ಉಗ್ರರಿಗೆ ಎಂ4 ರೈಫಲ್ ಸೇರಿ ಶಸ್ತಾಸ್ತ್ರಗಳನ್ನು ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ

Update: 2020-06-20 08:35 GMT

ಶ್ರೀನಗರ್: ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ  ಡ್ರೋನ್ ಒಂದನ್ನು ಜಮ್ಮು ಕಾಶ್ಮೀರದ ಕಥುವಾ ಸಮೀಪ ಗಡಿ ಭದ್ರತಾ ಪಡೆಗಳು ಇಂದು ಹೊಡೆದುರುಳಿಸಿವೆ. 

ಈ ಡ್ರೋನ್‍ ನಲ್ಲಿ  ಒಂದು ಅಮೆರಿಕಾ ನಿರ್ಮಿತ ಎಂ4 ರೈಫಲ್, ಎರಡು ಮ್ಯಾಗಝಿನ್ ಹಾಗೂ ಇತರ ಶಸ್ತ್ರಾಸ್ತ್ರಗಳಿದ್ದವು. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ  ಉಗ್ರರಿಗಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸುವ ಯತ್ನವಾಗಿ ಈ ಡ್ರೋನ್  ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“ಈ ಶಸ್ತ್ರಾಸ್ತ್ರಗಳನ್ನು ಆಲಿ ಭಾಯಿ ಎಂಬ ಉಗ್ರನಿಗೆ  ನೀಡಲು ಸಾಗಿಸಲಾಗುತ್ತಿತ್ತು. ಡ್ರೋನ್‍ ನಲ್ಲಿ  ಆತನ ಹೆಸರಿತ್ತು. ಈ ಡ್ರೋನ್  ಎಂಟು ಅಡಿ ಅಗಲವಿತ್ತು ಹಾಗೂ ಕಥುವಾ ಸೆಕ್ಟರ್ ಸಮೀಪದ ಪಾನೇಸರ್ ಪೋಸ್ಟ್‍ನ ವಿರುದ್ಧ ದಿಕ್ಕಿನಲ್ಲಿರುವ ಪಾಕಿಸ್ತಾನಿ ಪಿಕೆಟ್‍ ನಿಂದ ಅದನ್ನು ನಿಯಂತ್ರಿಸಲಾಗುತ್ತಿತ್ತು'' ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ 5.10ರ ಸುಮಾರಿಗೆ ಈ ಡ್ರೋನ್ ಭಾರತೀಯ ಭೂಭಾಗದಲ್ಲಿ 250 ಮೀಟರ್‍ನಷ್ಟು ಒಳಕ್ಕೆ ಬಂದಿದ್ದನ್ನು ಗಮನಿಸಿ ಒಂಬತ್ತು ಸುತ್ತು ಗುಂಡು ಹಾರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News