ಕೊರೋನಗಿಂತಲೂ ಅಪಾಯಕಾರಿ ಡೆಂಗಿ!

Update: 2020-06-14 09:58 GMT

ಮಂಗಳೂರು, ಜೂ.13: ಕೊರೋನ ವೈರಸ್ ಸೋಂಕಿನ ಹಾವಳಿಯ ನಡುವೆಯೇ ಇದೀಗ ದ.ಕ. ಜಿಲ್ಲೆಯನ್ನು ಡೆಂಗಿ ಅಪಾಯಕಾರಿಯಾಗಿ ಕಾಡುವ ಭೀತಿ ಎದುರಾಗಿದೆ. ವೈದ್ಯರೇ ಹೇಳುವಂತೆ ಕೊರೋನಗಿಂತಲೂ ಅಪಾಯಕಾರಿಯಾಗಿರುವ ಡೆಂಗಿ ಬಗ್ಗೆ ಎಚ್ಚರ ತಪ್ಪಿದಲ್ಲಿ ಜಿಲ್ಲೆಯಲ್ಲಿ ಮಾರಣಾಂತಿಕವಾಗಿ ಕಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಅದಕ್ಕೆ ಕಾರಣ, ಲಾಕ್‌ಡೌನ್ ಕಡು ಬೇಸಿಗೆಯ ಎರಡು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಡೆಂಗಿ ಪ್ರಕರಣಗಳು ದಾಖಲಾಗಿರುವುದು. ಸಾಮಾನ್ಯವಾಗಿ ಮಳೆ ಬಿದ್ದ ಬಳಿಕ ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟಿಕೊಳ್ಳುವ ಈಡಿಸ್ ಸೊಳ್ಳೆ ಯಿಂದ ಡೆಂಗಿ ಜ್ವರ ಬಾಧಿಸಲಾರಂಭಿಸುತ್ತದೆ. ಕಳೆದ ವರ್ಷ ಡೆಂಗಿ ಹಾವಳಿ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಐದು ಮಂದಿ ಜಿಲ್ಲೆಯಲ್ಲಿ ಡೆಂಗಿನಿಂದ ಮೃತಪಟ್ಟಿದ್ದರೆ, 20ಕ್ಕೂ ಅಧಿಕ ಮಂದಿ ಶಂಕಿತ ಡೆಂಗಿಗೆ ಬಲಿಯಾಗಿದ್ದರು. ಕೊರೋನದಿಂದ ಈಗಾಗಲೇ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಈಗಾಗಲೇ ಅಲ್ಲಿ ಕಾಣಿಸಿಕೊಳ್ಳುತ್ತಿರುವ ಡೆಂಗಿ ಆತಂಕವೂ ಜಿಲ್ಲೆಯನ್ನು ಕಾಡುತ್ತಿದೆ. ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 89 ಅಧಿಕೃತ ಡೆಂಗಿ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 368 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಹೆಚ್ಚಾಗಿ ಕಾಡುವ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಗಳು ಈ ಬಾರಿ ಜನವರಿಯಿಂದಲೇ ಕಾಣಿಸಿಕೊಂಡಿದೆ. ಪುತ್ತೂರು, ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಮಂಗಳೂರು ವ್ಯಾಪ್ತಿಯ ಶಿರ್ತಾಡಿ, ಬಜ್ಪೆ, ಜಪ್ಪು ಕುಡುಪ್ಪಾಡಿಯಿಂದಲೂ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗ ಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ. ಪುತ್ತೂರಿನ ಬೆಟ್ಟಂಪಾಡಿ ಹಾಗೂ ಬೆಳ್ತಂಗಡಿಯ ನೆರಿಯದಲ್ಲಿ ಹಲವಾರು ಡೆಂಗಿ ಪ್ರಕರಣಗಳು ದಾಖಲಾಗಿದು, ಸುಳ್ಯ, ಪುತ್ತೂರು, ಬಂಟ್ವಾಳದ ಪುಣಚ, ಕನ್ಯಾನದಲ್ಲೂ ಕೆಲ ಪ್ರಕರಣಗಳು ದಾಖಲಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ತೋಟಗಳಿಗೆ ನೀರು ಹಾಯಿಸಲು ಸ್ಪ್ರಿಂಕ್ಲರ್ ಬಳಕೆ ಮಾಡುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ಕಾರಣ ಬೇಸಿಗೆಯಲ್ಲೇ ಡೆಂಗಿ ಹಾವಳಿ ಕಾಡಲು ಕಾರಣವೆನ್ನಲಾಗುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಜನಸಾಮಾನ್ಯ

ಖುದ್ದು ಜಾಗರೂಕತೆ ವಹಿಸುವುದು ಅತೀ ಅಗತ್ಯವಾಗಿದೆ. ಕಳೆದ ವರ್ಷ ಡೆಂಗಿ ಕುರಿತು ಸಾಕಷ್ಟು ಜಾಗೃತಿ ಅಭಿಯಾನದ ಮೂಲಕ ಜಿಲ್ಲಾಡಳಿತ ತುರ್ತು ಕಾರ್ಯಾಚರಣೆ ನಡೆಸಿತ್ತು. ಈ ಬಾರಿ ಅವಧಿಗೆ ಮುಂಚಿತವಾಗಿಯೇ ಆರೋಗ್ಯ ಇಲಾಮಲೇರಿಯಾ, ಡೆಂಗಿನಂತಹ ಸಾಂಕ್ರಾಮಿಕ ರೋಗಗಳ ಕುರಿತಂತೆೆ ಕೊರೋನ ಜತೆಯಲ್ಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿದೆ. ಕಳೆದ ಬಾರಿ ಡೆಂಗಿ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿದ್ದ ಹಲವು ಪ್ರದೇಶಗಳ ಮನೆಗಳಿಗೆ ತೆರಳಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪತ್ತೆಹಚ್ಚಿ ನಿರ್ಮೂಲನೆ ಮಾಡುವ ಕಾರ್ಯ ಆರಂಭಿಸಿದೆ. ಹಲವು ಕಡೆಗಳಲ್ಲಿ ಸೊಳ್ಳೆ ಲಾರ್ವಾ ಉತ್ಪತ್ತಿ ತಾಣಗಳನ್ನು ಈಗಾಗಲೇ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ರಬ್ಬರ್ ತೋಟದ ಚಿಪ್ಪು ಅಪಾಯಕಾರಿ!

ರಬ್ಬರ್ ತೋಟಗಳಲ್ಲಿ ರಬ್ಬರ್ ದ್ರವ ಸಂಗ್ರಹಿಸಲು ಉಪಯೋಗಿಸುವ ಗೆರಟೆ ರೀತಿಯ ಚಿಪ್ಪು ಕೂಡಾ ಡೆಂಗಿಗೆ ಕಾರಣವಾಗುವ ಸೊಳ್ಳೆ ಉತ್ಪತ್ತಿಯ ತಾಣವಾಗಬಲ್ಲದು. ಚಿಪ್ಪು ಉಪಯೋಗಿಸಿದ ಬಳಿಕ ಬೋರಲು ಹಾಕದಿದ್ದರೆ ಅದರಲ್ಲಿ ನಿಲ್ಲುವ ಮಳೆ ನೀರು ಸೊಳ್ಳೆಯ ಲಾರ್ವಾ ಉತ್ಪತ್ತಿಯಾಗಲು ಸಹಕಾರಿ.

 ಮಾತ್ರವಲ್ಲದೆ ಹಂಚಿನ ಮನೆಯಲ್ಲಿ ನೀರು ಹರಿದು ಹೋಗಲು ಹಾಕುವ ಪ್ಲಾಸ್ಟಿಕ್ ದಂಬೆಗಳಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಟಯರ್‌ಗಳು ತಂಪು ಪಾನೀಯದ ಬಾಟಲ್‌ಗಳು ಕೂಡ ಸೊಳ್ಳೆ ಉತ್ಪತ್ತಿ ತಾಣವಾಗ ಬಹುದಾದ್ದರಿಂದ ಜನರು ಈ ಬಗ್ಗೆ ಜಾಗೃತಿ ವಹಿಸಿ ಹನಿ ನೀರು ಕೂಡಾ ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾದ್ದು ಅನಿವಾರ್ಯ.

 ಡೆಂಗಿ ಹಾವಳಿಯ ಮುನ್ನವೇ ಎಚ್ಚೆತ್ತುಕೊಳ್ಳೋಣ

ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಡೆಂಗಿ ಪ್ರಕರಣಗಳು ದಾಖಲಾಗಿದ್ದರೂ ಹತೋಟಿಯಲ್ಲಿದೆ. ಮಲೇರಿಯಾ ಹಾವಳಿ ಸಾಕಷ್ಟು ಕಡಿಮೆಯಾಗಿದೆ. ಮಲೇರಿಯಾ ಬಂದ ಬಳಿಕ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ಡೆಂಗಿ ಕಾಣಿಸಿಕೊಂಡ ಬಳಿಕ ನಿಯಂತ್ರಣ ಕಷ್ಟವಾಗಿರುವುದರಿಂದ ಅದು ಬಾರದಂತೆ ನಿಯಂತ್ರಿಸುವುದು ಅತೀ ಅಗತ್ಯವಾಗಿದೆ ಎಂದು ಡಾ.ನವೀನ್‌ಚಂದ್ರ ಸಲಹೆ ನೀಡಿದ್ದಾರೆ.

ಕಾಸರಗೋಡಿನಲ್ಲೂ ಡೆಂಗಿ ಹಾವಳಿ

ಕಾಸರಗೋಡು,: ಕೊರೋನ ಆತಂಕದ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಡೆಂಗಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, 50ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೈವಳಿಕೆ, ಪುತ್ತಿಗೆ, ಕುಂಬಳೆ, ಬದಿಯಡ್ಕ, ಮುಳ್ಳೇರಿಯಾ, ಆದೂರು, ಪುಲ್ಲೂರು ಪೆರಿಯ ವ್ಯಾಪ್ತಿಯಲ್ಲಿ ಡೆಂಗ್ ಪ್ರಕರಣಗಳು ತೀವ್ರಗೊಳ್ಳುತ್ತಿದೆ. ಕೊರೋನದ ನಡುವೆ ಡೆಂಗಿ ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ಸಿಲುಕಿಸಿದೆ.

ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲೂ ಡೆಂಗಿ ಕಾಣಿಸಿಕೊಂಡಿದೆ. ಮುಳ್ಳೇರಿಯಾ ವ್ಯಾಪ್ತಿಯ 30, ಬದಿಯಡ್ಕ ವ್ಯಾಪ್ತಿಯ 25 ಮಂದಿ ಈಗಾಗಲೇ ಚಿಕಿತ್ಸೆಯಲ್ಲಿದ್ದಾರೆ.

ಜನರ ಸಹಕಾರ ಅತೀ ಅಗತ್ಯ

ಮನೆಯೊಳಗೆ ಹಾಗೂ ಮನೆಯ ಸುತ್ತ ಮುತ್ತಲಿನ ಸ್ವಚ್ಛ ನೀರಿನಲ್ಲೇ ಉತ್ಪತ್ತಿಯಾಗುವ ಈಡಿಸ್ ಸೊಳ್ಳೆಯಿಂದ ಡೆಂಗಿ ಜ್ವರ ಕಾಣಿಸಿ ಕೊಳ್ಳುವುದರಿಂದ ಜನರು ತಮ್ಮ ಮನೆ ಹಾಗೂ ಸುತ್ತಮುತ್ತಲು ಸ್ವಚ್ಛವಾಗಿಡಲು ಸಹಕರಿಸಬೇಕು. ಲಾರ್ವಾ ಉತ್ಪತ್ತಿಯಾಗಿದ್ದಲ್ಲಿ ಅದನ್ನು ನಾಶಪಡಿಸಬೇಕು. ಆರೋಗ್ಯ ಇಲಾಖೆ ಕಾರ್ಯಕರ್ತರು ಈಗಾಗಲೇ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಪರಿಣಾಮ ಕಾರಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ. ಡೆಂಗಿನ ಅಪಾಯದ ಬಗ್ಗೆ ಜನರು ಮನದಟ್ಟು ಮಾಡಿಕೊಳ್ಳಬೇಕು. ಆತಂಕ, ಭಯದ ಬದಲಿಗೆ ಸ್ವಚ್ಛತೆಯನ್ನು ಕಾಪಾಡುವಲ್ಲಿ ಗಮನ ಹರಿಸಬೇಕು. ಮನೆಯ ಶೆಡ್, ತಾರಸಿ, ಪ್ಲಾಸ್ಟಿಕ್ ವಸ್ತುಗಳು, ಅರೆಯುವ ಕಲ್ಲು, ತೆಂಗಿನ ಮರದ ಕೊಂಬು, ಕಡಿದು ಹಾಕಿದ ಮರದ ಕಾಂಡಗಳು, ಅಡಿಕೆ ಮರದ ಸೋಗೆ, ಉದುರಿದ ಎಲೆಗಳಲ್ಲಿಯೂ ಮಳೆ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು.

ಡಾ.ನವೀನ್‌ಚಂದ್ರ ಕುಲಾಲ್,

ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ದ.ಕ. ಜಿಲ್ಲೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News