ಸುಪ್ರೀಂಕೋರ್ಟ್ ಯಾವುದೇ ಜಾತಿಗಳನ್ನು ಪಟ್ಟಿಯಿಂದ ಕೈಬಿಡುವ ಆದೇಶ ನೀಡಿಲ್ಲ

Update: 2020-06-12 07:23 GMT

ಆತ್ಮೀಯರೇ,

ಕಳೆದೆರಡು ದಿನಗಳಿಂದ ಪರಿಶಿಷ್ಟ ಜಾತಿಯ ಪಟ್ಟಿಯಿಂದ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಕೈಬಿಡಬೇಕೆಂದು ಆದೇಶ ನೀಡಿದೆಯೆಂಬ ಸುದ್ದಿ ಹಲವರಲ್ಲಿ ಅನಗತ್ಯ ಗೊಂದಲ ಮೂಡಿಸಿದೆ.

ಇದು ಸುಳ್ಳು ಸುದ್ದಿಯಾಗಿದೆ..

ರಾಯಚೂರಿನ ಮಹೇಂದ್ರ ಕುಮಾರ್ ಮೈತ್ರ ಎನ್ನುವವರು ಕರ್ನಾಟಕ ದಲ್ಲಿ ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಎಸ್ ಸಿ ಪಟ್ಟಿಯಿಂದ ಕೈಬಿಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ WP (C) 1381/2019 ಬಗ್ಗೆ ಜಸ್ಟೀಸ್ ನಾರಿಮನ್ ಮತ್ತು ರವೀಂದ್ರ ಭಟ್ ಪೀಠ ಫೆ. 14 ರಂದು ನೀಡಿದ ಆದೇಶದ ಪ್ರತಿ ಅಡಕದಲ್ಲಿದೆ.

ಈ ಆದೇಶದಲ್ಲಿ ಸುಪ್ರೀಂಕೋರ್ಟ್ ಅರ್ಜಿಯಲ್ಲಿ ಕೋರಲಾದ ಪರಿಹಾರದ ಬಗ್ಗೆ ಯಾವ ತೀರ್ಮಾನವನ್ನೂ ನೀಡಿಲ್ಲ...

ಬದಲಿಗೆ ಮುಂದಿನ ಮೂರು ವಾರದೊಳಗೆ ಈ ವಿಷಯವನ್ನು National Commission for Schedule Castes (NCSC) ಮುಂದೆ ತೆಗೆದುಕೊಂಡು ಹೋಗಲು ಅನುಮತಿಸಿದೆ ಅಷ್ಟೇ.  ಹಾಗೊಂದು ವೇಳೆ ಅರ್ಜಿ ದಾರರು ಹೇಳಿದ ಅವಧಿಯೊಳಗೆ ಅಯೋಗದ ಮುಂದೆ ಅರ್ಜಿ ಸಲ್ಲಿಸಿದಲ್ಲಿ ಪರಿಶಿಷ್ಟ ಅಯೋಗವು ಅರ್ಜಿ ಯನ್ನು ಪರಿಶೀಲಿಸಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ತನ್ನ ವರದಿ ಸಲ್ಲಿಸುತ್ತದೆ ಎಂದಷ್ಟೇ ಹೇಳಿ ಅರ್ಜಿ ಯನ್ನು ವಿಲೇವಾರಿ ಮಾಡಿದೆ.

NCSCಯು ವರದಿ ಸಲ್ಲಿಸಲು ಅದು ಸಮಯವನ್ನೂ ನಿಗದಿ ಮಾಡಿಲ್ಲ. ತನ್ನ ಮುಂದೆ ವರದಿ ಸಲ್ಲಿಸಬೇಕೆಂದೂ ಹೇಳಿಲ್ಲ. NCSC ಮುಂದೆ ಅರ್ಜಿ ಬಂದಾಗ ಮಾ. 12 ರಂದು ಅದನ್ನು ಸೂಕ್ತ ಕ್ರಮಕ್ಕಾಗಿ ಕರ್ನಾಟಕ ಸರ್ಕಾರ ಕ್ಕೆ ವರ್ಗಾಯಿಸಿದೆ. ಇಲ್ಲೂ ಸಮಯಾವಧಿಯ ನಿರ್ಬಂಧವೇನೂ ಇಲ್ಲ. NCSC ಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ಬರೆದ ಪತ್ರದ ಪ್ರತಿಯೂ ಅಡಕದಲ್ಲಿದೆ. ಗಮನಿಸುವುದು...

ಇದಾಗಿ ಮೂರು ತಿಂಗಳಾಗಿದೆ. ಈಗ ಇದ್ದಕ್ಕಿದ್ದಂತೆ ಏಕಿದು ಸದ್ದು ಮಾಡುತ್ತಿದೆ ? ಇದರ ಹಿಂದೆ ಪರಿಷತ್ತು ಹಾಗೂ ರಾಜ್ಯಸಭಾ ಚುನಾವಣಾ ರಾಜಕಾರಣ ಕೆಲಸ ಮಾಡುತ್ತಿದೆಯೇ ? ಎಲ್ಲಕ್ಕಿಂತ ಮುಖ್ಯವಾಗಿ ಪರಿಶಿಷ್ಟ ಪಟ್ಟಿಯಿಂದ ತೆಗೆಯುವ ಅಥವಾ ಸೇರಿಸುವ ಅಧಿಕಾರ ಆರ್ಟಿಕಲ್ 341(1) ರ ಪ್ರಕಾರ ರಾಷ್ಟ್ರಪತಿಗೆ ಸೇರಿದ್ದು. ಅದನ್ನು ಅವರು ಸಂಬಂಧಪಟ್ಟ ರಾಜ್ಯದ ಗವರ್ನರ್ ಅಂದರೆ ರಾಜ್ಯ ಸರ್ಕಾರದ ಸಮಾಲೋಚನೆ ಯನ್ನು ಮಾಡಿ ಘೋಷಿಸಬೇಕು. ಅರ್ಥಾತ್ ಕೇಂದ್ರ ಸರ್ಕಾರ ಹೇಳಿದಂತೆ ಮಾಡಬೇಕು. ಆ ರೀತಿ ಘೋಷಿಸಲ್ಪಟ್ಟ ಪಟ್ಟಿಯನ್ನು ಸಹ ಆರ್ಟಿಕಲ್ 341 (2) ರ ಪ್ರಕಾರ ಸಂಸತ್ತು ಕಾನೂನಿನ ಮೂಲಕ ಬದಲಿಸಬಹುದು. ಹೀಗಾಗಿ ಹೇಗೆ ನೋಡಿದರು ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ದಲ್ಲಿರುವ ಬಿಜೆಪಿ ಸರ್ಕಾರದ ರಾಜಕೀಯ ಲೆಕ್ಕಾಚಾರಗಳನ್ನು ಆಧರಿಸಿರುವ ವಿಷಯವಾಗಿದೆ.

ಮೀಸಲಾತಿಯ ಪರಿಕಲ್ಪನೆಯನ್ನೇ ನಾಶಮಾಡಲು ಮನುವಾದಿಗಳು ಸಕಲ ಸನ್ನಾಹಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಒಳಮೀಸಲಾತಿಯ ಸವಾಲನ್ನು ದಮನಿತ ಸಮುದಾಯಗಳು ಅತ್ಯಂತ ಪ್ರಬುದ್ಧತೆ ಯಿಂದ ಹಾಗು ಪ್ರಜಾತಾಂತ್ರಿಕವಾಗಿ ನಿಭಾಯಿಸುವ ಅಗತ್ಯವಿದೆ. ಅತ್ಯಂತ ದಮನಿತ ಹಾಗು ಶೋಷಿತರಿಗೆ ಮೊದಲ ಪಾಲೆಂಬ ಮೀಸಲಾತಿಯ ತತ್ವವೇ ಒಳಮೀಸಲಾತಿಯ ನಿಲುವಿಗೂ ಬುನಾದಿಯಾಗಬೇಕಿದೆ.

ಈ ಹಿನ್ನೆಲೆಯಲ್ಲಿ ಒಳಮೀಸಲಾತಿಯ ಬಗ್ಗೆ ದಮನಿತ ಸಮುದಾಯ ತಾಳಬೇಕಾದ ತಾತ್ವಿಕ ನಿಲುವು ಹಾಗು ಈ ವಿಷಯದಲ್ಲಿ ಈವರೆಗೆ ನಡೆದು ಬಂದಿರುವ ರಾಜಕಾರಣದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಿರುವ ನಿಲುವುಗಳ ಬಗ್ಗೆ ಕೆಲವು ಅಭಿಪ್ರಾಯಗಳು ಸಕಾಲಿಕವೆಂದು ಭಾವಿಸಿ ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ:

ಒಳಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿಸ್ತರಣೆ

ಅಂಬೇಡ್ಕರ್ ಅವರು ಭಾರತ ಸಮಾಜದಲ್ಲಿರುವ ಜಾತಿ ಪದ್ಧತಿ ಮತ್ತು ಅಸ್ಪೃಷ್ಯತೆಯನ್ನು ಮತ್ತು ಅದು ಉಂಟು ಮಾಡುವ ರಾಜಕೀಯ, ಸಾಮಾಜಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಜಾತಿ ವಿನಾಶದ ಒಂದು ಮಧ್ಯಂತರ ಉಪಕ್ರಮವಾಗಿ ಮೀಸಲಾತಿಯನ್ನು ಶಿಪಾರಸ್ಸು ಮಾಡಿದ್ದರು, ಭಾರತದ ಜಾತಿ ಸಮಾಜ ಶ್ರೇಣೀಕೃತ ಅಸಮಾನತೆಯಿಂದ ಕೂಡಿದ ಸಮಾಜವೆಂದು ವಿವರಿಸಿದ್ದ ಅಂಬೇಡ್ಕರ್ ಅವರು ಮೇಲ್ಚಲನೆ ಪಡೆದ ದಲಿತ ಸಮುದಾಯಗಳೊಳಗೂ ಶ್ರೇಣೀಕೃತ ಅಸಮಾನತೆ ಏರ್ಪಡುವ ಬಗ್ಗೆ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದರು. ಮೀಸಲಾತಿ ಮತ್ತು ಒಳಮೀಸಲಾತಿಗಳೆರಡೂ ಅಂಬೇಡ್ಕರ್ ಅವರ ಈ ಸಾಮಾಜಿಕ ವಿಶ್ಲೇಷಣೆಯ ಸಹಜ ಪರಿಹಾರೋಪಾಯಗಳಾಗಿ ರೂಪುಗೊಳ್ಳುತ್ತವೆ.

ಭಾರತದ ನಾಗರಿಕ ಸಮಾಜದ ಜಾತಿ ಶ್ರೇಣೀಕರಣ ಮತ್ತು ಅಸ್ಪೃಷ್ಯತೆಗಳೆಂಬ  ಅನಾಗರಿಕತೆಯಿಂದ ಹೊರಬರುವ ತನಕ ಕೋಟಾ ಪದ್ಧತಿಯಲ್ಲೇ ಪ್ರಾತಿನಿಧ್ಯ ನಿಗದಿಯಾದರೆ ಮಾತ್ರ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ದಕ್ಕಲು ಸಾಧ್ಯ ಎಂಬುದು ಅಂಬೇಡ್ಕರ್ ಅವರ ಖಚಿತ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲೇ ಸಾಮಾಜಿಕ ಪ್ರಾತಿನಿಧ್ಯದ ಆಶಯಗಳ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದಲ್ಲಿ ಮೀಸಲಾತಿಯ ಅವಕಾಶಗಳು ಸೇರ್ಪಡೆಯಾಗಿದೆಯೇ ಹೊರತು ಬಡತನ ನಿವಾರಣೆಯ ಕ್ರಮವಾಗಿಯಲ್ಲ. ಆದ್ದರಿಂದಲೇ ಅದು ಜಾತಿ ನಿರ್ಮೂಲನಾ ಕ್ರಮವೂ ಅಲ್ಲ.

ಅದರಲ್ಲೂ ಅಸ್ಪೃಷ್ಯತೆಯು ಸಾಮಾಜಿಕ ಹಿಂದುಳಿದಿರುವಿಕೆಯ ಅತ್ಯಂತಿಕ ಪುರಾವೆಯೆಂದು ಸಾಬೀತಾಗಿರುವುದರಿಂದ ಪರಿಶಿಷ್ಟ ಜಾತಿಯ ವರ್ಗೀಕರಣೆಕ್ಕೆ ಅಸ್ಪೃಷ್ಯತೆಯ ಮಾನದಂಡವನ್ನೂ ನಿಗದಿ ಮಾಡಲಾಯಿತು. ಆದರೆ ಅದೇ ಸಮಯದಲ್ಲಿ ಇತರ ಹಿಂದುಳಿದ ಜಾತಿಗಳಿಗೂ ಆಯಾ ಜಾತಿಗಳ ಹಿಂದುಳಿದಿರುವಿಕೆಗಳ ಅನುಗುಣವಾಗಿ ಮೀಸಲಾತಿ ಇರಬೇಕೆಂದು ಸಂವಿಧಾನದ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು.

ಈ ತಾತ್ವಿಕ ಪ್ರಣಾಳಿಯನ್ನು ಒಪ್ಪಿಕೊಳ್ಳುವುದಾದರೆ ಒಳಮೀಸಲಾತಿಯು ಮೀಸಲಾತಿ ತರ್ಕದ ಸಹಜ ವಿಸ್ತರಣೆಯಾಗಿರುತ್ತದೆ. ಹೀಗಾಗಿ ಮೀಸಲಾತಿಗೆ ಸತ್ವ ಒದಗಬೇಕೆಂದರೆ ಒಳಮೀಸಲಾತಿಯ ತತ್ವವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಅದು ಮಾತ್ರ ದಲಿತ ಸಮುದಾಯದ ಐಕ್ಯತೆಯನ್ನು ಗಟ್ಟಿಗೊಳಿಸಿ ದಲಿತ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವ ಬ್ರಾಹ್ಮಣೀಯ ಕುತಂತ್ರಗಳನ್ನು ಸೋಲಿಸಲು ಬೇಕಾದ ತಾತ್ವಿಕ ಮತ್ತು ರಾಜಕೀಯ ಹತಾಶಗಳನ್ನು ನೀಡುತ್ತದೆ. ಇಲ್ಲದಿದ್ದರೆ ಒಳಕಲಹದಲ್ಲಿ ಅಸಲೀ ಅಪಾಯವನ್ನು ಮರೆಯುವಂತಾಗುತ್ತದೆ.

ಉಷಾ ಮೆಹ್ರ ಸಮಿತಿ ಮತ್ತು ಬಿಜೆಪಿಯ ಮೌನದ್ರೋಹ

ಅಸಲೀ ವಿಷಯವೇನೆಂದರೆ ಒಳಮೀಸಲಾತಿ ಜಾರಿಯಾಗಳು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿರುವುದು ಸಂಸತ್ತಿಗೆ ಮಾತ್ರ. ಏಕೆಂದರೆ ಈಗಾಗಲೇ ಅವಿಭಜಿತ ಆಂಧ್ರಪ್ರದೇಶವೂ ತನ್ನ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿದ್ದಾಗ ಸಂತೋಷ್ ಹೆಗಡೆ ನೇತೃತ್ವದ ಐದು ಜನರ ಸಾಂವಿಧಾನಿಕ ನ್ಯಾಯಪೀಠ ಅದನ್ನು ರದ್ದು ಮಾಡಿತ್ತು.  ಕಾರಣ ರಾಜ್ಯದ ವಿಧಾನಸಭೆಗಳಿಗೆ ಎಸ್ಸಿ ಮೀಸಲಾತಿಯನ್ನು ಬದಲಿಸುವ ಅಧಿಕಾರವಿಲ್ಲ. ನಮ್ಮ ಸಂವಿಧಾನದ 341 (2)ನೇ ಕಲಮಿನ ಪ್ರಕಾರ ಆ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಹೀಗಾಗಿ 2000ನೇ ಇಸವಿಯಲ್ಲಿ ಆಂಧ್ರ ವಿಧಾನ ಸಭೆಯು ಸರ್ವಸಮ್ಮತಿಯಿಂದ ಒಂದು ಗೊತ್ತುವಳಿಯನ್ನು ಅನುಮೋದಿಸಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತಂದು ಒಳಮೀಸಲಾತಿ ತರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸತ್ತಿಗೆ ಆಗ್ರಹಿಸಿತ್ತು. ಈ ಹಿಂದೆಯೂ ಇದೇ ಬಗೆಯ ಮನವಿಗಳು ಪಂಜಾಬ್ ಇನ್ನಿತರ ರಾಜ್ಯಗಳಿಂದಲೂ ಕೇಂದ್ರ ಸರ್ಕಾರಕ್ಕೆ ಬಂದಿತ್ತು.  ಆ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರವು  ಜಸ್ಟೀಸ್ ಉಷಾ ಮೆಹ್ರ ಸಮಿತಿಯನ್ನು ನೇಮಿಸಿತು. ಆ ಸಮಿತಿಯು ಈ ವಿಷಯದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ 2008ರಲ್ಲಿ ವರದಿ ನೀಡಿತು. ಉಷಾ ಮೆಹ್ರಾ ಸಮಿತಿಯು ಒಳಮೀಸಲಾತಿ ಅತ್ಯಗತ್ಯ ಎಂದು ಪ್ರತಿಪಾದಿಸಿತಲ್ಲದೆ ಅದನ್ನು ಜಾರಿ ಮಾಡಲು ಸಂವಿಧಾನಕ್ಕೆ ತಿದ್ದುಪಡಿ ತಂದು 341 (3) ನೇ ಕಲಮೊಂದನ್ನು ಸೇರಿಸಬೇಕು ಎಂದು ಶಿಫಾರಸ್ಸು ನೀಡಿದೆ.

ಸಂವಿಧಾನಕ್ಕೆ ತಿದ್ದುಪಡಿಯಾಗಬೇಕೆಂದರೆ ಲೋಕಸಭಯೆಲ್ಲಿ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಅನುಮೋದನೆಗೊಳ್ಳಬೇಕು. ಅಗತ್ಯವಿರುವ ಕಡೆ ದೇಶದ ಅರ್ಧಕ್ಕೂ ಹೆಚ್ಚು ವಿಧಾನಸಭೆಗಳೂ ಅದನ್ನು ಅನುಮೋದಿಸಬೇಕು. ಇಂದು ಬಿಜೆಪಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಅಗತ್ಯಕ್ಕಿಂತೆ ಹೆಚ್ಚು ಬಹುಮತವಿದೆ. ರಾಜ್ಯಸಭೆಯಲ್ಲಿ ಅದೇ ದೊಡ್ಡ ಪಕ್ಷ ಮಾತ್ರವಲ್ಲದೆ ಬೇಕಿರುವಷ್ಟು ಬಹುಮತವನ್ನು ರೂಢಿಸಿಕೊಳ್ಳಬಹುದಾದ ರಾಜ್ಯಬಲ ಮತ್ತು ಧನಬಲವಿರುವುದನ್ನು ಅದು ಈಗಾಗಲೇ ಸಾಬೀತುಪಡಿಸಿದೆ. ದೇಶದ 17 ರಾಜ್ಯಗಳಲ್ಲಿ ಎನ್‌ಡಿಎ ಸರ್ಕಾರವಿದೆ. ಹೀಗಾಗಿ ಸಂವಿಧಾನಕ್ಕೆ 341 (3) ಕಲಮು ಸೇರಿಸುವ ತಿದ್ದುಪಡಿಯನ್ನು ಮಾಡುವುದು ಬಿಜೆಪಿಗೆ ಅತ್ಯಂತ ಸುಲಭದ ಕೆಲಸ. ಆದರೆ ಅದು ಮೇಲ್ಜಾತಿಗಳಿಗೆ ಮೀಸಲಾತಿ ಒದಗಿಸುವ ತಿದ್ದುಪಡಿಯನ್ನು ಕ್ಷಣಾರ್ಧದಲ್ಲಿ ತರುತ್ತದೆಯೇ ವಿನಾ ಒಳಮೀಸಲಾತಿ ತಿದ್ದುಪಡಿಯನ್ನಲ್ಲ.

ಏಕೆಂದರೆ ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಮೂಲಾಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ಅದು ಅವರ ಮನುವಾದಿ ಹಿಂದೂರಾಷ್ಟ್ರದ ಪರಿಕಲ್ಪನೆಗೆ ತದ್ವಿರುದ್ಧವಾದ ತಾತ್ವಿಕ ಪ್ರಣಾಳಿಯಾಗಿದೆ. ಆದ್ದರಿಂದಲೇ ಅದು ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಇತರ ನಾಟಕಗಳನ್ನು ಆಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೂ ಸಹ ಒಳಮೀಸಲಾತಿ ವಿಷಯದಲ್ಲಿ ಅದೇ ಧೋರಣೆಯನ್ನು ವ್ಯಕ್ತಪಡಿಸುತ್ತಾ ಬಂದಿವೆ. ಇದು ವಾಸ್ತವ ಸಂದರ್ಭ, ಹೀಗಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲಾ ಶಕ್ತಿಗಳು ಈ ಕೆಳಗಿನ ಒತ್ತಾಯಗಳನ್ನು ಪರಿಗಣಿಸಬಹುದೆನಿಸುತ್ತದೆ.

ಅ) ರಾಜ್ಯ ಸರ್ಕಾರವು ಸದಾಶಿವ ಅಯೋಗದ ವರದಿಯನ್ನು ಈ ಕೂಡಲೇ ವಿಧಾನ ಸಭೆಯಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಮುಂದಾಗಬೇಕು ಹಾಗೂ ಸಂವಿಧಾನದ 341 (3)ನೇ ತಿದ್ದುಪಡಿಗೆ ಸರ್ವಸಮ್ಮತಿಯಿಂದ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರದ ಮೇಲೆ ಒತ್ತಡ ತರಬೇಕು.

ಆ) ಇಂದಿನ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಈ ವಿಷಯದಲ್ಲಿ ದೊಡ್ಡ ಪಾತ್ರವಿದೆ. ಹೀಗಾಗಿ ಆ ಪಕ್ಷವು ಒಳಮೀಸಲಾತಿಯ ಪರವಾಗಿ ಸ್ಪಷ್ಟ ನಿಲುವನ್ನು ತೆಗೆದುಕೊಂಡು ಸಂವಿಧಾನ ತಿದ್ದುಪಡಿ ಕ್ರಮಗಳಿಗೆ ಸಂಸತ್ತಿನಲ್ಲಿ ಮುಂದಾಗುವಂತೆ ಹಾಗೂ ಕಾಂಗ್ರೆಸ್ ಇನ್ನಿತರ ಪಕ್ಷಗಳು ಇದರ ಬಗ್ಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಗತಿಪರ ಶಕ್ತಿಗಳೆಲ್ಲಾ ಒಗ್ಗಟ್ಟಾಗಿ ಬಲವಾದ ಚಳವಳಿಯನ್ನು ರೂಪಿಸಬೇಕು.

ಇ) ಸದಾಶಿವ ಅಯೋಗದಲ್ಲಿರುವ ಕೆನಪದರ ನೀತಿಯ ಶಿಫಾರಸ್ಸನ್ನು ಕೈಬಿಡಬೇಕು.

ಉ) ಮೀಸಲಾತಿಯ ಮೇಲೆ ಹೇರಲಾಗಿರುವ  ಶೇ.50ರ ಮಿತಿಯನ್ನು ತೆಗೆದು ಹಾಕಲೂ ಸಹ ಸಂವಿಧಾನ ತಿದ್ದುಪಡಿ ತರಲು ಒತ್ತಾಯಿಸಬೇಕು.

ಊ) ಖಾಸಗೀಕರಣದಿಂದಾಗಿ ಮೀಸಲಾತಿಯ ಪ್ರಸ್ತುತತೆಯೇ ಇಲ್ಲವಾಗುತ್ತಿದ್ದು ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಡುವುದರ ಜೊತೆಗೆ ಖಾಸಗೀಕರಣವನ್ನು ನಿಲ್ಲಿಸುವ ಹೋರಾಟವನ್ನು ಒಗ್ಗಟ್ಟಿನಿಂದ ಕೈಗೆತ್ತುಕೊಳ್ಳಬೇಕು.

ಋ)ಈಗ ಹಾಲಿ ಎಸ್ಸಿ ಪಟ್ಟಿಯಲ್ಲಿರುವ ಸ್ಪೃಷ್ಯ ಸಮುದಾಯಗಳು ಅಸ್ಪೃಷ್ಯತೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ರೀತಿಯಲ್ಲೂ  ಹೆಚ್ಚೂ ಕಡಿಮೆ ಸಮಾನವಾಗಿ ಆರ್ಥಿಕವಾಗಿ ಮತ್ತು  ಸಾಮಾಜಿಕವಾಗಿ  ಹಿಂದುಳಿದಿರುವುದನ್ನು ಗುರುತಿಸಬೇಕು. ಮತ್ತು ಆ ಸಮುದಾಯಗಳ ಸರಿಯಾದ  ಪ್ರಾತಿನಿಧ್ಯಕ್ಕೂ ಒಟ್ಟು ಹೋರಾಟಕ್ಕೆ ಮುಂದಾಗಬೇಕು.

ಎ) ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶ ಮಾಡಲು ಮುಂದಾಗಿರುವ ಮನುವಾದಿಗಳ ವಿರುದ್ಧ ಹಾಗೂ ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುತ್ತಿರುವ ಕಾರ್ಪೊರೇಟ್ ಬಂಡವಾಳಿಗ ಶಕ್ತಿಗಳ ವಿರುದ್ಧ ದಮನಿತ ಸಮುದಾಯಗಳ ಒಗ್ಗಟ್ಟು ಮತ್ತು ಹೋರಾಟ ಕಿಂಚಿತ್ತೂ ಸಡಿಲವಾಗದಂತ ತಾತ್ವಿಕ ಮತ್ತು ರಾಜಕೀಯ ಎಚ್ಚರಗಳನ್ನು ಕಾಪಾಡಿಕೊಳ್ಳಬೇಕು.

-ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News