‘ಪೆಂಗ್ವಿನ್: ಕಿರುಪರದೆಯಲ್ಲೇ ನೋಡಿ ಒಂದು ಅಪಹರಣದ ಚಿತ್ರ!

Update: 2020-06-20 17:31 GMT

 ಪೆಂಗ್ವಿನ್ ತನ್ನ ಮರಿಯನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದಂತೆ. ಬಹುಶಃ ಅದೇ ಕಾರಣದಿಂದಲೇ ಈ ಚಿತ್ರಕ್ಕೆ ‘ಪೆಂಗ್ವಿನ್’ ಎಂದು ಹೆಸರಿಡಲಾಗಿದೆ. ತಮಿಳು ಮತ್ತು ತೆಲುಗಿನಲ್ಲಿ ಮೂಡಿ ಬಂದಿರುವ ಪೆಂಗ್ವಿನ್ ಚಿತ್ರದ ಬಗ್ಗೆ ನಿರೀಕ್ಷೆ ಮೂಡಲು ಮೊದಲ ಕಾರಣ, ಚಿತ್ರದ ನಾಯಕಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್. ಎರಡನೆಯ ಕಾರಣ ‘ಪಿಜಾ’ದಂತಹ ಚಿತ್ರ ನೀಡಿರುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ಮಿಸಿರುವ ಸಿನಿಮಾ ಇದು. ಈ ಎರಡೂ ನಿರೀಕ್ಷೆಗಳೊಂದಿಗೆ ಚಿತ್ರ ನೋಡಿದರೆ ಎಲ್ಲೋ ಒಂದಷ್ಟು ನಿರಾಶೆ ಸಹಜ. ಯಾವುದೇ ನಿರೀಕ್ಷೆ ಇರದೆ ಇದ್ದಾಗ ಸಮಯ ಕಳೆಯಲು ನೋಡಬಹುದಾದ ಉತ್ತಮ ಚಿತ್ರ ಪೆಂಗ್ವಿನ್.

ಚಿತ್ರದಲ್ಲಿ ನಾಯಕಿಯ ಹೆಸರು ರಿದಮ್. ಆಕೆ ತುಂಬು ಗರ್ಭಿಣಿ. ಆರು ವರ್ಷಗಳಿಂದ ಆಕೆ ತನ್ನ ಕಳೆದು ಹೋಗಿರುವ ಪುಟ್ಟ ಕಂದ ಅಜಯ್‌ನ ಹುಡುಕಾಟದಲ್ಲಿರುತ್ತಾಳೆ. ಆ ಮಗುವನ್ನು ಕೊಡೈಕನಾಲ್ ನ ಸರೋವರ ತೀರದಲ್ಲಿ ಕಳೆದುಕೊಂಡಿರುತ್ತಾಳೆ. ಕಳೆದುಕೊಂಡಿದ್ದಾಳೆ ಎನ್ನುವುದಕ್ಕಿಂತ ಚಾರ್ಲಿ ಚಾಪ್ಲಿನ್ ಮುಖವಾಡ ಧಾರಿಯಾದ ಯಾರೋ ಒಬ್ಬರು ಅಪಹರಿಸಿದ್ದಾರೆ ಎನ್ನುವುದು ಆಕೆಗೆ ಗೊತ್ತಾಗುತ್ತದೆ. ಆದರೆ ವರ್ಷಗಳೆಷ್ಟೇ ಕಳೆದರೂ, ಆ ಮಗು ಎಲ್ಲೋ ಒಂದು ಕಡೆ ಬದುಕಿದೆ ಎನ್ನುವ ನಂಬಿಕೆ ರಿದಮ್ ಳ ಒಳಗಿರುತ್ತದೆ. ಆ ನಂಬಿಕೆ ನಿಜವಾದಂತೆ, ಅದೇ ಸರೋವರದ ದಾರಿಯಲ್ಲಿ ಆಕೆಯ ಮುಂದೆ ಅಜಯ್ ಪ್ರತ್ಯಕ್ಷನಾಗುತ್ತಾನೆ. ಆತ ಅದುವರೆಗೆ ಎಲ್ಲಿದ್ದ? ಆ ಮಗುವನ್ನು ಕಳೆದುಕೊಂಡಿದ್ದಕ್ಕಾಗಿ ರಿದಮ್ ಬಾಳಲ್ಲಿ ನಡೆದ ಏಳು ಬೀಳುಗಳೇನು? ಅಜಯ್ ವಾಪಸಾದರೂ ಆತನನ್ನು ಮತ್ತೆ ಅಪಹರಿಸಲು ಪ್ರಯತ್ನಿಸುತ್ತಿರುವವರು ಯಾರು? ಎನ್ನುವ ಕುತೂಹಲಗಳ ನಿವಾರಣೆಗಾಗಿ ಸ್ವತಃ ಚಿತ್ರ ನೋಡುವುದು ಉತ್ತಮ. ಪ್ರಸ್ತುತ ಚಿತ್ರವು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.

 ರಿದಮ್ ಪಾತ್ರದಲ್ಲಿ ತುಂಬು ಗರ್ಭಿಣಿಯಾಗಿ ಮತ್ತು ಪ್ರೇಮಮಯಿ ತಾಯಿಯಾಗಿ ಕೀರ್ತಿ ಸುರೇಶ್ ಅವರನ್ನು ತೋರಿಸಲಾಗಿದೆ. ಆದರೆ ಅದರಾಚೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಮಗನಿಗಾಗಿ ಪತ್ತೆದಾರಿ ಕೆಲಸವನ್ನು ಕೂಡ ಆಕೆಯೇ ಮಾಡುತ್ತಾಳೆ ಎನ್ನುವಂತೆ ಬಿಂಬಿಸಿರುವುದನ್ನು ನಂಬಲು ಕಷ್ಟವಾಗುತ್ತದೆ. ವೈದ್ಯರು ಎಚ್ಚರಿಕೆ ನೀಡಿದ್ದರೂ, ಮಗು ನಾಪತ್ತೆಯಾಗಿದ್ದ ಸರೋವರದೆಡೆಗೆ ರಾತ್ರಿ ಹೊತ್ತಲ್ಲಿ ಹೋಗುವುದು, ಮಗುವನ್ನು ಮನೆಗೆ ತಂದ ಮೇಲೆಯೂ ಆತನ ಮೇಲೆ ಹಲ್ಲೆಯಾಗುವುದನ್ನು ಒಬ್ಬ ಡಿಟೆಕ್ಟಿವ್ ರೇಂಜಲ್ಲಿ ನಿರೀಕ್ಷೆ ಮಾಡಿ ಕಾಯುವುದು ವಾಸ್ತವಕ್ಕಿಂತ ತುಂಬ ದೂರದ ವಿಚಾರ. ಮಾತ್ರವಲ್ಲ, ಪ್ರಸವಕ್ಕೆ ಸನಿಹವಾಗಿರುವ ತಾಯಿಯನ್ನು ಅಪಹೃತಗೊಂಡು ಮರಳಿದ ಮಗುವಿನೊಂದಿಗೆ ಹೊರಗೆ ಸುತ್ತಾಡಲು ಬಿಡುತ್ತಾರೆ. ಶ್ರೀಮಂತರ ಮನೆಯಾದರೂ, ಅವರೊಂದಿಗೆ ಅಂಗರಕ್ಷಕರು ಇರುವುದಿಲ್ಲ! ಆದರೆ ಸೈರಸ್ ಎನ್ನುವ ನಾಯಿಯನ್ನು ಜತೆಗೆ ಕರೆದುಕೊಂಡು, ಪ್ರೊಫೆಷನಲ್ ಡಿಟೆಕ್ಟಿವ್ ಹಾಗೆ ಆ ಮಹಾ ತಾಯೊಬ್ಬಳೇ ತನಿಖೆಗೆ ಹೊರಡುತ್ತಾಳೆ. ಇದೆಲ್ಲಕ್ಕೆ ಕಳಶವಿಟ್ಟಂತೆ ಕ್ಲೈಮ್ಯಾಕ್ಸ್‌ನಲ್ಲಿ ಅಪರಾಧಿ ದೊರಕಿದಾಗ ಆತನ ವಿಚಾರಣೆಯಲ್ಲಿ ರಿದಮ್ ಅನ್ನು ಕೂರಿಸಿ, ಆಕೆಯಿಂದಲೇ ಆತನ ಹೇಳಿಕೆ ಪಡೆಯುತ್ತಾರೆ.

ಬಹುಶಃ ನಿರ್ದೇಶಕರು ನಟಿಯಿಂದ ನಟನೆ ತೆಗೆಸುವ ಜತೆಗೆ ಸ್ಟಾರ್ ಇಮೇಜ್‌ಗೆ ಧಕ್ಕೆಯಾಗಬಾರದು ಎನ್ನುವ ಪ್ರಯತ್ನ ಕೂಡ ಮಾಡಿದಂತಿದೆ. ಕೀರ್ತಿ ಸುರೇಶ್ ಚಿತ್ರದುದ್ದಕ್ಕೂ ಮ್ಲಾನ ವದನೆಯಾಗಿದ್ದು, ಪ್ರೇಕ್ಷಕರಲ್ಲಿ ತುಸು ಆತಂಕದ ಸೃಷ್ಟಿಗೆ ಕಾರಣವಾಗಿದ್ದಾರೆ. ಉಳಿದಂತೆ ಬೆಳ್ಳಿತೆರೆಗೆ ಹೆಚ್ಚು ಪರಿಚಿತರಲ್ಲದ ಕಲಾವಿದರನ್ನು ಬಳಸಿಕೊಂಡು, ಯಾರನ್ನು ಸಂದೇಹಿಸಬೇಕು ಎನ್ನುವ ಗೊಂದಲ ಕಾಡುವಂತಹ ವಾತಾವರಣ ಸೃಷ್ಟಿಸಲಾಗಿದೆ. ರಿದಮ್ ಪುತ್ರ ಅಜಯ್‌ನಾಗಿ ಮಾಸ್ಟರ್ ಅದ್ವೈತ್ ನಟನೆ ಅಮೋಘ. ಚಿತ್ರದಲ್ಲಿ ಅಪಹರಣಕ್ಕೆ ಎರಡು ಕಾರಣಗಳನ್ನು ತೋರಿಸಲಾಗಿದೆ.

ಅದರಲ್ಲಿ ಒಂದು ತೆಲುಗಿನ ‘ಅಶ್ವತ್ಥಾಮ’ ಚಿತ್ರದಲ್ಲಿದ್ದರೆ ಮತ್ತೊಂದು ಕನ್ನಡದ ‘ಜಂಟ್ಲಮನ್’ ಚಿತ್ರದಲ್ಲಿ ತೋರಿಸಲಾದ ಕಾರಣವನ್ನು ಹೋಲುತ್ತದೆ. ಹಾಗಾಗಿ ಚಿತ್ರದ ಮೂಲಕ ಹೊಸದಾಗಿ ಏನನ್ನೂ ಹೇಳಲಾಗಿಲ್ಲ. ಛಾಯಾಗ್ರಹಣ ಆಪ್ತವೆನಿಸುತ್ತದೆ. ನಿರ್ದೇಶಕ ಈಶ್ವರ್ ಕಾರ್ತಿಕ್ ಪ್ರಥಮ ಪ್ರಯತ್ನದಲ್ಲಿ ನಿರೀಕ್ಷೆ ಮೂಡಿಸಬಲ್ಲ ನಿರ್ದೇಶಕರಾಗಿ ಹೊಮ್ಮಿದ್ದಾರೆ. ಹಲವಾರು ಬಾರಿ ಇಂತಹದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಸಿನೆಮಾ ಮಂದಿರದಲ್ಲೇ ನೋಡುವುದು ಸೊಗಸು ಅನಿಸದಿರದು. ಆದರೆ ಸದ್ಯಕ್ಕೆ ಥಿಯೇಟರ್ ಗಳನ್ನು ತೆರೆಯುವಂತಿಲ್ಲವಾದ ಕಾರಣ ಕಿರು ಪರದೆಯಲ್ಲಿ ನೋಡಿ ತೃಪ್ತಿಪಟ್ಟುಕೊಳ್ಳಬಹುದು.

ತಾರಾಗಣ: ಕೀರ್ತಿ ಸುರೇಶ್, ಅದ್ವೈತ್
ನಿರ್ದೇಶನ: ಈಶ್ವರ್ ಕಾರ್ತಿಕ್
ನಿರ್ಮಾಣ: ಕಾರ್ತಿಕ್ ಸುಬ್ಬರಾಜು

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News