ಹುತಾತ್ಮರನ್ನು ಗೌರವಿಸುವಂತೆ ಪ್ರಧಾನಿ, ರಾಷ್ಟ್ರಪತಿಗೆ ಮೇಜರ್ ಅನುಜ್ ಸೂದ್ ತಂದೆಯ ಅಹವಾಲು

Update: 2020-06-19 18:15 GMT

ಹೊಸದಿಲ್ಲಿ,ಜೂ.19: ಜಮ್ಮು-ಕಾಶ್ಮೀರದ ಹಂದ್ವಾರಾದಲ್ಲಿ ಮೇ 3ರಂದು ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿರುವ ಐವರು ಯೋಧರಲ್ಲೋರ್ವರಾದ ಮೇಜರ್ ಅನುಜ್ ಸೂದ್ ಅವರ ತಂದೆ ನಿವೃತ್ತ ಬ್ರಿಗೇಡಿಯರ್ ಸಿ.ಕೆ.ಸೂದ್ ಅವರು,ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವ ವೀರರಿಗೆ ಸೂಕ್ತ ಗೌರವಗಳನ್ನು ದೊರಕಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಉದ್ದೇಶಿಸಿ ‘ಚೇಂಜ್ ಡಾಟ್ ಆರ್ಗ್ ’ ಅಹವಾಲನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘

ಭಾರತಕ್ಕಾಗಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡುವ ಕೆಚ್ಚೆದೆಯ ವೀರರನ್ನು ಒಮ್ಮೆ ಟ್ವೀಟ್‌ನಲ್ಲಿ ಪ್ರಸ್ತಾಪಿಸಲಾಗುತ್ತದೆ,ನಂತರ ಅವರನ್ನು ಶಾಶ್ವತವಾಗಿ ಮರೆಯಲಾಗುತ್ತದೆ ’ಎಂಬ ಸಾಲಿನೊಂದಿಗೆ ಆರಂಭಗೊಂಡಿರುವ ಈ ಅಹವಾಲನ್ನು ಮೂರು ದಿನಗಳ ಹಿಂದಷ್ಟೇ ಪೋಸ್ಟ್ ಮಾಡಲಾಗಿದ್ದು,ಈಗಾಗಲೇ ಸುಮಾರು 20,000 ಅಂಕಿತಗಳು ದೊರಕಿವೆ.

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ ಯೋಧರ ತ್ಯಾಗವನ್ನು ಗುರುತಿಸುವಂತೆ ಸರಕಾರ ಮತ್ತು ಅಧಿಕಾರಿಗಳನ್ನು ಈ ಅಹವಾಲು ಆಗ್ರಹಿಸಿದೆ.

 “ಕೇವಲ ಟ್ವೀಟ್ ಮಾಡಿದರಷ್ಟೇ ಸಾಲದು. ಅವರ ಹೆಸರುಗಳನ್ನು ಹೇಳಿ. ಅವರ ತ್ಯಾಗಗಳನ್ನು ಅಂಗೀಕರಿಸಿ. ನಿಂತು ವೌನವನ್ನು ಆಚರಿಸಿ ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಿ. ನಮ್ಮ ‘ಹೀರೊ’ಗಳು ಇನ್ನೂ ಹೆಚ್ಚಿನದಕ್ಕೆ ಅರ್ಹರಾಗಿದ್ದಾರೆ. ಅದಕ್ಕೆ ಆರಂಭವೊಂದನ್ನು ಮಾಡೋಣ. ವೀರಯೋಧರ ಕುಟುಂಬಗಳು ತಮ್ಮ ಧೀರ ಪುತ್ರರು ಮತ್ತು ಗಂಡಂದಿರ ತ್ಯಾಗಗಳನ್ನು ಪುರಸ್ಕರಿಸಿ ಪ್ರಧಾನಿ ಕಚೇರಿ/ರಾಷ್ಟ್ರಪತಿಗಳ ಕಚೇರಿಯಿಂದ ಪತ್ರವೊಂದನ್ನು ಸ್ವೀಕರಿಸುವಂತಾಗಲು ದಯವಿಟ್ಟು ನನ್ನ ಈ ಅಹವಾಲಿಗೆ ಸಹಿ ಮಾಡಿ” ಎಂದು ಸೂದ್ ಕೋರಿದ್ದಾರೆ.

 ಕೋವಿಡ್-19 ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಭಾರತೀಯ ವಾಯುಪಡೆಯು ‘ಫ್ಲೈ-ಪಾಸ್ಟ್’ನೊಂದಿಗೆ ಗೌರವ ಸಲ್ಲಿಸಿದ್ದನ್ನು ಬೆಟ್ಟು ಮಾಡಿರುವ ಅಹವಾಲು,ಹುತಾತ್ಮರಿಗಾಗಿ ಇಂತಹ ಫ್ಲೈ-ಪಾಸ್ಟ್‌ಗಳೆಂದೂ ನಡೆದಿಲ್ಲ, ಅವರ ಗೌರವಾರ್ಥ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿಲ್ಲ,ರಾಷ್ಟ್ರೀಯ ಶೋಕಾಚರಣೆಯಿಲ್ಲ,ನಮ್ಮ ಕೆಚ್ಚೆದೆಯ ಯೋಧರನ್ನು ವಂದಿಸಿ ಟೆಲಿಕಾಸ್ಟ್ ಕೂಡ ಇಲ್ಲ ಎಂದಿದೆ.

‘ದೇಶಕ್ಕಾಗಿ ಜೀವ ತೆತ್ತ ಯೋಧರನ್ನು ಗೌರವಿಸಲು ಪ್ರಮಾಣಿತ ರಾಷ್ಟ್ರೀಯ ಶಿಷ್ಟಾಚಾರವೊಂದನ್ನು ನಾವು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಪೂರ್ವ ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾಗಿರುವ ಯೋಧರ ಕುಟುಂಬಗಳಿಗೆ ದೇಶದ ಅತ್ಯುನ್ನತ ನಾಯಕರಿಂದ ಪತ್ರವು ಉತ್ತಮ ಆರಂಭವಾಗಲಿದೆ ಎಂದು ಅಹವಾಲಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News