ಫ್ಯಾಕ್ಟ್ ಚೆಕ್: ರಾಹುಲ್ ಗಾಂಧಿಗೆ ‘ಧನ್ಯವಾದ’ ಹೇಳಿದ್ದ ‘ಚೀನಿ ಪತ್ರಕರ್ತ’ನ ಟ್ವಿಟರ್ ಖಾತೆಯ ಹಿಂದಿನ ಅಸಲಿಯತ್ತೇನು?

Update: 2020-06-21 12:30 GMT

ಗಲ್ವಾನ್ ನಲ್ಲಿ ಭಾರತೀಯ ಯೋಧರು ಹುತಾತ್ಮರಾದ ಘಟನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆಗಳನ್ನು ಟ್ವೀಟಿಸಿದ್ದ ‘ಚೀನಿ ಪತ್ರಕರ್ತ ’ನ ಟ್ವಿಟರ್ ಖಾತೆ ನಕಲಿ ಎನ್ನುವುದು ಬಯಲಾಗಿದೆ.

ಪೂರ್ವ ಲಡಾಖ್‌ ನ ಗಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಚೀನಿ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಗಳಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಸುದ್ದಿ ಜೂ.16ರಂದು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿತ್ತು. ಈ ದುರಂತ ಘಟನೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ದಾಳಿಯನ್ನು ನಡೆಸಿತ್ತು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಹುತಾತ್ಮ ಯೋಧರಿಗೆ ತಾನು ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ನೊಂದು ಟ್ವೀಟ್ ‌ನಲ್ಲಿ ಅವರು ಯೋಧರ ಸಾವುಗಳ ಕುರಿತು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದರು. ಪ್ರಧಾನಿ ವಿರುದ್ಧವೂ ದಾಳಿ ನಡೆಸಿದ್ದ ರಾಹುಲ್, “ಪ್ರಧಾನಿಯೇಕೆ ಮೌನವಾಗಿದ್ದಾರೆ?, ಅವರೇಕೆ ಬಚ್ಚಿಟ್ಟುಕೊಳ್ಳುತ್ತಿದ್ದಾರೆ?, ಈಗಾಗಲೇ ಸಾಕಷ್ಟಾಗಿದೆ. ಏನು ಸಂಭವಿಸಿತ್ತು ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ನಮ್ಮ ಯೋಧರನ್ನು ಕೊಲ್ಲಲು ಚೀನಾಕ್ಕೆಷ್ಟು ಧೈರ್ಯ? ನಮ್ಮ ಭೂಪ್ರದೇಶವನ್ನು ಕಿತ್ತುಕೊಳ್ಳಲು ಅವರಿಗೆಷ್ಟು ಧೈರ್ಯ?” ಎಂದು ಟ್ವೀಟಿಸಿದ್ದರು.

ಜೂ.17ರಂದು ಟ್ವಿಟರ್‌ ನ ‘ಚೀನಿ ಬಳಕೆದಾರನೋರ್ವ’ ರಾಹುಲ್‌ ಗೆ ಈ ಬಗ್ಗೆ ಟ್ವೀಟ್ ಮಾಡಿ ‘ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ’ ಅವರಿಗೆ ಥ್ಯಾಂಕ್ಸ್ ಹೇಳಿದ್ದ. “ನೀವು ಅಲ್ಲಿರುವವರೆಗೂ ನಾವು ಚಿಂತಿಸಬೇಕಿಲ್ಲ” ಎಂದೂ ಆತ ಟ್ವೀಟ್‌ ನಲ್ಲಿ ಬರೆದಿದ್ದ. ಬಳಕೆದಾರ ಲಿ ಜೀ (ಟ್ವಿಟರ್ ಹ್ಯಾಂಡಲ್ ಲಿಜೆಂಗ್) ತನ್ನನ್ನು ಚೀನಾದ ‘ಗ್ಲೋಬಲ್ ನ್ಯೂಸ್‌’ ನ ಪತ್ರಕರ್ತ ಎಂದು ಗುರುತಿಸಿಕೊಂಡಿದ್ದ.

ಈ ಟ್ವೀಟ್ ಹಲವರನ್ನು ಅಚ್ಚರಿಗೆ ಕೆಡವಿತ್ತು. ಪ್ರಸಕ್ತ ವಾತಾವರಣದಲ್ಲಿ ಚೀನಿ ಪ್ರಜೆಯೋರ್ವ ರಾಹುಲ್‌ರನ್ನು ಪ್ರಶಂಸಿಸಿದ್ದು ಭಾರೀ ಮಹತ್ವವನ್ನು ಪಡೆದುಕೊಂಡಿತ್ತು. ‘ಚೀನಿ ಪತ್ರಕರ್ತ’ನ ಟ್ವೀಟ್ ನ ಅಸಲಿಯತ್ತು ಕಂಡು ಹಿಡಿಯಲು ಸುದ್ದಿ ಜಾಲತಾಣ ‘Altnews.in’ ತನಿಖೆಗಿಳಿದಿತ್ತು.

ವಿಕಾಸ ಪಾಂಡೆ ಎಂಬಾತ ಈ ಟ್ವೀಟ್‌ ನ್ನು ಪ್ರಥಮವಾಗಿ ರಿಟ್ವೀಟ್ ಮಾಡಿದ್ದ. ಪಾಂಡೆ ಟ್ವಿಟರ್‌ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ ‌ಗಳನ್ನು ಹೊಂದಿದ್ದು, ಫೇಸ್‌ ಬುಕ್‌ ನಲ್ಲಿ ತಪ್ಪು ಮಾಹಿತಿಗಳು ಮತ್ತು ಬಿಜೆಪಿ ಪರ ಪ್ರಚಾರಕ್ಕೆ ಮೀಸಲಾಗಿರುವ ‘ಐ ಸಪೋರ್ಟ್ ನರೇಂದ್ರ ಮೋದಿ’ ಎಂಬ ಪೇಜ್‌ನ್ನು ನಿರ್ವಹಿಸುತ್ತಿದ್ದಾನೆ. ಈ ಪೇಜ್ 16 ಲಕ್ಷಕ್ಕೂ ಅಧಿಕ ಫಾಲೋವರ್‌ ಗಳನ್ನು ಹೊಂದಿದೆ.

‘ಚೀನಿ ಪತ್ರಕರ್ತ’ನ ಖಾತೆಯನ್ನು 2020, ಜೂನ್ ‌ನಲ್ಲಿ ಸೃಷ್ಟಿಸಲಾಗಿತ್ತು ಎನ್ನುವ ಅಂಶ ಈ ಖಾತೆಯ ಹಿಂದಿನ ಕಿಲಾಡಿತನದ ಮೊದಲ ಸುಳಿವನ್ನು ನೀಡಿತ್ತು. ಈ ವ್ಯಕ್ತಿ ಜೂ.17ರಂದು ರಾಹುಲ್‌ ಗೆ ಟ್ವೀಟ್ ಮಾಡಿದ್ದ ಮತ್ತು ಅದಕ್ಕೂ ಮೊದಲು ಈ ಖಾತೆಯಿಂದ ಯಾವುದೇ ಟ್ವೀಟ್‌ ಗಳು ಪೋಸ್ಟ್ ಆಗಿರಲಿಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿತ್ತು. ಅಲ್ಲದೆ ಗ್ಲೋಬಲ್ ಟೈಮ್ಸ್ (ಗ್ಲೋಬಲ್ ನ್ಯೂಸ್)ನೊಂದಿಗೆ ಗುರುತಿಸಿಕೊಂಡಿರುವ ಪತ್ರಕರ್ತನ ಹೊಚ್ಚಹೊಸ ಖಾತೆಯು ಕೂಡ ಶಂಕೆಯನ್ನುಂಟು ಮಾಡಿತ್ತು.

ಖಾತೆಯ ಫಾಲೋವರ್ ಗಳೂ ಶಂಕೆಗಳನ್ನೆತ್ತಿದ್ದರು. ಚೀನಿ ಪ್ರಜೆಯೆಂದು ಹೇಳಿಕೊಂಡಿದ್ದ ವ್ಯಕ್ತಿಗೆ ಚೀನಿ ಫಾಲೋವರ್ ಗಳು ಇಲ್ಲದಿರುವುದು, ಆದರೆ ಹೆಚ್ಚಿನ ಫಾಲೋವರ್‌ ಗಳು ಭಾರತೀಯರಾಗಿದ್ದುದು ವಿಚಿತ್ರವಾಗಿತ್ತು. ಅಲ್ಲದೆ ಗ್ಲೋಬಲ್ ಟೈಮ್ಸ್‌ನಿಂದಲೂ ಈ ಪತ್ರಕರ್ತನಿಗೆ ಫಾಲೋವರ್‌ಗಳು ಇರಲಿಲ್ಲ!

ಇದೆಲ್ಲವನ್ನು ಗಮನಿಸಿದ ನಂತರ ಖಾತೆಯ ಪ್ರೊಫೈಲ್ ನಲ್ಲಿದ್ದ ಫೋಟೋ ಯಾವುದೇ ಪತ್ರಕರ್ತನದ್ದಲ್ಲ ಎನ್ನುವುದು ತಿಳಿದುಬಂದಿತ್ತು. ಖಾತೆಯಲ್ಲಿದ್ದ ಫೋಟೊ ಚೀನಾದ ಬಾಲಪ್ರತಿಭೆ ಹುಆಂಗ್ ಯಿಬೊನದ್ದಾಗಿತ್ತು.

ಲಿಜೆಂಗ್ ಮಾಡಿದ್ದ ಟ್ವೀಟ್ ‌ಗಳನ್ನು ಯಾವ ಪ್ರಮುಖ ಹ್ಯಾಂಡಲ್ ರಿಟ್ವೀಟ್‌ ಮಾಡಿತ್ತು ಎನ್ನುವುದನ್ನು ಪತ್ತೆಹಚ್ಚಲು ಆ ಖಾತೆಯಲ್ಲಿನ ಮೊದಲಿನ ಟ್ವೀಟ್‌ ಗಳನ್ನು ಜಾಲಾಡಲಾಯಿತು. ಖಾತೆಯನ್ನು ಜೂ.17ರಂದು ಆರಂಭಿಸಲಾಗಿತ್ತು ಎನ್ನುವುದು ಈಗಾಗಲೇ ಸಾಬೀತಾಗಿದ್ದರಿಂದ ಜೂ.17ರ ಸಂಜೆಯವರೆಗೆ ಈ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದ ಎಲ್ಲ ಟ್ವೀಟ್ ‌ಗಳ ಶೋಧಕ್ಕಾಗಿ ‘ಎಪಾಕ್ ಟೈಮ್ ಕನ್ವರ್ಟರ್’ ಬಳಸಲಾಯಿತು. ‘ಸ್ಮೋಕಿಂಗ್ ಸ್ಕಿಲ್ಸ್’ ಹೆಸರಿನ ಹ್ಯಾಂಡಲ್ ರಾಹುಲ್ ‌ರನ್ನು ಹೊಗಳಿದ್ದ ಟ್ವಿಟ್ ಶೇರ್ ಆದ ಮೂರೇ ನಿಮಿಷಗಳಲ್ಲಿ ಅದನ್ನು ರಿಟ್ವೀಟ್ ಮಾಡಿತ್ತು ಎನ್ನುವುದು ಬೆಳಕಿಗೆ ಬಂದಿತ್ತು.

ಈ ಸ್ಮೋಕಿಂಗ್ ಸ್ಕಿಲ್ಸ್ ಹ್ಯಾಂಡಲ್ ಟ್ರೋಲ್‌ಗಳಿಗಾಗಿ ಕುಖ್ಯಾತವಾಗಿದೆ. ಅದು ತನ್ನ ಗುರುತನ್ನು ಬಹಿರಂಗಗೊಳಿಸಿಲ್ಲ. ಅದು 66,000ಕ್ಕೂ ಅಧಿಕ ಫಾಲೋವರ್‌ ಗಳನ್ನು ಹೊಂದಿದೆ ಮತ್ತು ಅದು ಹೊಸ ಖಾತೆಯಿಂದ ಟ್ವೀಟನ್ನು ಮೂರು ನಿಮಿಷಗಳಿಗೂ ಕಡಿಮೆ ಸಮಯದಲ್ಲಿ ರಿಟ್ವೀಟ್ ಮಾಡಿದ್ದು ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.

ಸ್ಮೋಕಿಂಗ್ ಸ್ಕಿಲ್ಸ್ ಲಿಜೆಂಗ್ ಟ್ವಿಟರ್ ಹ್ಯಾಂಡಲ್‌ನ್ನು ಸೃಷ್ಟಿಸಿತ್ತು ಅಥವಾ ಅದು ಜನಪ್ರಿಯತೆ ಪಡೆದುಕೊಳ್ಳುವಂತೆ ಮಾಡುವುದರ ಹಿಂದಿತ್ತು ಎನ್ನುವುದನ್ನು ಇದು ಸೂಚಿಸುತ್ತದೆ. 2020 ಜೂನ್‌ ನಲ್ಲಿ ಸೃಷ್ಟಿಯಾದ ಗ್ಲೋಬಲ್ ನ್ಯೂಸ್ ಪತ್ರಕರ್ತ ಎಂದು ಗುರುತಿಸಿಕೊಂಡಿರುವ ಈ ಖಾತೆಗೆ ಈವರೆಗೆ ಚೀನಾದಿಂದ ಅಥವಾ ಗ್ಲೋಬಲ್ ನ್ಯೂಸ್‌ ನಿಂದ ಒಬ್ಬನೇ ಒಬ್ಬ ಫಾಲೋವರ್ ಇಲ್ಲ ಎನ್ನುವುದು ಇದೊಂದು ನಕಲಿ ಖಾತೆ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಇದು ಒಂದು ನಿದರ್ಶನ ಮಾತ್ರ. ಭಾರತ-ಚೀನಾ ಗಡಿ ವಿವಾದದ ಬಳಿಕ ಗಣ್ಯ ವ್ತಕ್ತಿಗಳ ಹೆಸರುಗಳಲ್ಲಿ ಇಂತಹ ಹಲವಾರು ನಕಲಿ ಟ್ವಿಟರ್ ಖಾತೆಗಳು ಸೃಷ್ಟಿಯಾಗಿವೆ.

Similar News