ನ್ಯಾ.ಹೊಸಬೆಟ್ಟುಸುರೇಶ್ ಅವರ ನೆನಪಿನಲ್ಲಿ....

Update: 2020-06-18 19:30 GMT

ಕಾನೂನು ಕ್ಷೇತ್ರದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ವೃತ್ತಿಯಲ್ಲಿ ಹಿರಿಯ ವ್ಯಕ್ತಿಯಾಗಿದ್ದರೂ ನ್ಯಾ.ಸುರೇಶ್ ಅವರು ಸರಳತೆಯೇ ಮೂರ್ತಿವೆತ್ತಂತಿದ್ದರು. ತಾನು ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂಬ ಅಹಂ ಅವರಲ್ಲಿರಲಿಲ್ಲ. ಯುವ ನ್ಯಾಯವಾದಿಗಳು ಮತ್ತು ಇಂಟರ್ನಿಗಳೊಂದಿಗೆ ಮುಕ್ತವಾಗಿ ಸಂವಾದಿಸುತ್ತಿದ್ದರು ಮತ್ತು ಅವರಿಗೆ ಅಗತ್ಯ ಮಾರ್ಗದರ್ಶನ, ಸಲಹೆಗಳನ್ನು ನೀಡುತ್ತಿದ್ದರು.


ನ್ಯಾ.ಹೊಸಬೆಟ್ಟು ಸುರೇಶ್ ಅವರು ತಾನು ನೇತೃತ್ವ ವಹಿಸಿದ್ದ ವಿವಿಧ ಸತ್ಯಶೋಧನಾ ಆಯೋಗಗಳು ಮತ್ತು ಶೋಷಿತ ವರ್ಗಗಳಿಗೆ ಮಾನವ ಹಕ್ಕುಗಳ ನಿರಾಕರಣೆಯ ಕುರಿತು ಈ ಆಯೋಗಗಳು ಪ್ರಕಟಿಸಿದ್ದ ವರದಿಗಳಿಂದಾಗಿ ಖ್ಯಾತರಾಗಿದ್ದರು. ಈ ವರದಿಗಳು ಕೋಮು ಅಥವಾ ಜನಾಂಗೀಯ ಹಿಂಸಾಚಾರದ ಬಲಿಪಶುಗಳು ಮತ್ತು ದೇಶದ ಪ್ರತಿಯೊಂದೂ ಮೂಲೆಯಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದ್ದವು. ಅವು ಧ್ವನಿಯಿಲ್ಲದವರಿಗೆ ಧ್ವನಿಯನ್ನು ನೀಡಿದ್ದವು.

ನ್ಯಾ.ಹೊಸಬೆಟ್ಟು ಸುರೇಶ್ ಜೂ.12ರಂದು ನಿಧನರಾಗಿದ್ದಾರೆ. ಆದರೆ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವಿವಿಧ ಸ್ಮರಣ ಲೇಖನಗಳು ಅವರ ಮಾನವೀಯ ಮುಖ ಮತ್ತು ಮಹಿಳೆಯರ ಹಕ್ಕುಗಳಿಗೆ ಅವರ ಆಳವಾದ ಬದ್ಧತೆಗಳ ಮೇಲೆ ಬೆಳಕು ಚೆಲ್ಲಲು ವಿಫಲಗೊಂಡಿವೆ. ನ್ಯಾ.ಸುರೇಶ್ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಕಾನೂನು ಉಪಕ್ರಮಗಳಿಗಾಗಿ ತಾನು ಸ್ಥಾಪಿಸಿದ್ದ ಮಜ್ಲಿಸ್ ಲೀಗಲ್ ಸೆಂಟರ್‌ನ ಟ್ರಸ್ಟಿಯಾಗಿದ್ದರು ಎನ್ನುವುದು ಹಲವರಿಗೆ ಅಚ್ಚರಿಯನ್ನುಂಟು ಮಾಡಬಹುದು. ಹೀಗಾಗಿ ಈ ಲೇಖನದಲ್ಲಿ ನಾನು ಅವರ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡಿದ್ದೇನೆ.

ನ್ಯಾ.ಸುರೇಶ್ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ನಾವೆಲ್ಲ ಅವರನ್ನು ನಮ್ಮ ಕಾಲದ ಶ್ರೇಷ್ಠ ಸ್ತ್ರೀ ಸಮಾನತಾವಾದಿ ಎಂದು ಗೌರವಿಸುತ್ತೇವೆ. ಸಾರ್ವಜನಿಕ ಜೀವನದಲ್ಲಿ ಮತ್ತು ತನ್ನ ವೈಯಕ್ತಿಕ ಬದುಕಿನಲ್ಲಿ ಮಹಿಳೆಯರ ಹಕ್ಕುಗಳ ಪ್ರಬಲ ಸಮರ್ಥಕರಾಗಿದ್ದ ಅವರು ಕಠಿಣ ಸವಾಲುಗಳನ್ನೆದುರಿಸಿದ್ದಾಗಲೂ ತನ್ನ ನೈತಿಕ ವೌಲ್ಯಗಳನ್ನು ಕಾಯ್ದುಕೊಂಡಿದ್ದರು. ಹಲವಾರು ಪ್ರತಿಕೂಲಗಳನ್ನು ಅವರು ಎದುರಿಸಿದ್ದರೂ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅವರ ವಿಶ್ವಾಸ ಕೊನೆಯವರೆಗೂ ದೃಢ ಮತ್ತು ಅಚಲವಾಗಿತ್ತು.

 ನ್ಯಾ.ಸುರೇಶ್ ಅವರು ಡಿಸೆಂಬರ್, 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ಬಳಿಕ ಮುಂಬೈ ನಗರದಲ್ಲಿ ಸಂಭವಿಸಿದ್ದ ದಂಗೆಗಳ ಕುರಿತು ಸತ್ಯಶೋಧನಾ ಆಯೋಗದ ನೇತೃತ್ವ ವಹಿಸಿದ್ದಾಗ ನಾನು ಮೊದಲ ಬಾರಿಗೆ ಅವರೊಂದಿಗೆ ಗುರುತಿಸಿಕೊಂಡಿದ್ದೆ. ಕಾಲಮಿತಿಯನ್ನು ಹೊಂದಿದ್ದ ಈ ‘ಸಿಟಿಜನ್ಸ್ ಟ್ರಿಬ್ಯೂನಲ್’ ತನ್ನ ವರದಿ ‘ಜನತಾ ತೀರ್ಪು’ ಅನ್ನು ಆರು ತಿಂಗಳಲ್ಲಿ ಪ್ರಕಟಿಸಬೇಕಿತ್ತು. ಖ್ಯಾತ ನ್ಯಾಯಾಧೀಶ ವಿ.ಆರ್.ಕೃಷ್ಣ ಅಯ್ಯರ್ ಅವರು ವಿನ್ಯಾಸಗೊಳಿಸಿದ್ದ ಈ ಕಾನೂನು ಸಾಧನದಲ್ಲಿ ಅವರ ವಿಶ್ವಾಸ ಎಷ್ಟೊಂದು ಗಾಢವಾಗಿತ್ತೆಂದರೆ ಟ್ರಿಬ್ಯೂನಲ್‌ನ ವಿಚಾರಣೆಯು ಸಮಾಂತರ ನ್ಯಾಯಾಂಗ ವ್ಯವಸ್ಥೆಗೆ ಸಮನಾಗುವುದರಿಂದ ವಿಚಾರಣೆಯನ್ನು ಮುಂದುವರಿಸುವುದನ್ನು ನಿರ್ಬಂಧಿಸಿ ನ್ಯಾ.ಶ್ರೀಕೃಷ್ಣ ನೇತೃತ್ವದ ಅಧಿಕೃತ ಆಯೋಗವು ನೋಟಿಸನ್ನು ಜಾರಿ ಮಾಡಿದಾಗಲೂ ಅವರು ಅಳುಕಿರಲಿಲ್ಲ.

ಇವೆಲ್ಲವೂ ಸಾರ್ವಜನಿಕರಿಗೆ ಗೊತ್ತು. ಆದರೆ 1993ರ ಈ ಸಮಯದಲ್ಲಿ ಅವರ ಅನಾರೋಗ್ಯಪೀಡಿತ ಪತ್ನಿ ಕೇವಲ 56ನೆಯ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದ್ದರು ಎನ್ನುವುದು ಕೆಲವೇ ಜನರಿಗೆ ಗೊತ್ತಿದೆ. ಅಂತ್ಯಸಂಸ್ಕಾರಕ್ಕಾಗಿ ನಾವು ಬಾಂದ್ರಾದ ಸೈಂಟ್ ಮಾರ್ಟಿನ್ಸ್ ರೋಡ್‌ನಲ್ಲಿಯ ಅವರ ನಿವಾಸಕ್ಕೆ ತೆರಳಿದ್ದು ನನಗೆ ನೆನಪಿದೆ. ನ್ಯಾ.ಸುರೇಶ್ ಅವರು ಬಾಳಸಂಗಾತಿಯನ್ನು ಕಳೆದುಕೊಂಡಿದ್ದು ಆಯೋಗದ ಕಾಲಬದ್ಧ ಕಾರ್ಯಕ್ಕೆ ಭಾರೀ ಹಿನ್ನಡೆ ಮಾಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಹಾಗಾಗಲಿಲ್ಲ. ಮರುದಿನವೇ ಆಯೋಗದ ಕೆಲಸಕ್ಕೆ ಮರಳಿದ್ದ ಅವರು ದಂಗೆಗಳ ಸಂತ್ರಸ್ತರ ಅಹವಾಲುಗಳ ಆಲಿಕೆಯನ್ನು ಮುಂದುವರಿಸಿದ್ದರು. ಟ್ರಿಬ್ಯೂನಲ್‌ನ ಕೆಲಸದ ಬಗ್ಗೆ ಅವರ ಬದ್ಧತೆ ಹಾಗಿತ್ತು. ಇದೇ ವೇಳೆ ಅವರು ತನ್ನ ಮೂವರು ಪುತ್ರಿಯರು ಮತ್ತು ಒಬ್ಬನೇ ಅಂಗವಿಕಲ ಪುತ್ರನನ್ನು ಕಡೆಗಣಿಸಿರಲಿಲ್ಲ. ಮಕ್ಕಳಿಗೆ ತಂದೆ ಮತ್ತು ತಾಯಿ ಎರಡೂ ಆಗಿ ಅವರು ಕರ್ತವ್ಯ ನಿರ್ವಹಿಸಿದ್ದರು. ತಂದೆಯೇ ತನಗೆ ಅಡಿಗೆ ಮಾಡಲು ಕಲಿಸಿದ್ದರು,ಮಕ್ಕಳಿಗಾಗಿ ಅವರೇ ಸಿಹಿತಿಂಡಿಗಳನ್ನು ತಯಾರಿಸುತ್ತಿದ್ದರು ಎಂದು ನ್ಯಾ.ಸುರೇಶ್ ಅವರ ಹಿರಿಯ ಪುತ್ರಿ ರಜನಿ ಇತ್ತೀಚೆಗೆ ಶ್ರದ್ದಾಂಜಲಿ ಸಭೆಯಲ್ಲಿ ನನಗೆ ತಿಳಿಸಿದ್ದರು.

ನ್ಯಾ.ಸುರೇಶ್ ಅವರ ಈ ಗುಣಗಳು ಅವರ ಅಧಿಕೃತ ಕರ್ತವ್ಯಗಳಲ್ಲಿಯೂ ಪ್ರತಿಫಲಿಸಿದ್ದವು. 1970ರ ದಶಕದಲ್ಲಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾಗಿದ್ದಾಗ ಮಹಿಳೆಯರ ಹಕ್ಕುಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಕೌಟುಂಬಿಕ ವಿವಾದಗಳನ್ನು ಬಗೆಹರಿಸಲು ಸಮಾಲೋಚಕರನ್ನು ತೊಡಗಿಸಿಕೊಳ್ಳುವ ಹೊಸ ಪರಿಕಲ್ಪನೆಗೆ ಅವರು ನಾಂದಿ ಹಾಡಿದ್ದರು. ಎರಡು ದಶಕಗಳ ಬಳಿಕ ಸ್ಥಾಪನೆಗೊಂಡ ಕುಟುಂಬ ನ್ಯಾಯಾಲಯಗಳ ಕಾರ್ಯ ನಿರ್ವಹಣೆಗೆ ನ್ಯಾ.ಸುರೇಶ್ ಅವರು ರೂಪಿಸಿದ್ದ ಸಂಧಾನದ ಕಾರ್ಯತಂತ್ರವು ಪ್ರಧಾನ ನೀತಿಯಾಗಿತ್ತು. ಮಹಿಳೆಯರ ಹಕ್ಕುಗಳ ಕುರಿತು ತನ್ನ ಹೆಚ್ಚಿನ ಸಾರ್ವಜನಿಕ ಭಾಷಣಗಳಲ್ಲಿ ಕಾನೂನಿನ ನೆರವಿಲ್ಲದೆಯೂ ವಿನೂತನ ಸುಧಾರಣೆಗಳನ್ನು ತರಲು ನ್ಯಾಯಾಧೀಶರಿಗೆ ವ್ಯಾಪಕ ಅವಕಾಶವಿರುವುದನ್ನು ಪ್ರಮುಖವಾಗಿ ಬಿಂಬಿಸಲು ತನ್ನ ಸಂಧಾನ ಕಾರ್ಯತಂತ್ರವನ್ನು ಅವರು ಪ್ರಸ್ತಾಪಿಸುತ್ತಿದ್ದರು. ಮನಸ್ಸಿದ್ದರೆ ಮಾರ್ಗವಿದ್ದೇ ಇದೆ ಎನ್ನುವುದನ್ನು ಅವರು ಒತ್ತ್ತಿ ಹೇಳುತ್ತಿದ್ದರು. ಅವರು ತಳಮಟ್ಟದ ಮಾಹಿತಿಗಳಿಗೆ ಆದ್ಯತೆ ನೀಡುತ್ತಿದ್ದರು ಮತ್ತು ಇದಕ್ಕಾಗಿ ಮುಂಬೈನ ಕುಟುಂಬ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುವ ಯುವ ವಕೀಲರ ಅನುಭವಗಳನ್ನು ಸದಾ ಆಲಿಸುತ್ತಿದ್ದರು. ವರ್ಷಗಳು ಕಳೆಯುತ್ತಿದ್ದಂತೆ ಮಹಿಳೆಯರ ಹಕ್ಕುಗಳ ಪರಿಕಲ್ಪನೆಗಳು ಹೇಗೆ ರೂಪುಗೊಳ್ಳುತ್ತಿವೆ ಎನ್ನುವುದನ್ನು ಅರಿಯುವುದು ಅವರ ಉದ್ದೇಶವಾಗಿತ್ತು. ಅಸಾಧಾರಣ ವಿಳಂಬಗಳನ್ನುಂಟು ಮಾಡುವ ಕಠಿಣ ನಿಯಮಗಳಿಗೆ ಅಂಟಿಕೊಳ್ಳುವ ಪ್ರಯತ್ನದಲ್ಲಿ ಮಹಿಳೆಯರ ಹಕ್ಕುಗಳು ದಮನಿಸಲ್ಪಡುವ ಘಟನೆಗಳ ಬಗ್ಗೆ ಅವರು ತೀವ್ರ ಹತಾಶೆಯನ್ನು ಅನುಭವಿಸುತ್ತಿದ್ದರು.

ಆದರೆ ನ್ಯಾ.ಸುರೇಶ್ ಅವರು ತನ್ನ ವೈಯಕ್ತಿಕ ಬದುಕಿನಲ್ಲಿಯೂ ಇದಕ್ಕೆ ಸಾಕ್ಷಿಯಾಗಬೇಕಾಗಿ ಬಂದಿದ್ದು ವಿಧಿಲಿಖಿತವಾಗಿತ್ತು. ಅವರ ಹಿರಿಯ ಪುತ್ರಿ ರಜನಿಯ ಪತಿ ಸ್ವೀಡಿಷ್ ಪ್ರಜೆಯಾಗಿದ್ದು,ವಿದೇಶದಲ್ಲಿ ವಾಸವಿದ್ದರು. ಕೌಟುಂಬಿಕ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು,ರಜನಿ ಮಕ್ಕಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಕಾನೂನು ಹೋರಾಟ ನಡೆಸಿದ್ದರು. ರಜನಿಯವರ ಇಬ್ಬರು ಮಕ್ಕಳ ಪೈಕಿ ಪುತ್ರ ಅಪ್ರಾಪ್ತ ವಯಸ್ಕ ನಾಗಿದ್ದರೆ ಪುತ್ರಿ ಪ್ರಾಪ್ತ ವಯಸ್ಕಳಾಗಿದ್ದಳು,ಆದರೆ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದಳು. ಈ ಮಕ್ಕಳೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ನ್ಯಾ.ಸುರೇಶ್ ಅವರ ಶ್ರೀಮಂತ ತಂದೆಯಿಂದ ಸಾಕಷ್ಟು ಹಣಕಾಸಿನ ನೆರವಿಲ್ಲದಿದ್ದರೂ ಚೆನ್ನಾಗಿಯೇ ಬೆಳೆಸಿದ್ದರು. ಕುಟುಂಬ ನ್ಯಾಯಾಲಯದಿಂದ ಉಚ್ಚ ನ್ಯಾಯಾಲಯಕ್ಕೆ ಎಳೆಯಲ್ಪಟ್ಟಿದ್ದ ಪ್ರಕರಣ ಸುದೀರ್ಘ ವಿಳಂಬದ ಬಳಿಕ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಈ ಎಲ್ಲ ಅವಧಿಯಲ್ಲಿ ಕಸ್ಟಡಿ ವಿವಾದಗಳು ಹೇಗೆ ನಿರ್ಧರಿಸಲ್ಪಡುತ್ತವೆ,ಜೀವನಾಂಶ ಬಾಕಿ ಇರುವ ವಿಷಯ ಹೇಗೆ ಹಿನ್ನೆಲೆಗೆ ತಳ್ಳಲ್ಪಡುತ್ತದೆ,ಮಕ್ಕಳನ್ನು ಹೇಗೆ ಬ್ರೇನ್ ವಾಷ್ ಮಾಡಲಾಗುತ್ತದೆ, ಮಕ್ಕಳ ಸಂದರ್ಶನ ಪ್ರಕ್ರಿಯೆಗಳು ಹೇಗೆ ವಕ್ರವಾಗಿರುತ್ತವೆ,ಎದುರಾಳಿ ವಕೀಲರು ಹೇಗೆಲ್ಲ ಕಾರ್ಯತಂತ್ರ ಅಳವಡಿಸಿಕೊಳ್ಳುತ್ತಾರೆ ಮತ್ತು ಮಾಧ್ಯಮಗಳು ಹೇಗೆಲ್ಲ ತಿರುಚಿ ವರದಿಗಳನ್ನು ಮಾಡುತ್ತವೆ ಎನ್ನುವುದನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದರು.

ಅಂತಿಮವಾಗಿ ಮಕ್ಕಳನ್ನು ತಂದೆಯ ವಶಕ್ಕೆ ನೀಡುವಂತೆ ಆದೇಶ ಹೊರಬಿದ್ದಾಗ ಮತ್ತು ಅವರನ್ನು ವಿದೇಶಕ್ಕೆ ಕರೆದೊಯ್ಯಲು ನ್ಯಾಯಾಲಯವು ಅನುಮತಿ ನೀಡಿದಾಗ ನ್ಯಾ.ಸುರೇಶ್ ಸಂಪೂರ್ಣವಾಗಿ ಕುಸಿದು ಹೋಗಿದ್ದರು. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಅವರ ವಿಶ್ವಾಸಕ್ಕೆ ಕುಂದುಂಟಾಗಿರಲಿಲ್ಲ ಮತ್ತು ಅವರು ತನ್ನ ಹೋರಾಟದ ಜೀವನವನ್ನು ಮುಂದುವರಿಸಿದ್ದರು. ಅವರು ಸಾಧಾರಣ ವ್ಯಕ್ತಿಯಾಗಿರಲಿಲ್ಲ. ಹಲವಾರು ಹಿರಿಯ ನ್ಯಾಯವಾದಿಗಳ ಬೇಷರತ್ ಬೆಂಬಲ ಅವರಿಗಿತ್ತು. ಕೌಟುಂಬಿಕ ಹಿಂಸೆಯ ಬಲಿಪಶುಗಳಾಗಿರುವ ಸಾಮಾನ್ಯ ಮಧ್ಯಮ ಮತ್ತು ದುಡಿಯುವ ವರ್ಗಗಳ ಮಹಿಳೆಯರು ಕುಟುಂಬ ನ್ಯಾಯಾಲಯಗಳಲ್ಲಿ ಅನುಭವಿಸುವ ಯಾತನೆಗಳ ಸ್ಪಷ್ಟ ಚಿತ್ರಣ ಅವರಿಗಿತ್ತು. ಇಂತಹ ಅನುಭವಗಳು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಮಜ್ಲಿಸ್‌ನ ವಕೀಲರ ಬಗ್ಗೆ ಅವರ ಗೌರವಗಳನ್ನು ಹೆಚ್ಚಿಸಿದ್ದವು.

ಕಾನೂನು ಕ್ಷೇತ್ರದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ವೃತ್ತಿಯಲ್ಲಿ ಹಿರಿಯ ವ್ಯಕ್ತಿಯಾಗಿದ್ದರೂ ನ್ಯಾ.ಸುರೇಶ್ ಅವರು ಸರಳತೆಯೇ ಮೂರ್ತಿವೆತ್ತಂತಿದ್ದರು. ತಾನು ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂಬ ಅಹಂ ಅವರಲ್ಲಿರಲಿಲ್ಲ. ಯುವ ನ್ಯಾಯವಾದಿಗಳು ಮತ್ತು ಇಂಟರ್ನಿಗಳೊಂದಿಗೆ ಮುಕ್ತವಾಗಿ ಸಂವಾದಿಸುತ್ತಿದ್ದರು ಮತ್ತು ಅವರಿಗೆ ಅಗತ್ಯ ಮಾರ್ಗದರ್ಶನ, ಸಲಹೆಗಳನ್ನು ನೀಡುತ್ತಿದ್ದರು.

ಸೈಂಟ್ ಮಾರ್ಟಿನ್ಸ್ ರಸ್ತೆಯ ತನ್ನ ನಿವಾಸ ಬಿಲ್ಡರ್‌ಗಳಿಗೆ ಮಾರಾಟವಾದಾಗ ಬಂದ ಮೊತ್ತ ಸಂಪೂರ್ಣವಾಗಿ ತನಗೇ ಸೇರಬೇಕೆಂದು ಬಯಸಿದ್ದ ಮಗ ತನ್ನ ಸೋದರಿಯರಿಗೆ ಪಾಲು ನೀಡಲು ನಿರಾಕರಿಸಿದ್ದಾಗ ನ್ಯಾ.ಸುರೇಶ್ ಅವರು ಸ್ವಂತ ಮಗನ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಕೊನೆಗೂ ಸಂಧಾನದಲ್ಲಿ ಶೇ.50ರಷ್ಟು ಹಣ ಮಗನಿಗೆ ಮತ್ತು ಶೇ.50ರಷ್ಟು ಹಣ ನ್ಯಾ.ಸುರೇಶ್ ಅವರಿಗೆ ಸೇರಬೇಕು ಎಂದು ಇತ್ಯರ್ಥವಾಗಿತ್ತು. ಈ ಕಾನೂನು ಸಮರ ಅವರಿಗೆ ತೀವ್ರ ಮಾನಸಿಕ ಯಾತನೆಯನ್ನುಂಟು ಮಾಡಿತ್ತು,ಅವರು ದೈಹಿಕ ಅನಾರೋಗ್ಯಕ್ಕೂ ಗುರಿಯಾಗಿದ್ದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯುವ ಮತ್ತು ತನ್ನ ವೌಲ್ಯಯುತ ಚಿಂತನೆಗಳನ್ನು ತೊರೆಯುವ ವ್ಯಕ್ತಿ ಅವರಾಗಿರಲಿಲ್ಲ. ಇಂತಹ ದೃಢವಾದ ನೈತಿಕ ಸ್ಥೈರ್ಯವನ್ನು ಹೊಂದಿರುವ ವ್ಯಕ್ತಿಗಳು ನಮಗೆ ಕಾಣಸಿಗುವುದು ಅಪರೂಪ ಎಂದೇ ಹೇಳಬೇಕು.

ನಾನು ನ್ಯಾ.ಸುರೇಶ್ ಅವರನ್ನು ನನ್ನ ಗುರು,ಮಾರ್ಗದರ್ಶಿ ಎಂದು ಗೌರವಿಸುತ್ತೇನೆ. ಅವರು ನನ್ನನ್ನು ತನ್ನ ಸ್ವಂತ ಪುತ್ರಿಯಂತೆ ನೋಡಿಕೊಂಡಿದ್ದರು ಮತ್ತು ತನ್ನ ಕುಟುಂಬದ ಸದಸ್ಯೆ ಎಂದೇ ಪರಿಗಣಿಸಿದ್ದರು. ಮಜ್ಲಿಸ್ ಲೀಗಲ್ ಸೆಂಟರ್ ಅತ್ಯಂತ ಕೆಟ್ಟ ಸವಾಲು ಎದುರಿಸುತ್ತಿದ್ದಾಗಲೂ ನ್ಯಾ.ಸುರೇಶ್ ಅದರ ಬೆನ್ನಿಗೆ ಬಂಡೆಯಂತೆ ನಿಂತಿದ್ದರು. ಲೀಗಲ್ ಸೆಂಟರ್ ಮತ್ತು ಅದರ ಪದಾಧಿಕಾರಿಗಳ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಎದುರಿಸುವ ನೈತಿಕ ಬಲ ಅವರಲ್ಲಿತ್ತು. ಅವರಿಂದಾಗಿ ಲೀಗಲ್ ಸೆಂಟರ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಮತ್ತು ಇದಕ್ಕಾಗಿ ನಾನು ಅವರಿಗೆ ಚಿರಋಣಿಯಾಗಿದ್ದೇನೆ.

ನ್ಯಾ.ಸುರೇಶ್ ಕೊನೆಯವರೆಗೂ ಕ್ರಿಯಾಶೀಲರಾಗಿ ಬದುಕಿದ್ದರು. ಮಾ.7ರಂದು ಮುಂಬೈ ವಿವಿಯಲ್ಲಿ ಪ್ರತಿಷ್ಠಿತ ಎಂ.ಸಿ.ಛಗ್ಲಾ ಸ್ಮಾರಕ ಉಪನ್ಯಾಸ ಅವರು ಮಾಡಿದ್ದ ಕೊನೆಯ ಸಾರ್ವಜನಿಕ ಭಾಷಣವಾಗಿತ್ತು. ದೈಹಿಕವಾಗಿ ದುರ್ಬಲರಾಗಿದ್ದರೂ ಮಾನಸಿಕವಾಗಿ ಎಂದಿನ ಹರಿತವನ್ನು ಉಳಿಸಿಕೊಂಡಿದ್ದ ಅವರು ಭಾರತದಲ್ಲಿ ಮಾನವ ಹಕ್ಕುಗಳ ಏಳು ದಶಕಗಳು,ಅದರ ಯಶಸ್ಸುಗಳು ಮತ್ತು ಸೋಲುಗಳ ಬಗ್ಗೆ ಅದ್ಭುತವಾಗಿ ಮಾತನಾಡಿದ್ದರು. ಅತ್ಯಂತ ಹೆಚ್ಚಿನ ನಿರೀಕ್ಷೆಗಳೊಂದಿಗೆ ಸ್ಥಾಪನೆಯಾಗಿದ್ದ ವಿವಿಧ ಸಂಸ್ಥೆಗಳು ಇಂದು ಕೇವಲ ಸಾಂಕೇತಿಕ ವ್ಯವಸ್ಥೆಗಳ ಮಟ್ಟಕ್ಕೆ ಇಳಿದಿರುವ ಬಗ್ಗೆ ನೋವು ತೋಡಿಕೊಂಡಿದ್ದರು. ಸರ್ವೋಚ್ಚ ನ್ಯಾಯಾಲಯದ ವ್ಯವಹಾರಗಳ ಪ್ರಚಲಿತ ಸ್ಥಿತಿ ಅವರನ್ನು ಭ್ರಮ ನಿರಸನರಾಗಿ ಮಾಡಿರುವಂತಿತ್ತು. ನ್ಯಾ.ಸುರೇಶ್ ಅವರು ಬಿಟ್ಟು ಹೋಗಿರುವ ಪರಂಪರೆಯನ್ನು ಅವರೊಂದಿಗೆ ಕೆಲಸ ಮಾಡಿದ್ದವರು ಮತ್ತು ಅವರ ಬಗ್ಗೆ ಅತ್ಯಂತ ಗೌರವವನ್ನು ಹೊಂದಿರುವವರು ಮುಂದುವರಿಸುತ್ತಾರೆ ಎಂದು ನಾನು ಆಶಿಸಿದ್ದೇನೆ. ಆದರೆ ನಮಗೆ ಗೊತ್ತು,ಮಜ್ಲಿಸ್ ಲೀಗಲ್ ಸೆಂಟರ್‌ನಲ್ಲಿ ಅವರ ನಿಧನದಿಂದಾಗಿ ಉಂಟಾಗಿರುವ ತೆರವನ್ನು ಯಾರೂ ತುಂಬಲು ಸಾಧ್ಯವಿಲ್ಲ.

(ಫ್ಲೇವಿಯ ಆ್ಯಗ್ನೆಸ್ ಅವರು ಮಜ್ಲಿಸ್ ಲೀಗಲ್ ಸೆಂಟರ್‌ನ ಸ್ಥಾಪಕರು)
ಕೃಪೆ: thewire.in

Writer - ಫ್ಲೇವಿಯ ಆ್ಯಗ್ನೆಸ್

contributor

Editor - ಫ್ಲೇವಿಯ ಆ್ಯಗ್ನೆಸ್

contributor

Similar News