×
Ad

ಕೋವಿಡ್-19 ಭೀತಿ: ಶಬರಿಮಲೆ ಕ್ಷೇತ್ರದಲ್ಲಿ ಭಕ್ತರಿಗಿಲ್ಲ ಸ್ವಾಮಿ ದರ್ಶನ; ಅರಾಟ್ಟು ಉತ್ಸವ ಮತ್ತೆ ಮುಂದೂಡಿಕೆ

Update: 2020-06-11 20:42 IST

ತಿರುವನಂತಪುರ,ಜೂ.11: ಶಬರಿಮಲೆಯ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಮಾಸಿಕ ಪೂಜೆಗಾಗಿ ಜೂ.14ರಿಂದ ತೆರೆಯಲಾಗುತ್ತದೆಯಾದರೂ ಭಕ್ತರಿಗೆ ದರ್ಶನ ಭಾಗ್ಯ ದೊರೆಯುವುದಿಲ್ಲ, ಸದ್ಯಕ್ಕೆ ಪೂಜಾವಿಧಿಗಳನ್ನು ಮಾತ್ರ ನಡೆಸಲಾಗುತ್ತದೆ ಮತ್ತು ಜೂ.19ರಂದು ದೇವಸ್ಥಾನವನ್ನು ಮತ್ತೆ ಮುಚ್ಚಲಾಗುತ್ತದೆ.

ಕೇರಳ ದೇವಸ್ವಂ ಸಚಿವ,ತಿರುವಾಂಕೂರು ದೇವಸ್ವಂ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ದೇವಸ್ಥಾನದ ತಂತ್ರಿ ಅವರು ನಡೆಸಿದ ಸಭೆಯಲ್ಲಿ ದೇಶಾದ್ಯಂತ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ದೇವಸ್ಥಾನದಲ್ಲಿ ಜೂ.19ರಿಂದ ಜೂ.28ರವರೆಗೆ ನಡೆಯಬೇಕಿದ್ದ ‘ಅರಾಟ್ಟು’ ಉತ್ಸವವನ್ನು ಮತ್ತೆ ಮುಂದೂಡಲಾಗಿದೆ. ನಿಗದಿಯಂತೆ ಈ ಉತ್ಸವ ಎಪ್ರಿಲ್‌ನಲ್ಲಿ ನಡೆಯಬೇಕಿತ್ತು.

ತನ್ನ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಮತ್ತು ಈ ದೇವಸ್ಥಾನವನ್ನು ತೆರೆಯುವ ವಿಷಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಇತ್ತೀಚಿನ ಸಭೆಗೆ ಮುನ್ನ ಮತ್ತು ನಂತರ ತನ್ನೊಂದಿಗೆ ಸಮಾಲೋಚಿಸಲಾಗಿತ್ತು ಎಂದು ತಂತ್ರಿ ಕಂದರಾರು ಮಹೇಶ ಮೋಹನಾರು ಅವರು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮೋಹನಾರು ಅವರು ದೇವಸ್ಥಾನವನ್ನು ತೆರೆಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ದೇವಸ್ವಂ ಮಂಡಳಿಗೆ ಪತ್ರ ಬರೆದಿದ್ದರು.

ಈ ಹಿಂದೆ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿದ ಬಳಿಕ ಜೂ.14ರಿಂದ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News