನ್ನು ಪಡೆಯುತ್ತಲೇ ಇದೆ.

ಪರಿಸ್ಥಿತಿ ಈ ಹಂತಕ್ಕೆ ತಲುಪಿರುವುದಕ್ಕೆ ಮೋದಿಯವರು ತನ್ನನ್ನು ತಾನೇ ದೂರಿಕೊಳ್ಳಬೇಕಿದೆ. ನೀತಿಯ ಅತಿಯಾದ ಖಾಸಗೀಕರಣ ಮತ್ತು ವ್ಯೂಹಾತ್ಮಕ ಅನುಭವದ ಕೊರತೆಯಿಂದಾಗಿ ಮೋದಿಯವರು ತಾನು ಕುಶಲ ರಾಜತಾಂತ್ರಿಕನಲ್ಲ, ಆದರೆ ನೆವಿಲೆ ಚೇಂಬರ್ಲೈನ್‌ನ ಭಾರತೀಯ ರೂಪ ಎನ್ನುವುದನ್ನು ತೋರಿಸಿದ್ದಾರೆ. ಮೋದಿಯವರು ತನ್ನ ತಪ್ಪುಗಳಿಂದ ಕಲಿತುಕೊಳ್ಳುವವರೆಗೆ ಮತ್ತು ಚೀನಾ ಕುರಿತು ತನ್ನ ನೀತಿಯನ್ನು ಬದಲಿಸಿಕೊಳ್ಳುವವರೆಗೆ ಭಾರತದ ಜನರು ಮತ್ತು ದೇಶದ ಪ್ರಾದೇಶಿಕ ಸಾರ್ವಭೌಮತೆ ಬೆಲೆಯನ್ನು ತೆರುತ್ತಲೇ ಇರಬೇಕಾಗುತ್ತದೆ.

ಕೃಪೆ: ಬ್ರಹ್ಮ ಚೆಲ್ಲಾನಿ, Project-Syndicate.org

https://bit.ly/3dLWbZW

Writer - ಬ್ರಹ್ಮ ಚೆಲ್ಲಾನಿ

contributor

Editor - ಬ್ರಹ್ಮ ಚೆಲ್ಲಾನಿ

contributor

Similar News