×
Ad

ಗಲ್ವಾನ್ ಘರ್ಷಣೆಯಲ್ಲಿ 20ಕ್ಕೂ ಕಡಿಮೆ ಸೈನಿಕರ ಸಾವು: ಒಪ್ಪಿಕೊಂಡ ಚೀನಾ

Update: 2020-06-22 21:15 IST

ಹೊಸದಿಲ್ಲಿ, ಜೂ.22: ಭಾರತವು 16 ಚೀನಿ ಸೈನಿಕರ ಶವಗಳನ್ನು ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಗೆ ಹಸ್ತಾಂತರಿಸಿರುವ ಕುರಿತು ಭಾರತೀಯ ಮಾಧ್ಯಮಗಳು ರವಿವಾರ ವರದಿ ಮಾಡಿದ್ದ ಬೆನ್ನಲ್ಲೇ ಚೀನಾ ಸೋಮವಾರ ಮೊದಲ ಬಾರಿಗೆ ಗಲ್ವಾನ್ ಘರ್ಷಣೆಗಳಲ್ಲಿ ತನ್ನ ‘20ಕ್ಕೂ ಕಡಿಮೆ’ ಸೈನಿಕರು ಕೊಲ್ಲಲ್ಪಟ್ಟಿರುವುದನ್ನು ಒಪ್ಪಿಕೊಂಡಿದೆ.

ಘರ್ಷಣೆಗಳಲ್ಲಿ ತನ್ನ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತವು ಅಧಿಕೃತವಾಗಿ ಪ್ರಕಟಿಸಿದ್ದರೂ ತನ್ನ ಕಡೆಯ ಸಾವುನೋವುಗಳ ಕುರಿತಂತೆ ಚೀನಾ ಈವರೆಗೆ ಬಾಯಿ ಬಿಟ್ಟಿರಲಿಲ್ಲ.

ಚೀನಾದ ಕಮ್ಯುನಿಸ್ಟ್ ಪಾರ್ಟಿ ಆಡಳಿತದ ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್ ಸೋಮವಾರ ‘ಚೀನಿ ತಜ್ಞ’ರನ್ನು ಉಲ್ಲೇಖಿಸಿ ಪ್ರಕಟಿಸಿರುವ ವರದಿಯಲ್ಲಿ,ಉದ್ವಿಗ್ನತೆ ಇನ್ನಷ್ಟು ಹೆಚ್ಚುವುದನ್ನು ನಿವಾರಿಸಲು ಚೀನಾ ಬಯಸಿದ್ದು ಅದು ಸಾವುನೋವುಗಳ ಸಂಖ್ಯೆಯನ್ನು ಪ್ರಕಟಿಸದ್ದಕ್ಕೆ ಕಾರಣವಾಗಿತ್ತು ಎಂದು ಹೇಳಿದೆ.

20ಕ್ಕೂ ಕಡಿಮೆಯಿರುವ, ಯೋಧರ ಸಾವಿನ ಸಂಖ್ಯೆಯನ್ನು ಚೀನಾ ಪ್ರಕಟಿಸಿದ್ದರೆ ಭಾರತ ಸರಕಾರವು ಮತ್ತೊಮ್ಮೆ ಒತ್ತಡಕ್ಕೆ ಸಿಲುಕುತ್ತಿತ್ತು ಎಂದು ‘ವೀಕ್ಷಕ’ರನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ಹೇಳಿದೆ.

ಭಾರತೀಯ ಅಧಿಕಾರಿಗಳು ರಾಷ್ಟ್ರವಾದಿಗಳನ್ನು ಸಮಾಧಾನಗೊಳಿಸಲು ಚೀನಾ ಭಾರತಕ್ಕಿಂತ ಹೆಚ್ಚಿನ ಸೈನಿಕರನ್ನು ಕಳೆದುಕೊಂಡಿದೆ ಎಂಬಂತಂಹ ಊಹಾಪೋಹಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಚೀನಾದ ಈ ‘ವಿಶ್ಲೇಷಕರು ಮತ್ತು ವೀಕ್ಷಕರು ’ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರನ್ನು ಪ್ರಸ್ತಾಪಿಸಿ ಆರೋಪಿಸಿದ್ದಾರೆ. ಗಲ್ವಾನ್ ಘರ್ಷಣೆಗಳಲ್ಲಿ ಚೀನಾದ 40ಕ್ಕೂ ಅಧಿಕ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಸಿಂಗ್ ರವಿವಾರ ಹೇಳಿದ್ದರು.

ಭಾರತವು ಸ್ವದೇಶದಲ್ಲಿ ಚೀನಾ ವಿರುದ್ಧದ ಭಾವನೆಯನ್ನು ನಿಯಂತ್ರಿಸದಿದ್ದರೆ ಮತ್ತು ತನ್ನೊಂದಿಗೆ ಹೊಸ ಮಿಲಿಟರಿ ಸಂಘರ್ಷವನ್ನು ಹೊಂದಿದ್ದರೆ ಅದು 1962ರ ನಂತರದ ಇನ್ನಷ್ಟು ಮುಖಭಂಗವನ್ನು ಅನುಭವಿಸಬೇಕಾಗುತ್ತದೆ ಎಂದು ಬೀಜಿಂಗ್‌ನಲ್ಲಿಯ ‘ವಿಶ್ಲೇಷಕರು’ ಬೆದರಿಕೆಯೊಡ್ಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಮಾತುಗಳಿಂದ ರಾಷ್ಟ್ರವಾದಿಗಳು ಮತ್ತು ಕಟ್ಟರ್‌ವಾದಿಗಳನ್ನು ತೃಪ್ತಿಗೊಳಿಸಲು ಪ್ರಯತ್ನ್ನಿಸುತ್ತಿದ್ದಾರೆ. ಆದರೆ ತನ್ನ ದೇಶವು ಚೀನಾದೊಂದಿಗೆ ಇನ್ನಷ್ಟು ಸಂಘರ್ಷ ಹೊಂದಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿದೆ, ಹೀಗಾಗಿ ಅವರು ಉದ್ವಿಗ್ನತೆಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News