ಕಲರ್ಸ್ ಕನ್ನಡದಿಂದ ವಾರಾಂತ್ಯಕ್ಕೆ ಹೊಸ ರಂಗು : ದೇವಕೀ ನಂದನ, ಇವಳು ಸುಜಾತಾ, ನಾಗಕನ್ನಿಕೆ ಪ್ರಸಾರ

Update: 2020-06-11 17:34 GMT

ಬಣ್ಣ ಹೊಸದಾಗಿದೆ ಎಂಬ ಉತ್ಸಾಹದಲ್ಲಿರುವ ಕಲರ್ಸ್ ಕನ್ನಡ ಚಾನೆಲ್, ಈಗ ನಿಮ್ಮ ವಾರಾಂತ್ಯಗಳನ್ನು ತುಸು ಹೆಚ್ಚೇ ರಂಗೇರಿಸಲು ಹೊರಟಿದೆ. ಇದೇ ಶನಿವಾರದಿಂದ (ಜೂನ್ 13) ನಾಲ್ಕು ಕಲರ್ ಫುಲ್ ಶೋಗಳನ್ನು ಆರಂಭಿಸುತ್ತಿದೆ. ನಾಲ್ಕು ಶೋಗಳು ನಾಲ್ಕು ಬೇರೆ ಬೇರೆ ಬಣ್ಣಗಳನ್ನು ಹೊತ್ತು ತರಲಿದ್ದು, ನಿಮ್ಮ ವಾರಾಂತ್ಯಗಳು ಹಿಂದೆಂದಿಗಿಂತ ಹೆಚ್ಚು ವರ್ಣರಂಜಿತವಾಗುವ ಸೂಚನೆಗಳು ಕಾಣುತ್ತಿವೆ.

ವಿಶೇಷವೇನೆಂದರೆ ಈ ನಾಲ್ಕು ಹೊಸ ಶೋಗಳು ವೀಕ್ಷಕರನ್ನು ನಾಲ್ಕು ವಿಭಿನ್ನ ಲೋಕಗಳಿಗೆ ಕರೆದೊಯ್ಯಲಿವೆ. ಬೆಣ್ಣೆಕೃಷ್ಣನ ಬಾಲಲೀಲೆಗಳನ್ನು ಬಣ್ಣಿಸುವ ಪೌರಾಣಿಕ ಕತೆ 'ದೇವಕೀ ನಂದನ', ಶೂರ ಅಶೋಕನ ಉದಾತ್ತತೆಯನ್ನು ಬಿಂಬಿಸುವ ಐತಿಹಾಸಿಕ ಕಥಾನಕ 'ಚಕ್ರವರ್ತಿ ಅಶೋಕ', ಸರ್ಪಸಾಮ್ರಾಜ್ಯದ ಪ್ರೇಮ ಪ್ರಣಯ ಸೇಡುಗಳ ಮಾಯಾಲೋಕವನ್ನು ಬಿಚ್ಚಿಡುವ 'ನಾಗಕನ್ನಿಕೆ' ! ಹೀಗೆ ಮೂರು ವಿಭಿನ್ನ ಕಲ್ಪನಾ ವಿಲಾಸಗಳಲ್ಲಿ ಮುಳುಗೇಳುವಾಗ ನಡುವೆ ಒಂದು ವಾಸ್ತವಕ್ಕೆ ಎಳೆತರುವ ಕತೆಯೂ ಇರಬೇಕಲ್ಲವೆ ? ತನ್ನ ಬದುಕಿನ ಬಣ್ಣ ಕಸಿದ ವಿಧಿಯೊಡನೆ ಹೋರಾಟಕ್ಕಿಳಿದ ಒಂಟಿ ಹುಡುಗಿಯ ಕತೆ 'ಇವಳು ಸುಜಾತಾ' ಆ ಕೆಲಸ ಮಾಡುತ್ತದೆ.

ತಲಾ ಒಂದು ಗಂಟೆಯ ಈ ನಾಲ್ಕೂ ಶೋಗಳು ಶನಿವಾರ ರವಿವಾರ ಎರಡೂ ದಿನ ಪ್ರಸಾರವಾಗುತ್ತವೆ. ದೇವಕೀ ನಂದನ ಸಂಜೆ 5 ಗಂಟೆಗೆ, ಇವಳು ಸುಜಾತ ಸಂಜೆ 6 ಗಂಟೆಗೆ, ನಾಗಕನ್ನಿಕೆ ಸಂಜೆ 7 ಗಂಟೆಗೆ ಹಾಗೂ ಚಕ್ರವರ್ತಿ ಅಶೋಕ ರಾತ್ರಿ 8 ಗಂಟೆಗೆ ಶುರುವಾಗುತ್ತವೆ.

ಒಟ್ಟಾರೆ, ಕಲರ್ಸ್ ಕನ್ನಡದ ಈ ಹೊಸ ಶೋಗಳು ನಿಮ್ಮ ವೀಕೆಂಡುಗಳ ಬಣ್ಣವನ್ನು ಹೊಸದಾಗಿಸುವುದರ ಜೊತೆಗೆ ಚಾನೆಲ್ ಜೊತೆಗಿನ ನಿಮ್ಮ ಬಂಧವನ್ನೂ ಬಿಗಿಗೊಳಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News