ಭಾರತ-ನೇಪಾಳ ನಡುವಿನ ರೋಟಿ-ಬೇಟಿ ಸಂಬಂಧ ಯಾರಿಂದಲೂ ಮುರಿಯಲಾಗದು : ರಾಜನಾಥ್ ಸಿಂಗ್

Update: 2020-06-15 17:04 GMT

ಹೊಸದಿಲ್ಲಿ, ಜೂ.15: ಭಾರತ-ನೇಪಾಳ ನಡುವಿನ ಸಂಬಂಧ ಸಾಮಾನ್ಯವಾದದ್ದಲ್ಲ. ಇದು ರೋಟಿ-ಬೇಟಿಯ ಸಂಬಂಧವಾಗಿದ್ದು, ಇದನ್ನು ವಿಶ್ವದ ಯಾವುದೇ ಶಕ್ತಿಯಿಂದ ಮುರಿಯಲಾಗದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸೋಮವಾರ ವರ್ಚುವಲ್ ರ್ಯಾಲಿ ಮೂಲಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಂಗ್, “ನೇಪಾಳದೊಂದಿಗೆ ನಮಗೆ ಸಾಮಾಜ್”, ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧವಿದೆ. ಉಭಯ ದೇಶಗಳ ಸಂಬಂಧ ರೋಟಿ-ಬೇಟಿ (ಜೀವನೋಪಾಯ ಮತ್ತು ಮದುವೆ )ಸೂತ್ರದಿಂದ ಬಂಧಿಸಲ್ಪಟ್ಟಿದೆ ಎಂದರು.

ಭಾರತ-ನೇಪಾಳದ ಮಧ್ಯೆ ಯಾವುದೇ ಮನಸ್ತಾಪವಿದ್ದರೂ ಅದನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು ಎಂದರು. ನೇಪಾಳವು ಭಾರತದ ಭೂಪ್ರದೇಶವನ್ನು ಒಳಗೊಂಡಿರುವ ನೂತನ ನಕ್ಷೆಯನ್ನು ಅನುಮೋದಿಸಿರುವುದು ಹಾಗೂ ಲಿಪುಲೇಕ್ ಪ್ರದೇಶದಲ್ಲಿ ಭಾರತದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆಕ್ಷೇಪಿಸುತ್ತಿರುವ ಬಗ್ಗೆ ಪ್ರಸ್ತಾವಿಸಿದ ಸಿಂಗ್, ನಮ್ಮ ನೆರೆಯ ದೇಶವಾದ ನೇಪಾಳಕ್ಕೆ ರಸ್ತೆ ವಿಷಯದಲ್ಲಿ ಕೆಲವೊಂದು ತಪ್ಪು ಅಭಿಪ್ರಾಯವಿದೆ. ಲಿಪುಲೇಕ್‌ನಲ್ಲಿ ನಮ್ಮ ವ್ಯಾಪ್ತಿಯ ಪ್ರದೇಶದಲ್ಲೇ ರಸ್ತೆ ನಿರ್ಮಿಸುತ್ತಿದ್ದೇವೆ . ಈ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸುತ್ತೇವೆ ಎಂದರು.

ಲಿಪುಲೇಕ್‌ನಲ್ಲಿ ನಿರ್ಮಿಸಲಾಗಿರುವ 80 ಕಿ.ಮೀ ಉದ್ದದ ರಸ್ತೆಯನ್ನು ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಇದನ್ನು ನೇಪಾಳ ಆಕ್ಷೇಪಿಸಿತ್ತು. ಬಳಿಕ ಭಾರತದ ಭೂಭಾಗವನ್ನು ಒಳಗೊಂಡಿರುವ ನೂತನ ನಕ್ಷೆಯನ್ನು ಕಳೆದ ವಾರ ನೇಪಾಳದ ಸಂಸತ್ತು ಅನುಮೋದಿಸಿದೆ. ಅಲ್ಲದೆ ನೇಪಾಳ-ಭಾರತ ಗಡಿಭಾಗದಲ್ಲಿ ನೇಪಾಳದ ಗಡಿಭದ್ರತಾ ಪಡೆಯವರು ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News