ಆರ್ಡರ್ ಮಾಡಿದ್ದು ಕಮ್ಯುನಿಸ್ಟ್ ಮ್ಯಾನಿಫೆಸ್ಟೊ, ಸಿಕ್ಕಿದ್ದು ಭಗವದ್ಗೀತೆ !

Update: 2020-06-15 17:12 GMT
Photo: facebook

ಕೋಲ್ಕತಾ, ಜೂ.15: ಆನ್‌ಲೈನ್ ಮೂಲಕ ವ್ಯವಹರಿಸುವ ಇ-ರಿಟೇಲ್ ವೇದಿಕೆಯಲ್ಲಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ಪುಸ್ತಕಕ್ಕೆ ಆರ್ಡರ್ ಮಾಡಿದ ತನಗೆ ಭಗವದ್ಗೀತೆಯ ಪ್ರತಿಯನ್ನು ಕಳುಹಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಕೋಲ್ಕತಾದ ಮೆಟ್ರೊಪೊಲಿಸ್ ನಿವಾಸಿ ಸುತೀರ್ಥೊ ದಾಸ್ ಎಂಬವರು ಈ ಪೋಸ್ಟ್ ಮಾಡಿದ್ದು, ಪಾರ್ಸೆಲ್‌ನಲ್ಲಿ ಬಂದಿದ್ದ ಭಗವದ್ಗೀತೆಯ ಫೋಟೋ ಹಾಗೂ ಅದರ ಜತೆಗಿದ್ದ ಬಿಲ್‌ನಲ್ಲಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ಪುಸ್ತಕದ ಹೆಸರು ಮತ್ತು ಬೆಲೆ ನಮೂದಿಸಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಎರಡೂ ಪುಸ್ತಕಗಳು ಸೀಮೆಸುಣ್ಣ (ಚಾಕ್) ಮತ್ತು ಗಿಣ್ಣು(ಚೀಸ್)ನಂತೆ ಭಿನ್ನವಾಗಿವೆ ಎಂದು ಬರೆದಿದ್ದಾರೆ.

ಇ-ಕಾಮರ್ಸ್ ವ್ಯವಹಾರ ಮಾಡುವ ಖ್ಯಾತ ಸಂಸ್ಥೆಯೊಂದು ಓದುಗರಿಗೆ ಬೆಲೆಕಡಿತದ ಕೊಡುಗೆ ನೀಡಿದ್ದರಿಂದ ಜೂನ್ 10ರಂದು ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ಪುಸ್ತಕಕ್ಕೆ ಆರ್ಡರ್ ಮಾಡಿದ್ದೆ. ಜೂನ್ 13ರಂದು ತಾನು ಕಚೇರಿಯಲ್ಲಿದ್ದ ಸಂದರ್ಭ ಸಂಸ್ಥೆಯ ಪ್ರತಿನಿಧಿಯೊಬ್ಬರು ಪಾರ್ಸೆಲನ್ನು ತನ್ನ ಮನೆಗೆ ಮುಟ್ಟಿಸಿದ್ದಾರೆ. ಮನೆಗೆ ಬಂದ ಮೇಲೆ ಪಾರ್ಸೆಲ್ ತೆರೆದು ನೋಡಿದಾಗ ಭಗವದ್ಗೀತೆ ಇತ್ತು. ಇದರಿಂದ ಅಚ್ಚರಿಗೊಂಡು ಸಂಸ್ಥೆಗೆ ದೂರವಾಣಿ ಕರೆ ಮಾಡಿದರೂ ಯಾರೂ ಕರೆಯನ್ನು ಸ್ವೀಕರಿಸಿಲ್ಲ ಎಂದು ದಾಸ್ ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಮಾಡಿರುವ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಭರಿತ ಪ್ರತಿಕ್ರಿಯೆ ಬಂದಿದ್ದು, ಹಲವರು ಇದನ್ನು ಶೇರ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News