×
Ad

ಏಳು ದಿನದೊಳಗೆ ಪಾಕ್ ಹೈಕಮಿಷನ್ ಸಿಬ್ಬಂದಿ ಅರ್ಧದಷ್ಟು ಕಡಿತಗೊಳಿಸಲು ಭಾರತ ಸೂಚನೆ

Update: 2020-06-24 10:58 IST

ಹೊಸದಿಲ್ಲಿ : ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿಯನ್ನು ಒಂದು ವಾರದೊಳಗೆ ಶೇಕಡ 50ರಷ್ಟು ಕಡಿತಗೊಳಿಸುವಂತೆ ಭಾರತ, ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಮಿಷನ್ ಸಿಬ್ಬಂದಿಯ ಪೈಕಿ ಶೇಕಡ 50ರಷ್ಟು ಮಂದಿಯನ್ನೂ ವಾಪಾಸು ಕರೆಸಿಕೊಳ್ಳುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಉಭಯ ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿರುವ ನಡುವೆಯೇ ಭಾರತ ಈ ಸೂಚನೆ ನೀಡಿದೆ.

ಪಾಕಿಸ್ತಾನದ ಚಾರ್ಜ್ ಡಿ ಅಫೇರ್ಸ್‌ ಅಧಿಕಾರಿಯನ್ನು ಮಂಗಳವಾರ ಬೆಳಗ್ಗೆ ಕರೆಸಿಕೊಂಡು, ಪಾಕ್ ಸಿಬ್ಬಂದಿ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ಹಾಗೂ ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಬಗ್ಗೆ ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ನಡವಳಿಕೆಯು ರಾಜತಾಂತ್ರಿಕ ಸಿಬ್ಬಂದಿಗೆ ಸಂಬಂಧಿಸಿದ ವಿಯೆನ್ನಾ ಒಪ್ಪಂದದ ಅಂಶಗಳು ಹಾಗೂ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿಲ್ಲ. ಇದಕ್ಕೆ ವಿರುದ್ಧವಾಗಿ ಗಡಿಯಾಚೆಗಿನ ಹಿಂಸೆ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವ ಕಾರ್ಯವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News