ಅನಿಲ್ ಅಂಬಾನಿಯಿಂದ 1,200 ಕೋಟಿ ರೂ. ವಸೂಲಿಗೆ ಕಂಪೆನಿ ಟ್ರಿಬ್ಯೂನಲ್ ಮೆಟ್ಟಲೇರಿದ ಎಸ್‌ಬಿಐ
ಹೊಸದಿಲ್ಲಿ, ಜೂ.15: ರಿಲಾಯನ್ಸ್ ಕಮ್ಯುನಿಕೇಶನ್ಸ್‌ನ ವರಿಷ್ಠ ಅನಿಲ್ ಅಂಬಾನಿ ಪಡೆದಿರುವ ಸಾಲಕ್ಕಾಗಿ ನೀಡಿರುವ ಎರಡು ಖಾತರಿಗಳ ಮೊತ್ತವಾದ 1,200 ಕೋಟಿ ರೂ.ಗಳನ್ನು ವಸೂಲಿ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್, ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣದ ಮೆಟ್ಟಲೇರಿದೆ.
ಅನಿಲ್ ಅಂಬಾನಿ ತನ್ನ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಲಿ. ಹಾಗೂ ರಿಲಯನ್ಸ್ ಇನ್ಫ್ರಾಟೆಲ್ ಲಿ.ಗೆ ಪಡೆದಿರುವ ಬ್ಯಾಂಕ್ ಸಾಲಗಳಿಗೆ ವೈಯಕ್ತಿಕ ಖಾತರಿಯನ್ನು ನೀಡಿದ್ದಾರೆಂದು ಎಸ್‌ಬಿಐ ನ್ಯಾಯಾಧೀಕರಣಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಎಸ್‌ಬಿಐನ ಅರ್ಜಿಯನ್ನು ಪರಿಶೀಲನೆಗೆ ಸ್ವೀಕರಿಸಿರುವ ನ್ಯಾಯಾಧೀಕರಣವು, ಅನಿಲ್ ಅಂಬಾನಿಗೆ ಗುರುವಾರ ನೋಟಿಸ್ ಜಾರಿಗೊಳಿಸಿದ್ದು, ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.
ದಿವಾಳಿತನ ಕಾಯ್ದೆಯ ವೈಯಕ್ತಿಕ ಖಾತರಿ ಕುರಿತ ಉಪವಾಕ್ಯ (ಕ್ಲೌಸ್)ದಡಿ ಅನಿಲ್ ಅಂಬಾನಿಯಿಂದ 1,200 ಕೋಟಿ ರೂ. ಹಣವನ್ನು ವಸೂಲಿ ಮಾಡಲು ಅನುಮತಿ ಕೋರಿ ಬ್ಯಾಂಕ್ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಬಗ್ಗೆ ಅನಿಲ್ ಅಂಬಾನಿಯವರ ವಕ್ತಾರರೊಬ್ಬರು ಪ್ರತಿಕ್ರಿಯಿಸಿ, ಪ್ರಕರಣವು ರಿಲಯನ್ಸ್ ಕಮ್ಯುನಿಕೇಶನ್ಸ್ ಹಾಗೂ ರಿಲಯನ್ಸ್ ಇನ್‌ಫ್ರಾಟೆಲ್ ಕಂಪೆನಿಯು ಪಡೆದಿರುವ ಸಾಲಕ್ಕೆ ಸಂಬಂಧಿಸಿದ್ದಾಗಿದೆ. ಇದು ಅನಿಲ್ ಅಂಬಾನಿ ವೈಯಕ್ತಿಕವಾಗಿ ಪಡೆದಿರುವ ಸಾಲವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅಂಬಾನಿಯವರು ಸೂಕ್ತವಾದ ದಾವೆಗಳನ್ನು ಸಲ್ಲಿಸಲಿದ್ದಾರೆಂದು ಅವರು ಹೇಳಿದ್ದಾರೆ.