“ಜನಾಂಗೀಯ ತಾರತಮ್ಯ ಮರೆಮಾಚಲು ನಿಮ್ಮಿಂದ ಭಾರತೀಯ ಮೂಲದ ಬಳಕೆ”
ಲಂಡನ್, ಜೂ. 13: ಬ್ರಿಟನ್‌ನಲ್ಲಿ ಬೆಳೆಯುತ್ತಿದ್ದಾಗ ತಾನು ಅನುಭವಿಸಿದ್ದ ಜನಾಂಗೀಯ ನಿಂದನೆಯ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿರುವ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, “ಪ್ರತಿಪಕ್ಷ ಲೇಬರ್ ಪಕ್ಷದ ಸಂಸದರು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಬ್ರಿಟನ್‌ನಲ್ಲಿ ಕೆಲವು ಸಮುದಾಯಗಳು ಎದುರಿಸುತ್ತಿರುವ ‘ಅತ್ಯಂತ ನೈಜ ಜನಾಂಗೀಯ ತಾರತಮ್ಯ’ವನ್ನು ಮರೆಮಾಚಲು ಪಟೇಲ್ ತನ್ನ ಭಾರತೀಯ ಮೂಲವನ್ನು ಬಳಸುತ್ತಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸಿದೆ.
ಬ್ರಿಟನ್‌ನಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯದ ಸದಸ್ಯೆಯಾಗಿ ಬೆಳೆಯುತ್ತಿದ್ದಾಗ ತಾನು ಅನುಭವಿಸಿದ್ದ ಜನಾಂಗೀಯ ನಿಂದನೆಗಳ ಬಗ್ಗೆ ಭಾರತ ಮೂಲದ ಸಂಪುಟ ದರ್ಜೆಯ ಸಚಿವೆ ಪ್ರೀತಿ ಪಟೇಲ್ ಈ ವಾರದ ಆರಂಭದಲ್ಲಿ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಹೇಳಿಕೆಯೊಂದನ್ನು ನೀಡಿದ್ದರು.
ಭಾರತ ಮೂಲದ ಸಂಸದರಾದ ವೀರೇಂದ್ರ ಶರ್ಮ, ತಾನ್ ದೇಸಿ, ಪ್ರೀತ್ ಕೌರ್ ಗಿಲ್, ವಲೇರೀ ವಾಝ್, ಸೀಮಾ ಮಲ್ಹೋತ್ರಾ ಮತ್ತು ನಾದಿಯಾ ವಿಟಮ್ ಸೇರಿದಂತೆ ಲೇಬರ್ ಪಕ್ಷದ 12 ಜನಾಂಗೀಯ ಅಲ್ಪಸಂಖ್ಯಾತ ಸಂಸದರ ಗುಂಪೊಂದು ಗುರುವಾರ ಪ್ರೀತಿ ಪಟೇಲ್‌ಗೆ ಪತ್ರವೊಂದನ್ನು ಬರೆದು, ‘‘ನೀವು ಬಿಳಿಯೇತರ ವ್ಯಕ್ತಿ ಆಗಿರುವ ಮಾತ್ರಕ್ಕೆ ಎಲ್ಲ ವಿಧಗಳ ಜನಾಂಗೀಯ ನಿಂದನೆಗಳ ಬಗ್ಗೆ ಮಾತನಾಡುವ ಅಧಿಕಾರ ನಿಮಗೆ ತನ್ನಿಂತಾನೆ ಸಿಗುವುದಿಲ್ಲ’’ ಎಂದು ಹೇಳಿದೆ.
‘‘ಬ್ರಿಟನ್‌ನಾದ್ಯಂತ ಕರಿಯ ವ್ಯಕ್ತಿಗಳು ಮತ್ತು ಸಮುದಾಯಗಳು ಎದುರಿಸುತ್ತಿರುವ ಅತ್ಯಂತ ನೈಜ ಜನಾಂಗೀಯ ತಾರತಮ್ಯವನ್ನು ಮರೆಮಾಚಲು ನೀವು ನಿಮ್ಮ ಮೂಲ ಮತ್ತು ಅನುಭವಗಳನ್ನು ಬಳಸಿಕೊಂಡಿದ್ದೀರಿ. ಇದರ ಬಗ್ಗೆ ನಮ್ಮ ನಿರಾಶೆಯನ್ನು ವ್ಯಕ್ತಪಡಿಸಲು ಲೇಬರ್ ಪಕ್ಷದ ಕಪ್ಪು ಏಶ್ಯನ್ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಸಂಸದರಾಗಿ ನಾವು ನಿಮಗೆ ಪತ್ರ ಬರೆಯುತ್ತಿದ್ದೇವೆ’’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಈ ಪತ್ರಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರೀತಿ ಪಟೇಲ್, ‘‘ಬ್ರಿಟನ್‌ನ ಲೇಬರ್ ಪಕ್ಷದ ಸಂಸದರು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಜನಾಂಗೀಯ ಅಲ್ಪಸಂಖ್ಯಾತರು ಹೇಗೆ ವರ್ತಿಸಬೇಕು ಎಂಬ ತಮ್ಮ ನಿಲುವನ್ನು ಒಪ್ಪಿಕೊಳ್ಳದವರು ಅವರ (ಜನಾಂಗೀಯ ಅಲ್ಪಸಂಖ್ಯಾತರ) ಏಳಿಗೆಗಾಗಿ ಏನನ್ನೂ ಮಾಡಿಲ್ಲ ಎಂಬುದಾಗಿ ಲೇಬರ್ ಪಕ್ಷದ ಸಂಸದರು ಈಗಲೂ ಭಾವಿಸುತ್ತಾರೆ. ಅವರು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.
ಹೆತ್ತವರು ಗುಜರಾತ್ ಮೂಲದವರು
ಪ್ರೀತಿ ಪಟೇಲ್‌ರ ಹೆತ್ತವರು ಗುಜರಾತ್ ಮೂಲದವರು. ಅವರು ಆಫ್ರಿಕ ಖಂಡದ ಉಗಾಂಡದಲ್ಲಿದ್ದಾಗ ಪ್ರೀತಿ ಪಟೇಲ್ ಜನಿಸಿದರು. ಬಳಿಕ 1970ರ ದಶಕದ ಆದಿ ಭಾಗದಲ್ಲಿ ಉಗಾಂಡವನ್ನು ಸರ್ವಾಧಿಕಾರಿ ಇದಿ ಅಮೀನ್ ಆಳಿದಾಗ ಏಶ್ಯನ್ನರನ್ನು ದೇಶದಿಂದ ಹೊರಗಟ್ಟಿದನು. ಆಗ ಪ್ರೀತಿ ಪಟೇಲ್ ಹೆತ್ತವರು ಬ್ರಿಟನ್‌ಗೆ ಪಲಾಯನಗೈದರು.