×
Ad

ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್ ಸಹೋದರನಿಗೆ ಕೊರೋನ ಸೋಂಕು

Update: 2020-06-11 20:24 IST

ಇಸ್ಲಾಮಾಬಾದ್, ಜೂ. 11: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಸಹೋದರ ಹಾಗೂ ಪ್ರತಿಪಕ್ಷ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್) ಪಕ್ಷದ ಮುಖ್ಯಸ್ಥ ಶೆಹ್ಬಾಝ್ ಶರೀಫ್ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

68 ವರ್ಷದ ಶೆಹ್ಬಾಝ್ ಶರೀಫ್ ವೈರಸ್‌ನ ಸೋಂಕಿಗೆ ಒಳಗಾಗಿರುವುದನ್ನು ಪಿಎಮ್‌ಎಲ್-ಎನ್ ಪಕ್ಷದ ನಾಯಕ ಅತಾವುಲ್ಲಾ ತರಾರ್ ಗುರುವಾರ ಖಚಿತಿಪಡಿಸಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜೂನ್ 9ರಂದು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋದ ಕಚೇರಿಗೆ ಹೋಗಿದ್ದಾಗ ಈ ಸೋಂಕು ಅವರಿಗೆ ತಗಲಿದೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

‘‘ಶೆಹ್ಬಾಝ್ ಶರೀಫ್ ಕ್ಯಾನ್ಸರ್‌ನಿಂದ ಬಳಲಿದ್ದಾರೆ ಹಾಗೂ ಇತರ ಜನರೊಂದಿಗೆ ಹೋಲಿಸಿದರೆ ಅವರ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿದೆ ಎಂಬುದನ್ನು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋಗೆ ಹಲವು ಬಾರಿ ತಿಳಿಸಲಾಗಿತ್ತು’’ ಎಂದು ತರಾರ್ ಹೇಳಿದರು.

ಸಾಂಕ್ರಾಮಿಕದ ಬೆದರಿಕೆಯಿಂದಾಗಿ ಶೆಹ್ಬಾಝ್ ಈಗಾಗಲೇ ಕ್ವಾರಂಟೈನ್‌ನಲ್ಲಿ ಬದುಕುತ್ತಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗುವುದಕ್ಕಾಗಿ ಅವರು ಮನೆಯಿಂದ ಹೊರಹೋಗಬೇಕಾಯಿತು ಎಂದರು.

‘‘ಶೆಹ್ಬಾಝ್ ಶರೀಫ್‌ಗೆ ಏನಾದರೂ ಸಂಭವಿಸಿದರೆ ಇಮ್ರಾನ್ ನಿಯಾಝಿ (ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್) ಮತ್ತು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಅದಕ್ಕೆ ಹೊಣೆ ಹೊರಬೇಕು’’ ಎಂದು ಅವರು ಹೇಳಿದರು.

ಒಟ್ಟು 2,356 ಸಾವು: ಬ್ಯೂರೋದ ಹಲವು ಅಧಿಕಾರಿಗಳು ಈಗಾಗಲೇ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಪಾಕಿಸ್ತಾನದ ಹಲವು ರಾಜಕಾರಣಿಗಳು ಈ ಮಾರಕ ಸಾಂಕ್ರಾಮಿಕದ ಸೋಂಕಿಗೆ ಈಗಾಗಲೇ ಒಳಗಾಗಿದ್ದಾರೆ. ಕನಿಷ್ಠ ನಾಲ್ವರು ಸಂಸದರು ಮಾರಕ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5,834 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಆ ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,19,536ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಅಲ್ಲಿ 101 ಕೊರೋನ ವೈರಸ್ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಒಟ್ಟು ಸಂಖ್ಯೆ 2,356 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News