ಚೀನಾಕ್ಕೆ ಶರಣಾದ ಮೋದಿ: ಪ್ರಧಾನಿ ಹೇಳಿಕೆ ಖಂಡಿಸಿ ರಾಹುಲ್ ಟ್ವೀಟ್

Update: 2020-06-21 14:49 GMT

 ಹೊಸದಿಲ್ಲಿ,ಜೂ.21: ಗಲ್ವಾನ್ ಕಣಿವೆಯಲ್ಲಿ ಭಾರತೀಯ ಹಾಗೂ ಚೀನಿ ಸೈನಿಕರ ನಡುವೆ ಕಳೆದ ವಾರ ನಡೆದಿದ್ದ ಭೀಕರ ಸಂಘರ್ಷಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಾ ಪ್ರಹಾರ ತೀವ್ರಗೊಳಿಸಿರುವ ರಾಹುಲ್‌ ಗಾಂಧಿ ಅವರು ‘‘ನರೇಂದ್ರ ಮೋದಿ ನಿಜಕ್ಕೂ ಸರೆಂಡರ್ (ಶರಣಾಗತ) ಮೋದಿ’’ ಎಂದು ಟ್ವೀಟಿಸಿದ್ದಾರೆ. ಚೀನಾದ ಬಗ್ಗೆ ಭಾರತದ ಪ್ರಸಕ್ತ ನೀತಿಯ ಕುರಿತಾದ ಲೇಖನವೊಂದನ್ನು ಕೂಡಾ ಅವರು ಜೊತೆಗೆ ಲಗತ್ತಿಸಿದ್ದಾರೆ.

  ಶನಿವಾರ ಕೂಡಾ ಪ್ರಧಾನಿ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದ್ದ ರಾಹುಲ್ ಅವರು, ಭಾರತದ ಪ್ರಾಂತವನ್ನು ಚೀನಾಕ್ಕೆ ಒಪ್ಪಿಸಿದ್ದಾರೆಂದು ಆಪಾದಿಸಿದ್ದರು. ಭಾರತೀಯ ಭೂಪ್ರದೇಶದೊಳಗೆ ಚೀನಿ ಪಡೆಗಳು ಅತಿಕ್ರಮಣ ನಡೆಸಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆಯಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಅವರು ಈ ಆರೋಪ ಮಾಡಿದ್ದರು.

  ‘‘ಪ್ರಧಾನಿಯವರು ಭಾರತದ ಭೂಪ್ರದೇಶವನ್ನು ಚೀನಾದ ಅತಿಕ್ರಮಣಕ್ಕೆ ಒಪ್ಪಿಸಿದ್ದಾರೆ.ಒಂದು ವೇಳೆ ಘರ್ಷಣೆ ನಡೆದ ನೆಲವು ಚೀನಿಯರಿಗೆ ಸೇರಿದ್ದಾಗಿದ್ದರೆ, ಒಂದನೆಯದಾಗಿ ಯಾಕಾಗಿ ನಮ್ಮ ಸೈನಿಕರು ಮಡಿದರು, ಎರಡನೆಯದಾಗಿ ಅವರು ಎಲ್ಲಿ ಸಾವನ್ನಪ್ಪಿದರು’’ ಎಂದು ರಾಹುಲ್ ಶನಿವಾರ ಟ್ವೀಟಿಸಿದ್ದರು.

ರಾಹುಲ್‌ರ ಟ್ವೀಟ್ ಪ್ರಹಾರಕ್ಕೆ ಎದಿರೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕೀಳುಮಟ್ಟದ ರಾಜಕೀಯದಿಂದ ಹೊರಬರುವಂತೆ ಕಿವಿಮಾತು ಹೇಳಿದ್ದಾರೆ ಹಾಗೂ ಇಡೀ ದೇಶವು ಒಗ್ಗಟ್ಟಾಗಿರುವ ಈ ಸಮಯದಲ್ಲಿ ದೇಶದ ಹಿತದೃಷ್ಟಿಯಿಂದ ಏಕತೆಯನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದ್ದಾರೆ.

ಪ್ರಧಾನಿ ಹೇಳಿಕೆ ಸತ್ಯವನ್ನು ಮರೆಮಾಚುವ ಯತ್ನ: ಕಾಂಗ್ರೆಸ್

 ವಾಸ್ತವ ಗಡಿನಿಯಂತ್ರಣ ರೇಖೆಯಲ್ಲಿ ಚೀನಿ ಪಡೆಗಳು ಒಳನುಸುಳುವಿಕೆ ಮಾಡಿಲ್ಲವೆಂಬ ಪ್ರಧಾನಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವೂ ತೀವ್ರವಾಗಿ ಖಂಡಿಸಿದ್ದು, ಇದು ಸತ್ಯವನ್ನು ಮರೆಮಾಚುವ ಕುಂಟು ಪ್ರಯತ್ನವಾಗಿದೆ ಎಂದವರು ಬಣ್ಣಿಸಿದೆ.

     ಮೊದಲನೆಯದಾಗಿ ಗಲ್ವಾನ್ ಕಣಿವೆಯ ಬಗ್ಗೆ ತನ್ನ ನಿಲುವನ್ನು ಪ್ರಧಾನಿ ಕಾರ್ಯಾಲಯವು ಸ್ಪಷ್ಟವಾಗಿ ತಿಳಿಸಬೇಕು. ಗಲ್ವಾನ್ ಕಣಿವೆಯು ಭಾರತೀಯ ಭೂಪ್ರದೇಶದ ಭಾಗವಲ್ಲವೇ?. ಗಲ್ವಾನ್ ಕಣಿವೆಯ ಮೇಲೆ ಚೀನಾದ ಹಕ್ಕೊತ್ತಾಯವನ್ನು ಸರಕಾರವು ಯಾಕೆ ಪ್ರಬಲವಾಗಿ ತಿರಸ್ಕರಿಸುತ್ತಿಲ್ಲ?. ಒಂದು ವೇಳೆ ಅಲ್ಲಿ ಚೀನಿ ಪಡೆಗಳ ಉಪಸ್ಥಿತಿಯಿದ್ದಲ್ಲಿ ಅದು ಭಾರತೀಯ ಭೂಪ್ರದೇಶದ ಮೇಲೆ ನಡೆದ ಅತಿಕ್ರಮಣವಲ್ಲವೇ?. ಅಲ್ಲದೆ, ಕೇಂದ್ರ ಸರಕಾರವು ಪ್ಯಾಂಗೊಂಗ್ ತ್ಸೋ ಪ್ರದೇಶದಲ್ಲಿ ನಡೆದಿರುವ ಅತಿಕ್ರಮಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವು, ಹೇಳಿಕೆಯೊಂದರಲ್ಲಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News