×
Ad

ಮಹಾರಾಷ್ಟ್ರದ ಮತ್ತೊಬ್ಬ ಸಚಿವನಿಗೆ ಕೊರೋನ ವೈರಸ್ ಸೋಂಕು

Update: 2020-06-12 14:49 IST

ಮುಂಬೈ, ಜೂ.12:ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ಹಿರಿಯ ನಾಯಕ ಧನಂಜಯ ಮುಂಢೆಗೆ ಶುಕ್ರವಾರ ಕೊರೋನ ವೈರಸ್ ಇರುವುದು ದೃಢಪಟ್ಟಿದೆ. ಧನಂಜಯ ಅವರು ಉದ್ಧವ್ ಠಾಕ್ರೆ ನೇತೃತ್ವದ ಸರಕಾರದಲ್ಲಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ ಮೂರನೇ ಸಚಿವರಾಗಿದ್ದಾರೆ.

ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚವಾಣ್ ಹಾಗೂ ವಸತಿ ಸಚಿವ ಜೀತೇಂದ್ರ ಆವಾಡ್‌ಗೆ ಈ ಹಿಂದೆ ಕೊರೋನ ಸೋಂಕು ತಗಲಿತ್ತು. ಅವಾಡ್ ಈಗಾಗಲೇ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಧನಂಜಯ್‌ಗೆ ಗಂಟಲು ಸೋಂಕು ತಗಲಿದ್ದ ಕಾರಣ ಕೊರೋನ ಇರುವ ಬಗ್ಗೆ ಸ್ವಲ್ಪ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಶುಕ್ರವಾರ ಬೆಳಗ್ಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರ ಖಾಸಗಿ ಕಾರ್ಯದರ್ಶಿ, ಅವರ ಮಾಧ್ಯಮ ಸಲಹೆಗಾರ ಹಾಗೂ ಅವರ ಕಚೇರಿಯ ಇತರ ಮೂವರು ಉದ್ಯೋಗಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ.ಆದರೆ, ಇವರೆಲ್ಲರಿಗೂ ರೋಗ ಲಕ್ಷಣ ಕಾಣಿಸಿರಲಿಲ್ಲ.

ಮಹಾರಾಷ್ಟ್ರದ ಮೂವರು ಸಚಿವರು ಸೋಂಕು ಪೀಡಿತರಾದ ಕಾರಣ ಸರಕಾರದ ಹಿರಿಯ ಸಚಿವರು ಮುಂದಿನ ಕೆಲವು ದಿನಗಳ ಮನೆಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಕೋವಿಡ್-19 ಪರೀಕ್ಷೆಗೆ ಒಳಗಾಗುವ ಒಂದು ಗಂಟೆ ಮೊದಲು ವಾರಕ್ಕೊಮ್ಮೆ ನಡೆಯುವ ಸಂಪುಟ ಸಭೆಯಲ್ಲಿ ಧನಂಜಯ ಭಾಗಿಯಾಗಿದ್ದರು. ಬಲ್ಲಾರ್ಡ್ ಪೀಯರ್‌ನಲ್ಲಿ ನಡೆದಿದ್ದ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಎನ್‌ಸಿಪಿಯ ಹಿರಿಯ ನಾಯಕರುಗಳಾದ ಸಂಸದೆ ಸುಪ್ರಿಯಾ ಸುಳೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಮಹಾರಾಷ್ಟ್ರ ಎನ್‌ಸಿಪಿ ಮುಖ್ಯಸ್ಥ ಹಾಗೂ ನೀರಾವರಿ ಸಚಿವ ಜಯಂತ್ ಪಾಟೀಲ್, ಮುಂಬೈ ಎನ್‌ಸಿಪಿಯ ಅಧ್ಯಕ್ಷ ನವಾಬ್ ಮಲಿಕ್ ಸಹಿತ ಹಲವು ನಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News