ಭ್ರೂಣ ಪರೀಕ್ಷೆ ಕಾನೂನುಗಳ ಅಮಾನತು ಪ್ರಶ್ನಿಸಿದ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಜೂ.16: ಗರ್ಭಧಾರಣೆ ಹಾಗೂ ಪ್ರಸವಪೂರ್ವ ಪರೀಕ್ಷಾ ತಂತ್ರಜ್ಞಾನಗಳ (ಪಿಸಿಪಿಎನ್‌ಡಿಟಿ) ಕಾಯ್ದೆಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ನಿಯಮಗಳನ್ನು ಅಮಾನತಿನಲ್ಲಿಡುವ ಕೇಂದ್ರ ಸರಕಾರದ ಜೂನ್ 4ರ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ಪಿಸಿಎನ್‌ಡಿಟಿ ಕಾಯ್ದೆಯು ಭ್ರೂಣಾವಸ್ಥೆಯಲ್ಲಿ ಲಿಂಗವನ್ನು ಗುರುತಿಸುವುದನ್ನು ಹಾಗೂ ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸುತ್ತದೆ.
ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ದೇಶವು ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ವೈದ್ಯರ ಸೇವೆಗಳು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕಾಗಿ ಹೆಚ್ಚು ಬಳಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಪಿಸಿಎನ್‌ಡಿಟಿಯ ಕೆಲವು ಕಾನೂನುಗಳು, ಕಾಯ್ದೆಯ ಅಧಿಕಾರ ವ್ಯಾಪ್ತಿಯಿಂದ ಹೊಗಿರುವುದರಿಂದ, ಅವುಗಳನ್ನು ಅಮಾನತಿನಲ್ಲಿರಿಸಿ ಕೇಂದ್ರ ಸರಕಾರವು ಎಪ್ರಿಲ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಸಾಬು ಮ್ಯಾಥ್ಯೂ ಜಾರ್ಜ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಸರಕಾರದ ಅಧಿಸೂಚನೆಯು ಪಿಸಿಎನ್‌ಡಿಟಿ ಕಾಯ್ದೆಯ 8, 9 (8) ಹಾಗೂ 18ಎ(6) ನಿಯಮಗಳನ್ನು ಅಮಾನತಿನಲ್ಲಿಡುತ್ತದೆ. ಈ ಕಾನೂನುಗಳೆಲ್ಲವೂ ಕೆಲವೊಂದು ಆಡಳಿತಾತ್ಮಕ ಕಾರ್ಯವಿಧಾನಗಳಿಗೆ ಸಂಬಂಧಿಸಿದ್ದಾಗಿವೆ.
ಕೋವಿಡ್19 ಹಿನ್ನೆಲೆಯ ಇಡೀ ದೇಶಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಇದರಿಂದಾಗಿ ತುರ್ತು ಸ್ಥಿತಿ ನಿರ್ಮಾಣವಾಗಿರುವುದರಿಂದ ಈ ಕಾನೂನುಗಳನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಪಿಸಿಎನ್‌ಡಿಟಿ ಕಾಯ್ದೆಯ ಕೆಲವು ನಿಯಮಗಳನ್ನು ಅಮಾನತಿನಲ್ಲಿಡುವ ಮೂಲಕ ಕೇಂದ್ರ ಸರಕಾರವು ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದರು. ಅಮಾನತಿನಲ್ಲಿಡಲಾದ ನಿಯಮಾವಳಿಗಳು, ಭ್ರೂಣಪರೀಕ್ಷೆ (ಸೋನೋಗ್ರಫಿ) ಪ್ರಯೋಗಾಲಯಗಳ ನೋಂದಣಿ, ಗರ್ಭಧಾರಣೆಗೆ ಸಂಬಂಧಿಸಿದ ದಾಖಲೆಗ ನಿರ್ವಹಣೆಗೆ ಸಂಬಂಧಿಸಿದ್ದಾಗಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಅಧಿಸೂಚನೆ ಬಗ್ಗೆ ಹಸ್ತಕ್ಷೇಪ ನಡೆಸಲು ಸಾಧ್ಯವಿಲ್ಲವೆಂದು ನ್ಯಾಯಪೀಠವು ಜಾರ್ಜ್ ಅವರ ನ್ಯಾಯವಾದಿಗೆ ತಿಳಿಸಿತು. ಆದಾಗ್ಯೂ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಲು ಒಪ್ಪಿಕೊಂಡಿತು.