×
Ad

ಲಾಕ್‌ಡೌನ್ ಅವಧಿಯಲ್ಲಿ ವೇತನ ನೀಡದ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂಕೋರ್ಟ್

Update: 2020-06-12 12:36 IST

ಹೊಸದಿಲ್ಲಿ, ಜೂ.12: ಕೊರೋನ ವೈರಸ್ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ವೇತನ ಪಾವತಿಸದ ಉದ್ಯೋಗದಾತರ ವಿರುದ್ಧ ಜುಲೈ ಅಂತ್ಯದ ತನಕ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದ್ದು, ಈ ತೀರ್ಪು ಖಾಸಗಿ ಉದ್ಯೋಗದಾತರಿಗೆ ನಿಟ್ಟುಸಿರುಬಿಡುವಂತೆ ಮಾಡಿದೆ.

ನೌಕರರು ಹಾಗೂ ಉದ್ಯೋಗದಾತರ ನಡುವೆ ಮಾತುಕತೆ ನಡೆಸಲು ರಾಜ್ಯ ಸರಕಾರ ಗಳು ಅನುಕೂಲ ಮಾಡಿಕೊಡಬೇಕು. ತಮ್ಮ ವರದಿಯನ್ನು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಲಾಕ್‌ಡೌನ್ ಸಮಯದಲ್ಲಿ ಪೂರ್ಣ ವೇತನವನ್ನು ಕಡ್ಡಾಯವಾಗಿ ಪಾವತಿಸಲು ಆದೇಶಿಸಿದ್ದ ಮಾರ್ಚ್ 29ರ ಅಧಿಸೂಚನೆಯ ಕಾನೂನು ಬದ್ಧತೆಯ ಬಗ್ಗೆ ಉತ್ತರ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಇನ್ನೂ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ಮಾರ್ಚ್‌ನಲ್ಲಿ ಎಲ್ಲ ಉದ್ಯೋಗದಾತರಿಗೆ ಹೊರಡಿಸಿದ್ದ ತನ್ನ ಸುತ್ತೋಲೆಯಲ್ಲಿ ಕೋವಿಡ್-19 ಅನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಂಸ್ಥೆಗಳು ಮುಚ್ಚಲ್ಪಟ್ಟ ಅವಧಿಗೆ ಯಾವುದೆ ಕಡಿತವಿಲ್ಲದೆ ತಮ್ಮ ಕಾರ್ಮಿಕರಿಗೆ ವೇತನವನ್ನು ಪಾವತಿಸುವಂತೆ ಕೇಳಿಕೊಂಡಿತ್ತು.

ಕೇಂದ್ರ ಸರಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಶನ್ ಹಾಗೂ ಲುಧಿಯಾನ ಹ್ಯಾಂಡ್ ಟೂಲ್ಸ್ ಅಸೋಸಿಯೇಶನ್, ಫಿಕಸ್ ಪ್ಯಾಕ್ಸ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಜಸ್ಟಿಸ್‌ಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ಉನ್ನತ ನ್ಯಾಯಾಲಯದ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News