ಖಾಸಗಿ ಶಾಲೆಗಳ ಅಳಲುಗಳಿಗೂ ರಾಜ್ಯ ಸರಕಾರ ಕಿವಿಯಾಗಲಿ

Update: 2020-06-13 04:32 GMT

‘ಆಗಸ್ಟ್ ತಿಂಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭ’ ಎಂಬ ಸೂಚನೆಯನ್ನು ಸರಕಾರ ಈಗಾಗಲೇ ನೀಡಿದೆಯಾದರೂ, ಈ ಬಗ್ಗೆ ಸ್ಪಷ್ಟವಾದ ಆದೇಶಗಳನ್ನು, ಮಾರ್ಗ ಸೂಚಿಗಳನ್ನು ಇನ್ನೂ ನೀಡಿಲ್ಲ. ಬಹುಶಃ ಆನಂತರದ ಪರಿಣಾಮಗಳನ್ನು ಮೈಮೇಲೆ ಎಳೆದುಕೊಳ್ಳಲು ಸರಕಾರ ಸಿದ್ಧವಿಲ್ಲದ ಕಾರಣದಿಂದಾಗಿ ಆಯಾ ಶಾಲಾ ಆಡಳಿತ ಮಂಡಳಿಯ ತಲೆಗೇ ಹೊಣೆಗಾರಿಕೆಗಳನ್ನು ಕಟ್ಟುತ್ತಿದೆ. ‘ಶಾಲಾ ಪೋಷಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುವುದು ಕಡ್ಡಾಯ’ ಎಂದು ಸರಕಾರ ಹೇಳುತ್ತಿದೆ. ಇದೇ ಸಂದರ್ಭದಲ್ಲಿ, ರಾಜ್ಯಾದ್ಯಂತ ಪೋಷಕರಲ್ಲಿ ಭಿನ್ನಾಭಿಪ್ರಾಯಗಳು ಬಂದಲ್ಲಿ, ಸಂಸ್ಥೆಗಳು ಯಾವ ನಿಲುವಿಗೆ ಬರಬೇಕು ಎನ್ನುವುದರ ಕುರಿತಂತೆಯೂ ಸರಕಾರದ ಬಳಿ ಸ್ಪಷ್ಟತೆ ಇಲ್ಲ. ‘ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬಂತಾಗಿದೆ ಸರಕಾರದ ಸ್ಥಿತಿ. ಶಾಲೆಯೇನೋ ಆರಂಭವಾಗಬೇಕು, ಆದರೆ ಆನಂತರದ ಯಾವುದೇ ಪರಿಣಾಮಗಳನ್ನು ನೇರವಾಗಿ ಎದುರುಗೊಳ್ಳಲು ಅದು ಸಿದ್ಧವಿಲ್ಲ. ಈ ಕಾರಣಕ್ಕಾಗಿಯೇ ಶಾಲಾರಂಭಗಳ ಕುರಿತಂತೆ ಸರಕಾರ ಗೊಂದಲಗಳ, ವಿರೋಧಾಭಾಸಗಳ ಹೇಳಿಕೆಗಳನ್ನು ಸರಕಾರ ನೀಡುತ್ತಿದೆ.

ಇದೇ ಸಂದರ್ಭದಲ್ಲಿ, ಆನ್‌ಲೈನ್ ತರಗತಿಗಳ ಕುರಿತಂತೆಯೂ ಸರಕಾರದ ಬಳಿ ಸ್ಪಷ್ಟತೆಯಿಲ್ಲ. ಸಚಿವ ಜೆ. ಸಿ. ಮಾಧು ಸ್ವಾಮಿ ಅವರು ‘ಎಲ್‌ಕೆಜಿ, ಯುಕೆಜಿ ಸೇರಿದಂತೆ ಏಳನೇ ತರಗತಿಯವರೆಗೆ ಆನ್‌ಲೈನ್ ಕ್ಲಾಸ್ ನಡೆಸದಿರಲು ರಾಜ್ಯ ಸಂಪುಟ ಸಭೆ ನಿರ್ಧರಿಸಿದೆ’ ಎಂದರೆ, ಇತ್ತ ಸಚಿವ ಸುರೇಶ್ ಕುಮಾರ್ ಅವರು ‘ಎಲ್‌ಕೆಜಿ, ಯುಕೆಜಿ ಸೇರಿದಂತೆ ಐದನೇ ತರಗತಿಯವರೆಗೆ ಮಾತ್ರ ಆನ್‌ಲೈನ್ ಕ್ಲಾಸ್ ನಡೆಸದಿರಲು ನಿರ್ಧರಿಸಲಾಗಿದೆ’ ಎಂದಿದ್ದಾರೆ. ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲಕರ ಬಳಿ ಸ್ಮಾರ್ಟ್ ಫೋನ್‌ಗಳು ಇಲ್ಲ ಎನ್ನುವುದು ಗೊತ್ತಿದ್ದರೂ ಸರಕಾರ ಆನ್‌ಲೈನ್ ತರಗತಿಗಳ ಕುರಿತಂತೆ ಆತುರ ತೋರಿಸುತ್ತಿದೆ. ಯಾರೆಲ್ಲ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಸೌಲಭ್ಯಗಳನ್ನು ಹೊಂದಿಲ್ಲವೋ ಅವರಿಗೆ ಸರಕಾರ ಯಾವ ಪರ್ಯಾಯ ವ್ಯವಸ್ಥೆಯನ್ನು ಏರ್ಪಡಿಸಿದೆ? ಎನ್ನುವುದರ ಬಗ್ಗೆ ಯಾವುದೇ ಮಾಹಿತಿಗಳನ್ನು ಸರಕಾರ ನೀಡಿಲ್ಲ. ಈ ಪರ್ಯಾಯ ವ್ಯವಸ್ಥೆಯನ್ನು ಒದಗಿಸದೇ ಇದ್ದರೆ, ವಿದ್ಯಾರ್ಥಿಗಳ ನಡುವೆ ವ್ಯಾಪಕ ತಾರತಮ್ಯ ನಡೆಯುವುದಿಲ್ಲವೇ? ಹಲವು ಪ್ರತಿಭಾವಂತ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಖಿನ್ನತೆಯನ್ನು ಅನುಭವಿಸಬಹುದು. ಸಾಮಾಜಿಕವಾಗಿ ಈ ತಾರತಮ್ಯ ಬೀರುವ ಪರಿಣಾಮಗಳ ಬಗ್ಗೆ ಸರಕಾರ ಇನ್ನಷ್ಟು ಅಧ್ಯಯನ ನಡೆಸಬೇಕು. ಅಲ್ಲಿಯವರೆಗೆ ಎಸೆಸೆಲ್ಸಿವರೆಗೂ ಸರಕಾರ ಆನ್‌ಲೈನ್ ಶಿಕ್ಷಣಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಆತುರದ ನಿರ್ಧಾರವನ್ನು ತೆಗೆದುಕೊಂಡರೆ, ಈ ರಾಜ್ಯದ ಬಹುದೊಡ್ಡ ಸಂಖ್ಯೆಯ ವಿದ್ಯಾರ್ಥಿವರ್ಗ ಶಿಕ್ಷಣದಿಂದ ದೂರ ಉಳಿಯಬೇಕಾಗುತ್ತದೆ.

ಇದೇ ಸಂದರ್ಭದಲ್ಲಿ ಸರಕಾರದ ಗೊಂದಲಗಳ ನಿರ್ಧಾರಗಳಿಂದ ಅಡಕತ್ತರಿಯಲ್ಲಿ ಸಿಲುಕಿರುವುದು ಖಾಸಗಿ ಶಾಲೆಗಳು. ಈ ಖಾಸಗಿ ಶಾಲೆಗಳು ಎಂದಾಕ್ಷಣ, ಅವುಗಳೆಲ್ಲ ಲಾಭದ ದೃಷ್ಟಿಯಿಂದಲೇ ಸ್ಥಾಪನೆಯಾದವುಗಳು ಎನ್ನುವ ತಪ್ಪುಕಲ್ಪನೆಗಳಿವೆ. ಈ ರಾಜ್ಯದಲ್ಲಿ ಶಿಕ್ಷಣವನ್ನು ದಂಧೆಯಾಗಿಸಿಕೊಂಡ ಖಾಸಗಿ ಸಂಸ್ಥೆಗಳು ಬಹಳಷ್ಟಿವೆ. ಹಾಗೆಂದು ಎಲ್ಲ ಖಾಸಗಿ ಶಾಲೆಗಳು ಹಣ ಮಾಡುವ ಉದ್ದೇಶದಿಂದಲೇ ಸ್ಥಾಪನೆಯಾದವುಗಳು ಎಂದು ಸಾಮಾನ್ಯೀಕರಿಸುವುದು ತಪ್ಪು. ರಾಜ್ಯವೆಂದಲ್ಲ, ದೇಶದಲ್ಲಿ ಸರಕಾರ ಎಚ್ಚೆತ್ತುಕೊಳ್ಳುವ ಮೊದಲೇ ಖಾಸಗಿ ಶಾಲೆಗಳು ಶಿಕ್ಷಣ ಕ್ರಾಂತಿಯನ್ನು ಮಾಡಿದ್ದವು. ಕ್ರೈಸ್ತ ಸಂಸ್ಥೆಗಳು ಇಂತಹ ಕ್ರಾಂತಿಗೆ ಬುನಾದಿ ಹಾಕಿದ್ದರೆ, ಬೇರೆ ಬೇರೆ ಖಾಸಗಿ ಸಂಘಟನೆಗಳು ಈ ಶಿಕ್ಷಣವನ್ನು ಸೇವೆಯ ರೂಪದಲ್ಲಿ ಹರಡುವುದಕ್ಕೆ ಇದನ್ನು ಮಾದರಿಯಾಗಿಸಿಕೊಂಡವು. ಇಂದು ಬಡವರಿಗೆ, ಶ್ರೀಸಾಮಾನ್ಯರಿಗೆ ಉತ್ತಮ ಶಿಕ್ಷಣ ತಲುಪಿಸುವಲ್ಲಿ ಖಾಸಗಿ ಶಾಲೆಗಳ ಕೊಡುಗೆ ಬಹುದೊಡ್ಡದು. ಸರಕಾರಿ ಶಾಲೆಗಳು ಹಂತಹಂತವಾಗಿ ಮುಚ್ಚುತ್ತಿರುವ ಈ ಹೊತ್ತಿನಲ್ಲಿ, ಆ ಖಾಲಿ ಜಾಗವನ್ನು ಈ ಖಾಸಗಿ ಸಂಸ್ಥೆಗಳು ಯಶಸ್ವಿಯಾಗಿ ತುಂಬುತ್ತಿವೆ. ಲಾಭವನ್ನೇ ಗುರಿಯಾಗಿಸಿಕೊಳ್ಳದೆ, ಪಾಲಕರಿಗೆ ದುಬಾರಿಯೆನಿಸದಂತಹ ಶುಲ್ಕಗಳನ್ನು ವಿಧಿಸಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿವೆ. ಸರಕಾರದ ಗೊಂದಲ ಸೃಷ್ಟಿಸುವ ಹೇಳಿಕೆಗಳ ನೇರ ಬಲಿಪಶು ಇಂತಹ ಶಾಲೆಗಳೇ ಆಗಿವೆ. ಪಂಚತಾರಾ ಮಟ್ಟದ ಖಾಸಗಿ ಶಾಲೆಗಳನ್ನು ಹೊರಗಿಟ್ಟು, ಸರಕಾರ ಈ ಮಧ್ಯಮಗಾತ್ರದ ಖಾಸಗಿ ಶಿಕ್ಷಣ ಸಂಸ್ಥೆಗಳ ಅಳಲಿಗೆ ತಕ್ಷಣ ಕಿವಿಯಾಗಲೇ ಬೇಕಾಗಿದೆ.

ಇಂದು ಸರಕಾರಕ್ಕೆ ಎರಡು ಆಯ್ಕೆಗಳಿವೆ. ಮೊದಲನೆಯದಾಗಿ, ಶೈಕ್ಷಣಿಕ ಚಟುವಟಿಕೆಗಳ ಆರಂಭದ ಕುರಿತಂತೆ ಎಲ್ಲ ಶಾಲೆಗಳಿಗೂ ಸ್ಪಷ್ಟ ಆದೇಶವನ್ನು ನೀಡುವುದು. ಗೊಂದಲಗಳನ್ನು ಬಿತ್ತಿ, ‘ಶಾಲೆ ಆರಂಭಿಸಬೇಕೋ, ಬೇಡವೋ’ ಎನ್ನುವ ದ್ವಂದ್ವದಲ್ಲಿ ಶಾಲಾ ಸಂಘಟಕರನ್ನು ಕೆಡವದೆ, ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ ವರ್ತಿಸುವುದು. ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಆರಂಭಿಸುವುದಾದರೂ, ಆ ಕುರಿತಂತೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಸರಕಾರ ಸ್ವತಃ ಹೊಂದಿರಬೇಕು. ಎರಡನೆಯದು ಶಾಲೆಗಳನ್ನು ಈ ವರ್ಷ ಆರಂಭಿಸುವುದೇ ಬೇಡವೆಂದಾದಲ್ಲಿ, ಅತಂತ್ರವಾಗುವ ಈ ಜನಪರ ಉದ್ದೇಶಗಳುಳ್ಳ ಖಾಸಗಿ ಸಂಸ್ಥೆಗಳ ಗತಿಯೇನು? ಎನ್ನುವ ಪ್ರಶ್ನೆಗೂ ಸರಕಾರ ಉತ್ತರ ಹುಡುಕಬೇಕು. ಒಂದು ವೇಳೆ ಸರಕಾರ ಇಂತಹದೊಂದು ನಿರ್ಧಾರಕ್ಕೆ ಬಂದರೆ, ಹಣದ ತಳಹದಿಯ ಮೇಲೆ ನಿಂತ ಶ್ರೀಮಂತ ಸಂಸ್ಥೆಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳನ್ನು ನೆಚ್ಚಿಕೊಂಡ ಶಾಲೆಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ, ಶಾಲಾ ಸಿಬ್ಬಂದಿಗೆ ಸಂಸ್ಥೆಗಳು ಯಾವ ಮೂಲದಿಂದ ವೇತನವನ್ನು ನೀಡಬೇಕು? ಎನ್ನುವುದು. ಸರಕಾರದ ಅನುದಾನಗಳಿಲ್ಲದ ಈ ಶಾಲೆಗಳು ಒಂದು ವರ್ಷ ಮುಚ್ಚಲ್ಪಟ್ಟರೆ, ಅಲ್ಲಿರುವ ಬಹುತೇಕ ಶಿಕ್ಷಕರು ಮತ್ತು ಇನ್ನಿತರ ಸಿಬ್ಬಂದಿ ಬೀದಿಗೆ ಬೀಳಬೇಕಾಗುತ್ತದೆ. ಇಡೀ ರಾಜ್ಯದಲ್ಲಿ ಸಾವಿರಾರು ಸಿಬ್ಬಂದಿಯ ಕುಟುಂಬ ಉದ್ಯೋಗವಿಲ್ಲದೆ ಕಂಗಾಲಾಗಬೇಕಾಗುತ್ತದೆ.

ಸರಕಾರ ಕನಿಷ್ಠ ಸಿಬ್ಬಂದಿಯ ಅರ್ಧ ವೇತನವನ್ನಾದರೂ ನೀಡುವ ಭರವಸೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದರೆ, ಖಾಸಗಿ ಶಾಲೆಗಳು ಒಂದು ವರ್ಷದ ಆರ್ಥಿಕ ಹೊರೆಯಿಂದ ಪಾರಾಗಬಹುದು. ಇಲ್ಲವಾದರೆ, ಹಲವು ಶಾಲೆಗಳು ಶಾಶ್ವತವಾಗಿ ಮುಚ್ಚುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಅಥವಾ ಶಿಕ್ಷಕರು, ಸಿಬ್ಬಂದಿ ಒಂದು ವರ್ಷದ ವೇತನ ತ್ಯಾಗಕ್ಕೆ ಸಿದ್ಧರಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಿಬ್ಬಂದಿ ಸಮಸ್ಯೆಯೂ ಈ ನಾಡಿನ ಸಮಸ್ಯೆಯೇ ಆಗಿರುವುದರಿಂದ ಅವರ ನೋವು, ಅಳಲಿಗೂ ಸರಕಾರ ಕಿವಿಯಾಗಬೇಕಾಗಿದೆ. ಒಟ್ಟಿನಲ್ಲಿ ಸರಕಾರ ಪದೇ ಪದೇ ಗೊಂದಲಗಳ ಹೇಳಿಕೆಗಳನ್ನು ನೀಡಿ ಪೋಷಕರು, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳನ್ನು ಅಡಕತ್ತರಿಗೆ ಸಿಕ್ಕಿಸದೇ ತಕ್ಷಣವೇ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇವೆರಡನ್ನು ಬೇರೆ ಬೇರೆಯಾಗಿಟ್ಟು ನೋಡುವುದಕ್ಕೆ ಸಾಧ್ಯವಿಲ್ಲ. ಒಂದು ದೇಹಕ್ಕೆ ಸಂಬಂಧಿಸಿದ್ದಾದರೆ, ಇನ್ನೊಂದು ಮನಸ್ಸಿಗೆ ಸಂಬಂಧಿಸಿದ್ದು. ನಾಡಿನ ಅಭಿವೃದ್ಧಿಯಲ್ಲಿ ಇವೆರಡರ ಪಾತ್ರವೂ ಬಹುದೊಡ್ಡದು. ಈ ನಿಟ್ಟಿನಲ್ಲಿ, ಶಿಕ್ಷಣವನ್ನು ಸೇವೆಯ ರೂಪದಲ್ಲಿ ಹರಡಲು ಸರಕಾರಿ ಶಾಲೆಗಳ ಜೊತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿರುವ ಖಾಸಗಿ ಶಾಲೆಗಳ ಬಗ್ಗೆಯೂ ನಮ್ಮ ಶಿಕ್ಷಣ ಸಚಿವರು ಮೃದು ಧೋರಣೆ ತಳೆಯುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News