Breaking News: ಪ್ರಸಿದ್ಧ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

Update: 2020-06-14 15:21 GMT

ಹೊಸದಿಲ್ಲಿ: ಬಾಲಿವುಡ್ ನ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಪತ್ತೆಯಾಗಿದ್ದಾರೆ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ‘ಕೈ ಪೊ ಚೆ’  ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಗೈದ ಅವರು ಪಿಕೆ, ಡಿಟೆಕ್ಟಿವ್ ಬ್ಯೋಮ್ಕೇಶ್ ಬಕ್ಷಿ, ಎಂ ಎಸ್ ಧೋನಿ, ಕೇದರನಾಥ್ ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯಲ್ಲಿ ‘ಪವಿತ್ರ ರಿಶ್ತಾ’ ಧಾರವಾಹಿ ಮೂಲಕ ಭಾರೀ ಯಶಸ್ಸು ಗಳಿಸಿದ್ದ ಸುಶಾಂತ್ ಸಿಂಗ್ ನಂತರ ಬಾಲಿವುಡ್ ಪ್ರವೇಶಿಸಿದ್ದರು. ‘ಚಿಚ್ಚೋರೆ’ ಅವರು ನಟಿಸಿದ ಕೊನೆಯ ಚಿತ್ರ. ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಜಪೂತ್ ರ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಆತ್ಮಹತ್ಯೆಗೆ ಶರಣಾಗಿದ್ದರು.

2013ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆಗೈದ ಸುಶಾಂತ್ ಸಿಂಗ್ ಕೈ ಪೊ ಚೆ, ಶುದ್ಧ್ ದೇಸಿ ರೊಮ್ಯಾನ್ಸ್, ಪಿಕೆ, ಡಿಟೆಕ್ಟಿವ್ ಬ್ಯೋಮ್ಕೇಶ್ ಬಕ್ಷಿ, ಎಂ ಎಸ್ ಧೋನಿ, ರಾಬ್ತಾ, ವೆಲ್ಕಮ್ ಟು ನ್ಯೂಯಾರ್ಕ್, ಕೇದರನಾಥ್, ಸೋಂಚಿರಿಯಾ, ಚಿಚ್ಚೋರಿ, ಡ್ರೈವ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಬಿಹಾರದ ಪೂರ್ನಿಯಾದಲ್ಲಿ ಜನಿಸಿದ್ದ ಸುಷಾಂತ್ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿದ್ದರು. ಆದರೆ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸುಷಾಂತ್ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ‘ಏಕ್ತಾ ಕಪೂರ್’ ಅವರ ಟಿವಿ ಕಾರ್ಯಕ್ರಮ ‘ಕಿಸ್ ದೇಶ್ ಮೆ ಮೇರೆ ದಿಲ್’ನಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಬಳಿಕ ಪವಿತ್ರ ರಿಶ್ತಾ ಧಾರಾವಾಹಿಯ ನಾಯಕನ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತು.

ಝಲಕ್ ದಿಖ್ಲಾ ಜಾ ಟಿವಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದ ಸುಷಾಂತ್, 2013ರಲ್ಲಿ ಅಭಿಷೇಕ್ ಕಪೂರ್ ನಿರ್ದೇಶನದ , ಚೇತನ್ ಭಗತ್ ಕೃತಿಯಾಧಾರಿತ ‘ಕೈ ಪೋ ಚೆ ’ ಸಿನೆಮದ ಮೂಲಕ ಸಿನೆಮ ಕ್ಷೇತ್ರ ಪ್ರವೇಶಿಸಿದರು. ‘ಎಂಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿ’ ಸಿನೆಮ ಅವರನ್ನು ಜನಪ್ರಿಯ ನಾಯಕರ ಸಾಲಿಗೆ ಸೇರಿಸಿತು. 2014ರಲ್ಲಿ ತೆರೆಕಂಡ ಆಮೀರ್‌ಖಾನ್ ಅವರ ಹಿಟ್ ಸಿನೆಮ ‘ಪಿಕೆ’ಯಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದರು. 2018ರಲ್ಲಿ ಕೇದಾರನಾಥ ಸಿನೆಮದಲ್ಲಿ ನಟಿಸಿದ್ದು ಇದೂ ಕೂಡಾ ಪ್ರೇಕ್ಷಕರ ಮನ ಗೆಲ್ಲಲು ಸಫಲವಾಗಿದೆ. ಸಾರಾ ಆಲಿ ಖಾನ್ ಅವರ ಚೊಚ್ಚಲ ಸಿನೆಮ ಇದಾಗಿದೆ.

2019ರಲ್ಲಿ ಚಿಚೋರೆ, ಸೋನ್‌ಚಿರಿಯಾ ಮತ್ತು ಡ್ರೈವ್ ಸಿನೆಮದಲ್ಲಿ ಅಂತಿಮ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸೈಫ್ ಆಲಿಖಾನ್ ಸಹನಟನಾಗಿರುವ ಹೊಸ ಸಿನೆಮ ದಿಲ್ ಬೇಚಾರ ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಸಿನೆಮದ ಬಿಡುಗಡೆ ಮುಂದೂಡಲ್ಪಟ್ಟಿದೆ. ಬಾಲಿವುಡ್‌ನ ಭವಿಷ್ಯದ ಸ್ಟಾರ್ ನಟ ಎಂದೇ ಬಿಂಬಿಸಲ್ಪಟ್ಟಿದ್ದ ಸುಷಾಂತ್ ಸಿಂಗ್ , ಅಲ್ಪಾವಧಿಯಲ್ಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.

ಸಂತಾಪ: ಓರ್ವ ಪ್ರತಿಭಾವಂತ ಯುವ ನಟ ಬಹುಬೇಗ ಕಣ್ಮರೆಯಾಗಿದ್ದಾರೆ. ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಿಂಚಿ ಮನರಂಜನೆಯ ಜಗತ್ತಿನಲ್ಲಿ ಅವರು ಏರಿದ ಎತ್ತರ ಹಲವು ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಪ್ರಧಾನಿ ಮೋದಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಅಕ್ಷಯ್ ಕುಮಾರ್, ಅಜಯ್ ದೇವಗನ್, ನವಾಝುದ್ದೀನ್ ಸಿದ್ಧಿಕಿ, ಅಭಿಷೇಕ್ ಬಚ್ಚನ್, ರಿತೇಶ್ ದೇಶ್‌ಮುಖ್ ಮುಂತಾದ ನಟರು ಸಹನಟನ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News