ಪಾಕಿಸ್ತಾನ: ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯ ಬಿಡುಗಡೆ
ಹೊಸದಿಲ್ಲಿ: ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಷನ್ ನ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ನಂತರ ಇಬ್ಬರು ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಐಎಸ್ ಐ ಕಸ್ಟಡಿಯಲ್ಲಿ ಈ ಇಬ್ಬರು ಸಿಬ್ಬಂದಿಗಳಿದ್ದಾರೆ ಎನ್ನುವ ಮಾಹಿತಿ ಲಭಿಸಿತ್ತು. ಕಾರು ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ.
ಪ್ರಕರಣದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದ ಭಾರತದ ವಿದೇಶ ವ್ಯವಹಾರ ಇಲಾಖೆ, ಭಾರತದಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಪ್ರತಿನಿಧಿಯಾಗಿರುವ ಸೈಯದ್ ಹೈದರ್ ಶಾರನ್ನು ಕಚೇರಿಗೆ ಕರೆಸಿಕೊಂಡು ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆ ಪಾಕ್ ಸರಕಾರದ ಹೊಣೆಯಾಗಿದೆ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೆ ಭಾರತದ ರಾಜತಾಂತ್ರಿಕ ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳ ನೀಡದೆ, ತಕ್ಷಣ ಬಿಡುಗಡೆಗೊಳಿಸಬೇಕೆಂದು ತಿಳಿಸಿದೆ.
ಸೋಮವಾರ ಬೆಳಿಗ್ಗೆ ಕಚೇರಿಗೆಂದು ಕಾರಿನಲ್ಲಿ ಹೊರಟಿದ್ದ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿದ್ದರು. ಈ ವಿಷಯವನ್ನು ಪಾಕಿಸ್ತಾನದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪಾಕ್ ನಲ್ಲಿರುವ ಭಾರತದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಮತ್ತು ವಕ್ತಾರ ಅಖಿಲೇಶ್ ಸಿಂಗ್ ಹೇಳಿದ್ದರು.
ಕಳೆದ ವಾರ ಹೊಸದಿಲ್ಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗೂಢಚರ್ಯೆ ಆರೋಪದಲ್ಲಿ ಗಡೀಪಾರು ಮಾಡಲಾಗಿತ್ತು. ಅಲ್ಲದೆ ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕರನ್ನು ಆಕ್ರಮಣಕಾರಿ ರೀತಿಯಲ್ಲಿ ಹಿಂಬಾಲಿಸುತ್ತಿರುವ ಪ್ರಕರಣ ವರದಿಯಾಗಿದ್ದು ಈ ಬಗ್ಗೆ ಭಾರತ ಪಾಕಿಸ್ತಾನ ಸರಕಾರಕ್ಕೆ ಪ್ರತಿಭಟನೆ ಸಲ್ಲಿಸಿದೆ.
ಕೆಲ ದಿನಗಳ ಹಿಂದೆ ಭಾರತದ ರಾಜತಾಂತ್ರಿಕ ಪ್ರತಿನಿಧಿ ಗೌರವ್ ಅಹ್ಲುವಾಲಿಯಾರ ವಾಹನವನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಸಿಬ್ಬಂದಿ ಹಿಂಬಾಲಿಸಿದ್ದರು. ಪಾಕ್‌ನಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳ ನೀಡುವ ಪ್ರಕರಣ ಹೆಚ್ಚಿದ್ದು ಮಾರ್ಚ್ ತಿಂಗಳೊಂದರಲ್ಲೇ ಇಂತಹ 13 ಘಟನೆ ನಡೆದಿದೆ. ಇಂತಹ ಪ್ರಕ್ರಿಯೆಗಳನ್ನು ಕೊನೆಗೊಳಿಸುವಂತೆ ಭಾರತದ ರಾಯಭಾರ ಕಚೇರಿ ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆಗೆ ಪತ್ರ ಬರೆದು ಆಗ್ರಹಿಸಿತ್ತು.