ಕೊರೋನ ಸಮಯದಲ್ಲಿ ಇಂಧನ ಬೆಲೆಯೇರಿಕೆ ಮೂಲಕ ಜನರ ಕಷ್ಟ ಹೆಚ್ಚಿಸುತ್ತಿರುವ ಸರಕಾರ

Update: 2020-06-16 08:35 GMT

ಹೊಸದಿಲ್ಲಿ: ಕೋವಿಡ್-19ನಿಂದಾಗಿ ಜನರು ಕಷ್ಟ ಅನುಭವಿಸುತ್ತಿರುವಾಗ ಸರಕಾರ ಸತತ ಹತ್ತನೇ ದಿನ ಇಂಧನ ದರ ಬೆಲೆಯೇರಿಕೆ ಮಾಡಿರುವುದು ‘ಸಂಪೂರ್ಣವಾಗಿ ಅಸಂವೇದಿತನದಿಂದ' ಕೂಡಿದ ಕ್ರಮ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸರಕಾರ ತಕ್ಷಣ ಇಂಧನ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಂತೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನೂ ಬರೆದಿದ್ದಾರೆ.

“ಕೋವಿಡ್-19 ಸಮಸ್ಯೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗ ಹಾಗೂ ಜೀವನೋಪಾಯಗಳನ್ನು ಕಳೆದುಕೊಂಡಿರುವಾಗ ಸರಕಾರವು ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿರುವ ಹಿಂದೆ ನನಗೆ ಯಾವುದೇ ತರ್ಕ ಕಾಣುತ್ತಿಲ್ಲ'' ಎಂದು ಪತ್ರದಲ್ಲಿ ಹೇಳಿರುವ ಸೋನಿಯಾ, “ನಿಮ್ಮ ಸರಕಾರ ಈ ಅಸಮರ್ಥನೀಯ ದರ ಏರಿಕೆಯ ಮೂಲಕ ಸುಮಾರು 2.6 ಲಕ್ಷ ಕೋಟಿ ಹೆಚ್ಚುವರಿ ಆದಾಯ ಗಳಿಸಲು ಯತ್ನಿಸುತ್ತಿದೆ. ಈ ದರ ಏರಿಕೆ ಜನರ ಮೇಲೆ ಹೆಚ್ಚುವರಿ ಹೊರೆಯನ್ನು ಸೃಷ್ಟಿಸುತ್ತಿದೆ, ಜನರ ಕಷ್ಟಗಳನ್ನು ಹೋಗಲಾಡಿಸುವುದು ಸರಕಾರದ ಕರ್ತವ್ಯವೇ ಹೊರತು ಅವರ ಕಷ್ಟವನ್ನು ಹೆಚ್ಚಿಸುವುದಲ್ಲ, ಕಚ್ಛಾ ತೈಲ ಬೆಲೆ ಶೇ 9ರಷ್ಟು ಇಳಿಕೆ ಕಂಡಿರುವಾಗ ಸರಕಾರ ಇಂಧನ ಬೆಲೆ ಏರಿಸಿ ಜನರನ್ನು ಕಷ್ಟಕ್ಕೆ ತಳ್ಳಿ ಲಾಭ ಗಿಟ್ಟಿಸಲು ಯತ್ನಿಸುತ್ತಿದೆ'' ಎಂದು ಸೋನಿಯಾ ತಮ್ಮ ಪತ್ರದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News